ಮಂಗಳೂರು ನಗರ ಪೊಲೀಸ್ ಕಮಿಷನರ್ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ 31 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್ ಹಳೆಯಂಗಡಿಯ ಕೊಪ್ಪಳ ಹೌಸ್ ನ ಸಫ್ವಾನ್ ಅಹಮ್ಮದ್ ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಸಫ್ವಾನ್ ಅಹಮ್ಮದ್ ಮೇಲೆ 2 ಕೊಲೆ, 4 ಕೊಲೆಯತ್ನ, ಗ್ಯಾಂಗ್ ರೇಪ್, 5 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ಸಂಚು ಸೇರಿದಂತೆ 31 ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಈತನ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2008 ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2020 ರಲ್ಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008 ರಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈತನ ವಿರುದ್ಧ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

2017 ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಲೆಪ್ಪಿ ಸಫ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ಈತ ನೇರ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಬಳಿಕ ಆಂಧ್ರಪ್ರದೇಶದಲ್ಲಿ ತನ್ನ ಗುರುತನ್ನು ಬದಲಾಯಿಸಿಕೊಂಡು ಉಮ್ಮರ್ ಮುಹಮ್ಮದ್ ನಾಸೀರ್ ಎಂದು ತಿರುಗಾಡಿಕೊಂಡಿದ್ದ. ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮಾಡಿಸಿಕೊಂಡು 2016 ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ವಿದೇಶದಲ್ಲಿದ್ದುಕೊಂಡು ಮಂಗಳೂರು ಮೂಲದ ಉದ್ಯಮಿಗಳಿಗೆ ಹಫ್ತಕ್ಕಾಗಿ ಬೆದರಿಕೆ ಹಾಕಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.
ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಸಫ್ವಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ರಾಯಚೋಟಿಯಿಂದ ಬಂಧಿಸಿ ಮಂಗಳೂರಿಗೆ ಕರೆತಂದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತನ್ನ ಐಡೆಂಟಿಟಿ ಮರೆಮಾಚಿ ಡೂಪ್ಲಿಕೇಟ್ ಹೆಸರಿನೊಂದಿಗೆ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಮಾಡಿಸಿಕೊಟ್ಟು ಸಹಕರಿಸಿದವರ ವಿವರವನ್ನು ಸಿಸಿಬಿ ಪೊಲೀಸರು ಪಡೆಯುತ್ತಿದ್ದು, ಅವರ ಬೆನ್ನ ಹಿಂದೆ ಬಿದ್ದಿದ್ದಾರೆ.
ಈತನ ನಡೆಸಿದ ಅಪರಾಧ ಪ್ರಕರಣಗಳು; ಮಂಗಳೂರು ನಗರ ಕಮೀಷನರೇಟ್ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 31 ಪ್ರಕರಣಗಳು ದಾಖಲು.
13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. 2 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ನಕಲಿ ದಾಖಲೆಗಳ ಬಳಸಿ 2017ರಲ್ಲಿ ಹನೀಫ್ ಮಲಾರ್ ಎಂಬಾತನ ಸಹಾಯದಿಂದ ಮೈಸೂರು ವಿಳಾಸದಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದನು. ನಂತರ ಅದನ್ನು ರಾಯಚೋಟಿ (ಆಂಧ್ರಪ್ರದೇಶ) ವಿಳಾಸಕ್ಕೆ ಬದಲಾಯಿಸಿಕೊಂಡಿದ್ದನು. ಅಲ್ಲಿಯೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದನು. ಮುಜೀಬ್ ಎಂಬಾತನ ಮೂಲಕ ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದನು. ಸುರತ್ಕಲ್ ಪ್ರಕರಣದ ನಂತರ, 2017ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಲೆಪ್ಟಿ ಸಫ್ವಾನ್ ಅಪಹರಣ ಮತ್ತು ಕೊಲೆ ಪ್ರಕರಣದ ನಂತರ ತಲೆಮರೆಸಿಕೊಂಡಿದ್ದನು. ಬಳ್ಳಾರಿ ಕಾರಾಗೃಹದಲ್ಲಿದ್ದಾಗ ಪರಿಚಯವಾದ ಕೊಟ್ರೇಶಿ @ ಸೂಫಿಯಾನ್ ಮಾರ್ಗದರ್ಶನದ ಮೇರೆಗೆ ಆಂಧ್ರಪ್ರದೇಶದ ರಾಯಚೋಟಿಗೆ ತೆರಳಿ, ಸುಮಾರು ಒಂದು ವರ್ಷ ಅಲ್ಲಿ ಶಂಶುದ್ದೀನ್ ಮುಕ್ಕ ಹಾಗೂ ಸೂಫಿಯಾನ್ ಜೊತೆ ಬೀದಿ ಬದಿ ಕ್ಯಾಂಟೀನ್ ನಡೆಸುತ್ತಿದ್ದನು.
ವಿದೇಶ ಪ್ರಯಾಣ: 2018ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಸೌದಿ ಅರೇಬಿಯಾಗೆ ತೆರಳಿ ಒಂದು ತಿಂಗಳು ಕೂಲಿ ಕೆಲಸ ಮಾಡಿದ್ದನು. ನಂತರ ವೀಸಾವನ್ನು ಹೌಸ್ ಡ್ರೈವಿಂಗ್ ವೀಸಾಗೆ ಬದಲಾಯಿಸಿಕೊಂಡು ಅಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದನು. 8 ತಿಂಗಳ ನಂತರ ರಾಯಚೋಟಿಗೆ ವಾಪಸ್ಸು ಬಂದಿದ್ದನು. ರಾಯಚೋಟಿಯ ಇಸ್ಮಾಯಿಲ್ ಅವರ ಮಗಳು ರೇಶ್ಮಾ ಸುಲ್ತಾನಾ ಜೊತೆ 2021 ರಲ್ಲಿ ಮದುವೆ ಆಗಿದ್ದನು. ಮದುವೆ ಸಂದರ್ಭದಲ್ಲಿ ಈತನ ತಂದೆ-ತಾಯಿ ಹಾಗೂ ತಮ್ಮ ಸುಜಾನ್ ಹಾಜರಿದ್ದರು.
