ನ್ಯಾಯಾಧೀಶರೇ ಆಗಿರಲಿ, ಇಲ್ಲವೇ ಜಿಲ್ಲಾಧಿಕಾರಿಗಳೇ ಆಗಿರಲಿ, ಮಾಹಿತಿ ಹಕ್ಕು ಕಾಯಿದೆ ಮುಂದೆ ಯಾರೂ ದೊಡ್ಡವರಲ್ಲ. ಇದನ್ನು ಗುಜರಾತ್ ಮಾಹಿತಿ ಆಯೋಗವು (GIC) ಮತ್ತೊಮ್ಮೆ ಸಾಬೀತುಪಡಿಸಿದೆ. ಮೆಹಸಾನಾ ಜಿಲ್ಲೆಯ ಮುಖ್ಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಾಹಿತಿ ನೀಡಲು ವಿಳಂಬ ಮಾಡಿದ್ದಕ್ಕಾಗಿ, ಗುಜರಾತ್ ಮಾಹಿತಿ ಆಯೋಗವು ಅವರಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.
ನಿಗದಿತ ಹೊತ್ತಿನಲ್ಲಿ ಮಾಹಿತಿ ನೀಡದಿದ್ದರೆ, ಸೆಕ್ಷನ್ 20 ರ ಅಡಿಯಲ್ಲಿ ನಿಮ್ಮ ಮೇಲೆ ಯಾಕೆ ಶಿಸ್ತು ಕ್ರಮ ಜರುಗಿಸಬಾರದು ಮತ್ತು ದಂಡ ವಿಧಿಸಬಾರದು ಎಂದು ಆಯೋಗವು ನ್ಯಾಯಾಧೀಶರನ್ನೇ ಪ್ರಶ್ನಿಸಿದೆ. ವಿಚಾರಣೆಗೆ 03/03/2026 ರಂದು ಬೆಳಿಗ್ಗೆ 10:45 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಆದೇಶಿಸಿದೆ. ವಿಚಾರಣೆಗೆ 72 ಗಂಟೆಗಳ ಮೊದಲು ತಮ್ಮ ವರದಿಯನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಕಠಿಣ ಕ್ರಮ ಗ್ಯಾರಂಟಿ ಎಂದಿದೆ.
ಆರ್ಟಿಐ ಬಳಕೆದಾರರೇ, ಎದೆಗುಂದಬೇಡಿ ಅಧಿಕಾರಿಗಳು ಮಾಹಿತಿ ನೀಡಲು ಸತಾಯಿಸಿ ಅಲೆದಾಡಿಸುತ್ತಿದ್ದಾರೆಯೇ? ನೆನಪಿಡಿ, ಈ ಕಾಯಿದೆ ನಮ್ಮ ಕೈಯಲ್ಲಿರುವ ಬ್ರಹ್ಮಾಸ್ತ್ರ. ಅರ್ಜಿ ಸಲ್ಲಿಸಿ 30 ದಿನ ಕಳೆದರೆ ಅದು ‘ಮೌನ ನಿರಾಕರಣೆ’. ಕೂಡಲೇ ಮೊದಲ ಮೇಲ್ಮನವಿ ಸಲ್ಲಿಸಿ. ಅಲ್ಲಿಯೂ ನ್ಯಾಯ ಸಿಗದಿದ್ದರೆ ರಾಜ್ಯ ಮಾಹಿತಿ ಆಯೋಗದ ಕದ ತಟ್ಟಿ. ಗುಜರಾತ್ನ ಈ ಪ್ರಕರಣವು ದೊಡ್ಡ ಉರುಪು. ಉನ್ನತ ಮಟ್ಟದ ನ್ಯಾಯಾಂಗ ಅಧಿಕಾರಿಗಳೇ ಉತ್ತರದಾಯಿಗಳಾಗಿರುವಾಗ, ಇನ್ನುಳಿದ ಇಲಾಖೆಗಳ ಭ್ರಷ್ಟರು ಎಷ್ಟರ ಮಟ್ಟಿಗೆ ಜಾಗರೂಕರಾಗಿರಬೇಕು ಎಂದು ಯೋಚಿಸಿ.
