ಹಿರಿಯ ಕಲಾವಿದ ಲಿಯಾಕತ್ ಆಲಿ ನಿಧನ; ಕ.ಸಾ.ಪ ವತಿಯಿಂದ ಶ್ರದ್ಧಾಂಜಲಿ ಸಭೆ.

ರಾಜ್ಯ

ಮಡಿಕೇರಿಯ ಹಿಲ್ ರೋಡ್ ನಿವಾಸಿಯಾದ ಮಡಿಕೇರಿ ಹಿಂದಿನ ಪುರಸಭೆಯ ಮಾಜಿ ಉಪಾಧ್ಯಕ್ಷ ಲಿಯಾಕತ್ ಆಲಿ (69) ಇಂದು ಬೆಳಗಿನ ಜಾವ 3 ಗಂಟೆಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ನಿಧನದಿಂದ ಜಿಲ್ಲೆಯ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಇಂದು (15.03.2026) ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಮಧ್ಯಾಹ್ನ ಸಭೆ ನಡೆಯಿತು.

ಕೊಡಗಿನ ಹಿರಿಯ ಕಲಾವಿದರಾದ ಇವರು ಉತ್ತಮ ಗಾಯಕರಾಗಿದ್ದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ವಿಶೇಷ ಅಹ್ವಾನಿತ ನಿರ್ದೇಶಕರಾಗಿದ್ದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನಿರ್ದೇಶಕರಾಗಿದ್ದು, ಹಲವು ಸ್ವಯಂ ಸೇವಾ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದರು. ಗೋಕಾಕ್ ಚಳುವಳಿ ಸೇರಿದಂತೆ ಹಲವು ಕನ್ನಡಪರ ಚಳುವಳಿಯಲ್ಲಿ ಕೂಡ ಇವರು ಭಾಗಿಯಾಗಿದ್ದರು.

ಮಡಿಕೇರಿಯ ರಾಜ ಸೀಟಿಗೆ ಹೋಗುವ ಮಾರ್ಗದಲ್ಲಿ ಸ್ಥಾಪಿಸಲಾದ ಕುವೆಂಪು ಅವರ ಪುತ್ತಳಿ ಅನಾವರಣಕ್ಕೆ ಲಿಯಾಕತ್ ಆಲಿ ಅವರ ಪ್ರಯತ್ನದ ಫಲವಾಗಿ ಸ್ಥಾಪಿಸಲಾಗಿತ್ತು. ಜಿಲ್ಲಾ ಜೆಡಿಎಸ್ ಪಕ್ಷದ ಪದಾಧಿಕಾರಿಯಾಗಿ, ಮಾಜಿ ಸಚಿವರಾದ ಎಂ. ಸಿ ನಾಣಯ್ಯನವರ ಕಟ್ಟಾ ಬೆಂಬಲಿಗರಾಗಿದ್ದ ಇವರು ಸರಳ ಸಜ್ಜನಿಕೆಯ ಸ್ನೇಹಜೀವಿಯಾಗಿದ್ದರು. ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 4 ಗಂಟೆಗೆ ಮಡಿಕೇರಿಯ ರಾಣಿ ಪೇಟೆಯಲ್ಲಿರುವ ಖಬರಸ್ಥಾನದಲ್ಲಿ ನಡೆಸಲಾಯಿತು.