ಅಭ್ಯರ್ಥಿತನಕ್ಕೆ ಟವೆಲ್ ಹಾಕಿ ಕೂತವರು ಯಾರು ಗೊತ್ತೇ..? ಬಂಟ್ವಾಳದ ಬಿಜೆಪಿ ಚಿತ್ತ ಎತ್ತ.!
ಶಿಸ್ತಿನ ಪಕ್ಷ ಎಂದು ಸ್ವಯಂಗೊಶಿಸಿಕೊಂಡಿರುವ ಬಿಜೆಪಿಯಲ್ಲಿ ಅಶಿಸ್ತು ಮೇಳೈಸುತ್ತಿದೆ. ಹಾಲಿ ಶಾಸಕರು ಇರುವಾಗಲೇ ಬಿಜೆಪಿಯಲ್ಲಿ ಮುಂದಿನ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾ ತಿರುಗಾಡುವವರ ಸಂಖ್ಯೆ ಬೆಳೆಯುತ್ತಿದೆ. ಸಂಘ ಕಲಿಸಿದ ಶಿಸ್ತು ಮರೆಯಾಗಿ ಅಧಿಕಾರವೇ ಮುಖ್ಯವಾಯಿತಲ್ಲ ಅನ್ನುವ ಮಾತುಗಳು ಬಿಜೆಪಿಯ ನಿಷ್ಠಾವಂತರೊಳಗಡೆ ಕೇಳಿ ಬರುತ್ತಿದೆ. ಬಂಟ್ವಾಳ ಬಿಜೆಪಿ ಪಡಸಾಲೆಯಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ಶಾಸಕ ರಾಜೇಶ್ ನಾಯಕರು ಈ ರಾಜಕಾರಣದ ಸಹವಾಸವೇ ಬೇಡಪ್ಪ.. ಸಾಕೆಂದು ಬೇಸರ ವ್ಯಕ್ತಪಡಿಸಿದ್ದು, ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಆದರೆ ಬಿಜೆಪಿ ಕಾರ್ಯಕರ್ತರು ರಾಜೇಶ್ ನಾಯಕ್ ಪರ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕಾರ್ಯಕರ್ತರ ಒತ್ತಾಸೆಗೆ ಮಣಿದಿರುವ ರಾಜೇಶ್ ನಾಯಕ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ರಾಜೇಶ್ ನಾಯಕರಿಗೆ ವಿಜಯೇಂದ್ರರ ಬೆಂಬಲವೂ ಇದೆ. ರಾಜೇಶ್ ನಾಯಕ್ ಒಬ್ಬ ನಿಯತ್ತಿನ ಮನುಷ್ಯ, ಉತ್ತಮ ರಾಜಕಾರಣಿ ಎಂದು ಎಲ್ಲಾ ಜಾತಿ ಬಾಂಧವರು ಒಪ್ಪಿಕೊಳ್ಳುತ್ತಾರೆ.

ರಾಜೇಶ್ ನಾಯಕ್ ಕಾಲಿಗೆ ಚಕ್ರ ಕಟ್ಟಿದಂತೆ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡುತ್ತಾ, ಶಂಕುಸ್ಥಾಪನೆ, ಬ್ರಹ್ಮಕಲಶ ಇನ್ನಿತರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಂಡಲದ ಅಧ್ಯಕ್ಷ ಭಟ್ಟರ ಚೇಲ ಕೋಟ್ಯಾನ್ ಭಟ್ಟರ ಅಣತಿಯಂತೆ ಪರೋಕ್ಷವಾಗಿ ರಾಜೇಶ್ ನಾಯ್ಕರ ರಾಜಕೀಯವನ್ನು ಮುಗಿಸಲು ಸಂಚು ನಡೆಸಿದ್ದು, ಅದಕ್ಕಾಗಿಯೇ ಮಂಗಳೂರಿನ ಅಗ್ರಜ ಬಿಲ್ಡರ್ ನ ಮಾಲಕ ಸಂದೇಶ್ ಶೆಟ್ಟಿಯನ್ನು ಮುಂದಿನ ಅಭ್ಯರ್ಥಿ ಮಾಡುತ್ತೇನೆಂದು ಕ್ಷೇತ್ರಾದ್ಯಂತ ಸುತ್ತಾಡಿಸುತ್ತಿದ್ದಾರೆ. ಬಂಟ್ವಾಳದಲ್ಲಿ ಪಕ್ಷಕ್ಕಾಗಿ ದುಡಿಯಲು ನಿಷ್ಠಾವಂತ ಕಾರ್ಯಕರ್ತರು ಬೇಕು, ಆದರೆ ಚುನಾವಣೆಗೆ ಅಭ್ಯರ್ಥಿಯಾಗುವವರು ಕಲ್ಲಡ್ಕದ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡುವವರು ಬೇಕು.! ಆದರೆ ಬಂಟ್ವಾಳದ ಹಲವಾರು ನಾಯಕರು, ಕಾರ್ಯಕರ್ತರು ಭಟ್ಟರ ಆಟಕ್ಕೆ ಬೆಲೆ ಕೊಡುವುದಿಲ್ಲ. ರಾಜೇಶ್ ನಾಯಕರೇ ನಿಲ್ಲಬೇಕೆಂದು ಹಠ ಹಿಡಿದ ಕಾರ್ಯಕರ್ತರು ಪ್ರಚಾರ ಶುರು ಮಾಡಿದ್ದಾರೆ.
ಒಂದು ವೇಳೆ ಭಟ್ಟರ ಹಠವೇ ಗೆದ್ದುಬಿಟ್ಟರೆ, ರಾಜೇಶ್ ನಾಯಕ್ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ ಬಿಜೆಪಿಯಲ್ಲಿ ಈಗಾಗಲೇ ಹಲವಾರು ಮಂದಿ ಟವೆಲ್ ಹಾಕಿಕೊಂಡು ಅಭ್ಯರ್ಥಿತನಕ್ಕೆ ದುಂಬಾಲು ಬಿದ್ದಿದ್ದಾರೆ. ಅವರಲ್ಲಿ ಬಂಟರೇ ಪ್ರಮುಖರು. ಈ ಲೀಸ್ಟ್ ನಲ್ಲಿ ಕೇಳಿ ಬರುತ್ತಿರುವ ಪ್ರಮುಖರ ಹೆಸರುಗಳೆಂದರೆ ಸಂದೇಶ್ ಶೆಟ್ಟಿ (ಅಗ್ರಜ ಬಿಲ್ಡರ್) ಮಂಗಳೂರು, ಪುಳಿಂಚ ಶ್ರೀಧರ್ ಶೆಟ್ಟಿ, ಸುಕೇಶ್ ಚೌಟ ಅಮ್ಮುಂಜೆ, ರಶ್ಮಿತ್ ಶೆಟ್ಟಿ ಸಿದ್ಧಕಟ್ಟೆ ಇನ್ನೂ ಮಾರುದ್ದದ ಲೀಸ್ಟ್ ಬೆಳೆಯುತ್ತಿದೆ.

ಒಂದು ವೇಳೆ ಕಾಂಗ್ರೆಸ್ ನಲ್ಲಿ ಬಂಟರ ಬದಲು ಬಿಲ್ಲವ ಅಭ್ಯರ್ಥಿಗೆ ಮಣೆ ಹಾಕಿದರೆ ಬಿಜೆಪಿಯಲ್ಲೂ ಕಣಕ್ಕಿಳಿಯಲು ಸಮರ್ಥ ಬಿಲ್ಲವ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಮಾಜಿ ಶಾಸಕ ಎ. ರುಕ್ಮಯ್ಯ ಪೂಜಾರಿ ಇಲ್ಲವೇ ಅವರ ಪುತ್ರ ಯತೀನ್ ಪೂಜಾರಿ ಏಳ್ತಿಮಾರ್. ತುಂಗಪ್ಪ ಬಂಗೇರಾ ಅಥವಾ ತೋಟ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ. ಇದಲ್ಲದೆ ಹಿಂದುಳಿದ ವರ್ಗದ ಹಲವಾರು ಪ್ರಮುಖ ನಾಯಕರು ಕೂಡ ಒಂದು ಕೈ ನೋಡೋಣ ಎಂದು ತೀರ್ಮಾನಿಸಿದಂತಿದೆ. ಹಿಂದುಳಿದ ವರ್ಗದ ಪೈಕಿ ರಾಮದಾಸ್ ಬಂಟ್ವಾಳ (ದೇವಾಡಿಗ), ಮಾಧವ ಮಾವೆ (ಗಾಣಿಗ), ವಿಕಾಸ್ ಕುಮಾರ್ ಪಿ. ಅವರ ಹೆಸರುಗಳು ಜೋರಾಗಿ ಕೇಳಿ ಬರುತ್ತಿದೆ. ಇದೀಗ ಎಲ್ಲರ ಚಿತ್ತ ಬಂಟ್ವಾಳದ ಬಿಜೆಪಿಯತ್ತ ತಿರುಗಿದೆ.
