ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ: ಆರೋಪಿಗಳು ಪರಾರಿ, ಸ್ವತ್ತು ವಶ, ಪ್ರಕರಣ ದಾಖಲು

ಕರಾವಳಿ

ಎಡಪದವು ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ನಾಲ್ಕು ದನಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬಜಪೆ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುತ್ತಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಚ್ 18 ರಂದು ಮುಂಜಾನೆ 4:45 ರ ವೇಳೆಗೆ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ದನಕಳವು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಜಪೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ಫಾರ್ಚೂನರ್ ಕಾರಿನಲ್ಲಿ ದನಗಳನ್ನು ತುಂಬಿಸುತ್ತಿದ್ದರು. ಪೊಲೀಸರನ್ನು ಕಂಡು ಆರೋಪಿಗಳು ಕಾರನ್ನು ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದು, ಪೊಲೀಸರು ಬೆನ್ನಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಫಾರ್ಚೂನರ್ ಕಾರಿನಲ್ಲಿ 4 ದನವನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿದ್ದಾರೆ. ಕಾರನ್ನು ಠಾಣೆಗೆ ತಂದು, ದನಕ್ಕೆ ಕಟ್ಟಿದ ಹಗ್ಗವನ್ನು ಕಾರಿನಿಂದ ಇಳಿಸಲಾಗಿದೆ.

ಪಣಂಬೂರು ಎ.ಸಿ.ಪಿ ಶ್ರೀಕಾಂತ್ ರವರ ಮಾರ್ಗದರ್ಶನದಲ್ಲಿ, ಬಜಪೆ ಠಾಣಾ ಇನ್ಸ್ ಪೆಕ್ಟರ್ ಬಾಲಕೃಷ್ಣರವರು ಹಾಗೂ ಠಾಣಾ ಸಿಬ್ಬಂದಿಗಳು ಆರೋಪಿಗಳಿಂದ ದನ ಸಾಗಾಟಕ್ಕೆ ಬಳಸಿದ್ದ ಪಾರ್ಚೂನರ್ ಕಾರು, 4 ದನಗಳು, ಒಂದು ತಲವಾರು, ಕಬ್ಬಿಣದ ರಾಡ್, ನೈಲಾನ್ ಹಗ್ಗಗಳು ಸೇರಿದಂತೆ ಒಟ್ಟು 8.42 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.