ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಜೀವ ಬೆದರಿಕೆ ಪ್ರಕರಣ: ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ ಎಂಬಾತನಿದೆ 20 ವರ್ಷಗಳ ಕಠಿಣ ಸಜೆ ಹಾಗೂ ದಂಡ

ಕರಾವಳಿ

ಮಂಗಳೂರು ತಾಲೂಕಿನ ಕುಂಜತ್ತಬೈಲು ದೇವಿನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ ಎಂಬಾತ 2024ನೇ ಇಸವಿಯ ಫೆಬ್ರವರಿ ತಿಂಗಳಿನಿಂದ ನೊಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಆಕೆಯ ಮನವೊಲಿಸಿ, ನೊಂದ ಅಪ್ರಾಪ್ತ ಬಾಲಕಿ ವಾಸವಾಗಿದ್ದ ಶಕ್ತಿ ನಗರದ ಮನೆಯಲ್ಲಿ 2024 ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ ಹಾಗೂ ಅಳಪೆ ಗ್ರಾಮದ ಕೆಂಬಾರು ಕೆ.ಇ.ಬಿ. ಮುಂಭಾಗವಿರುವ ಮನೆಯೊಂದಲ್ಲಿ ಹಲವಾರು ಬಾರಿ ಪದೇ ಪದೇ ಅತ್ಯಾಚಾರ ನಡೆಸಿದ್ದು, ಮಾತ್ರವಲ್ಲದೆ ಬಾಲಕಿ ಸ್ನಾನ ಗೃಹದಲ್ಲಿ ನಗ್ನ ಸ್ಥಿತಿಯಲ್ಲಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಆರೋಪಿ ವೀಡಿಯೊ ರೆಕಾರ್ಡ್ ಮಾಡಿ ತನ್ನ ಮೊಬೈಲ್ ನಲ್ಲಿ ಬಾಲಕಿಯ ನಗ್ನ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡು, ಮುಂದೆ ದೈಹಿಕ ಸಂಪರ್ಕಕ್ಕೆ ಬಾರದೇ ಇದ್ದರೆ ಆಕೆಯ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಬಾಲಕಿಯ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದನು.

ಈ ಬಗ್ಗೆ ನೊಂದ ಬಾಲಕಿ ನೀಡಿರುವ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 130/2025 ರಂತೆ ಪ್ರಕರಣದ ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ ಎಂಬಾತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಕಂಕನಾಡಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ರವರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಪ್ರಬಲವಾದ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿ ಸೋನು ಮ್ಯಾಕ್ಲಿನ್ ನೊರೊನ್ಹ ಎಂಬಾತನಿಗೆ 20 ವರ್ಷ ಕಠಿಣ ಕಾರವಾಸ ಹಾಗೂ 50 ಸಾವಿರ ರೂ. ದಂಡ ಹಾಗೂ ಮತ್ತೊಂದು ಕಾಯ್ದೆಯಡಿ ಒಂದು ವರ್ಷ ಜೈಲು, 5 ಸಾವಿರ ರೂ ದಂಡ, ಕಲಂ 15 Posco ಕಾಯ್ದೆಯಡಿ ಒಂದು ವರ್ಷ ಸಜೆ, 5 ಸಾವಿರ ರೂ. ದಂಡ, IT Act ಕಾಯ್ದೆಯಡಿ ಒಂದು ವರ್ಷಗಳ ಶಿಕ್ಷೆ 5 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿರುತ್ತಾರೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಸಹನಾ ದೇವಿರವರು ಸಮರ್ಥವಾಗಿ ವಾದಿಸಿದ್ದರು.