“ಯಾರನ್ನೂ ಬೆಳೆಯಲು ಬಿಡದ ರಾಜಕೀಯ.?” ಮಾಜಿ ಸಚಿವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಬಹಿರಂಗ

ಕರಾವಳಿ

ಬಂಟ್ವಾಳ ರಾಜಕೀಯ ವಲಯದಲ್ಲಿ ಮಾಜಿ ಸಚಿವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಮತ್ತೆ ಬಯಲಾಗುತ್ತಿದೆ. “ಯಾರನ್ನೂ ಬೆಳೆಯಲು ಬಿಡದ ರಾಜಕೀಯ” ಎಂಬ ಆರೋಪಗಳು ಮತ್ತೆ ಕೇಳಿಬರುತ್ತಿದ್ದು, ಕೆಲ ಕಾರ್ಯಕರ್ತರು ತಮ್ಮ ನೋವು ಮತ್ತು ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಸಚಿವರೊಬ್ಬರ ಅನುಯಾಯಿಗಳು ಈ ಆರೋಪಗಳನ್ನು “ಕಟ್ಟುಕಥೆ” ಎಂದು ತಳ್ಳಿ ಹಾಕಿದರೂ, ಪಕ್ಷದ ಒಳಗಡೆ ಹಲವು ವರ್ಷಗಳಿಂದ ಒತ್ತಡದ ವಾತಾವರಣ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಹಳೆಯ ನಾಯಕರ ಉದಾಹರಣೆಗಳು ಮತ್ತೆ ಚರ್ಚೆಗೆ
ಪಕ್ಷದೊಳಗಿನ ಅಸಮಾಧಾನವನ್ನು ವಿವರಿಸುವ ಸಂದರ್ಭದಲ್ಲಿ ಕಾರ್ಯಕರ್ತರು ಕೆಲವು ಹಿರಿಯ ನಾಯಕರ ಉದಾಹರಣೆಗಳನ್ನು ಮುಂದಿಟ್ಟಿದ್ದಾರೆ. ತಮ್ಮದೇ ಸಮುದಾಯದ ಬಲಿಷ್ಠ ನಾಯಕನಾಗಿದ್ದ ಸದಾನಂದ ಪೂಂಜಾ ಅವರ ಮಾತುಗಳು ಇನ್ನೂ ಕಾರ್ಯಕರ್ತರ ಕಿವಿಯಲ್ಲಿ ಮರುನಾದಿಸುತ್ತಿವೆ ಎಂದು ಹೇಳಲಾಗುತ್ತಿದೆ. “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ” ಎಂಬ ರೀತಿಯಲ್ಲಿ ವ್ಯಕ್ತವಾದ ಅವರ ಅಸಮಾಧಾನ ಇಂದಿಗೂ ಹಲವರ ನೆನಪಿನಲ್ಲಿ ಜೀವಂತವಾಗಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ.

ಹಿರಿಯ ಮುಖಂಡರ ನೋವು ಮರೆಯದ ಕಾರ್ಯಕರ್ತರು
ಹಿರಿಯ ಮುಖಂಡರಾದ ಬೊಂಡಾಲ ಜಗ್ಗನ್ನಾಥ ಶೆಟ್ಟಿ ಅನುಭವಿಸಿದ ನೋವು ಹಾಗೂ ಕೊನೆಯ ದಿನಗಳಲ್ಲಿ ಬೊಳಂತೂರು ಚಂದ್ರಹಾಸ ಶೆಟ್ಟಿ ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಕಾರ್ಯಕರ್ತರು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿ ಅವರು ವ್ಯಕ್ತಪಡಿಸಿದ್ದ ಬೇಸರವನ್ನು ಪಕ್ಷದ ಕಾರ್ಯಕರ್ತರು ಇನ್ನೂ ಮರೆತಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.

ಬಿ.ಸಿ.ರೋಡ್‌ನಲ್ಲಿ ಕೇಳಿಬಂದ ಆರೋಪಗಳು
ಇನ್ನೊಂದೆಡೆ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಸದಾನಂದ ಮಲ್ಲಿ ಅವರು ಮಾಜಿ ಸಚಿವರ ವಿರುದ್ಧ ವ್ಯಕ್ತಪಡಿಸಿದ್ದ ಆರೋಪಗಳೂ ಮತ್ತೆ ಚರ್ಚೆಗೆ ಬಂದಿವೆ. “ನಮ್ಮ ಏಳಿಗೆಯನ್ನು ಸಹಿಸಲಾಗದೆ ಅನ್ಯಾಯ ಮಾಡಲಾಗುತ್ತಿದೆ” ಎಂಬ ಮಾತುಗಳು ಆ ವೇಳೆ ಕೇಳಿಬಂದಿದ್ದವು ಎಂದು ಕಾರ್ಯಕರ್ತರು ನೆನಪಿಸುತ್ತಿದ್ದಾರೆ. ಆ ಘಟನೆಗಳು ಬಂಟ್ವಾಳ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದವು ಎಂಬ ಮಾತುಗಳು ಕೇಳಿಬರುತ್ತಿವೆ.

ಅಶ್ವಿನಿ ಕುಮಾರ್ ರೈ ತ್ಯಾಗವನ್ನು ನೆನಪಿಸಿದ ಕಾರ್ಯಕರ್ತರು
ಮಾಜಿ ಸಚಿವರು ಅಶ್ವಿನಿ ಕುಮಾರ್ ರೈ ಅವರ ತಂದೆಯವರ ಕಾಲದಿಂದಲೇ ಅವರ ಮನೆಯೊಂದಿಗೆ ಆಪ್ತ ಸಂಬಂಧ ಹೊಂದಿದ್ದು, ಆ ಕುಟುಂಬದ ಬೆಂಬಲದಲ್ಲೇ ರಾಜಕೀಯವಾಗಿ ಬೆಳೆಯುವ ಅವಕಾಶ ಪಡೆದಿದ್ದರು ಎಂಬ ಮಾತುಗಳು ಕಾರ್ಯಕರ್ತರ ನಡುವೆ ಕೇಳಿಬರುತ್ತಿವೆ. ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಅಶ್ವಿನಿ ಕುಮಾರ್ ರೈ ತಮ್ಮದೇ ರಾಜಕೀಯ ಅವಕಾಶಗಳನ್ನು ಬದಿಗೊತ್ತಿ ಮಾಜಿಯೊಬ್ಬರ ಬೆನ್ನಿಗೆ ನಿಂತು ಹೆಗಲಿಗೆ ಹೆಗಲು ಹಾಕಿ ಸಹಕಾರ ನೀಡಿದ ಘಟನೆಗಳನ್ನು ಕಾರ್ಯಕರ್ತರು ಇನ್ನೂ ನೆನಪಿಸಿಕೊಳ್ಳುತ್ತಾರೆ. ತಮ್ಮ ರಾಜಕೀಯ ಜೀವನದ ಪ್ರಮುಖ ಅವಧಿಯನ್ನು ಅವರಿಗಾಗಿ ಸವೆಸಿದ ರೈ ಅವರ ತ್ಯಾಗವನ್ನು ಹಾಗೂ ಯಾರಿಗೂ ನೋವು ಕೊಡದ ಮೃದು ಮನಸ್ಸಿನ ಅಶ್ವಿನಿ ಕುಮಾರ್ ರೈಯವರನ್ನು ಪಕ್ಷದ ಅನೇಕ ಹಿರಿಯರು ಇಂದಿಗೂ ಉದಾಹರಣೆಯಾಗಿ ಉಲ್ಲೇಖಿಸುತ್ತಿದ್ದಾರೆ.

ಹೊಸ ಮುಖಗಳಿಗೆ ಅವಕಾಶದ ಬೇಡಿಕೆ
ಹಲವು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ “ಇದು ಕೊನೆಯ ಚುನಾವಣೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರೂ 10 ನೇ ಅವಕಾಶ ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತಿಲ್ಲ ಎಂಬ ಟೀಕೆ ಕಾರ್ಯಕರ್ತರಿಂದ ಕೇಳಿಬರುತ್ತಿದೆ. ಪಕ್ಷದಲ್ಲಿ ಹೊಸ ನಾಯಕತ್ವ ಬೆಳೆಯಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತರ ಅನುಭವಗಳು ಮತ್ತು ಅಸಮಾಧಾನಗಳು ಇನ್ನಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

ಯುವಕರನ್ನು ( ಕಿರಿಯ) ಬೆಳೆಸಿದ ಹಿರಿಯ ನಾಯಕರು
ಪಕ್ಷದ ಹಿರಿಯ ನಾಯಕರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ ಹಾಗೂ ಜನಾರ್ದನ ಪೂಜಾರಿ ಅವರು ಅನೇಕ ಯುವ ನಾಯಕರಿಗೆ ಅವಕಾಶ ನೀಡಿ ಬೆಳೆಸಿದ ಪರಂಪರೆಯನ್ನು ಕಾರ್ಯಕರ್ತರು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ಹಲವರು ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡು ಯಶಸ್ವಿಯಾಗಿದ್ದಾರೆ ಎಂಬುದು ಮುಖಂಡರ ಅಭಿಪ್ರಾಯವಾಗಿದೆ. ಆದರೆ, ಕೆಲ ನಾಯಕರು ಹೊಸಬರನ್ನು ಬೆಳೆಸುವುದಕ್ಕಿಂತ ಅವರ ರಾಜಕೀಯ ಏಳಿಗೆಯನ್ನು ತಡೆಯುವಂತ ಕೆಲಸಗಳು ಹೆಚ್ಚಾಗಿ ನಡೆದಿವೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.