ಐದು ವರ್ಷಗಳಲ್ಲಿ 3.22 ಶತಕೋಟಿ ಡಾಲರ್ ನಿಂದ 4.16 ಶತಕೋಟಿ ಡಾಲರ್ ಗೆ ಜಂಪ್: ಸಂಸತ್ತಿನಲ್ಲಿ ಅಧಿಕೃತ ಹೇಳಿಕೆ
ಕಳೆದ ಐದು ವರ್ಷಗಳಲ್ಲಿ ಭಾರತದ ಮಾಂಸ ರಫ್ತಿನ ಪ್ರಮಾಣ 3.22 ಶತಕೋಟಿ ಡಾಲರ್ ನಿಂದ 4.16 ಶತಕೋಟಿ ಡಾಲರ್ ಗೆ ಏರಿದೆ ಎಂದು ಕೇಂದ್ರ ಸರಕಾರ ಸಂಸತ್ ನಲ್ಲಿ ಹೇಳಿದೆ. ಮಾಂಸ ರಫ್ತಿನ ಪ್ರಮಾಣದ ಕುರಿತು ಸಿಪಿಐಎಂ ಪಕ್ಷ ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ಸಹಾಯಕ ಸಚಿವ ಜಿತಿನ್ ಪ್ರಸಾದ್ ಉತ್ತರಿಸಿದರು.
“ಬೇರೆ ಬೇರೆ ದೇಶಗಳಿಗೆ ಭಾರತ ರಫ್ತು ಮಾಡಿದ ಒಟ್ಟು ಮಾಂಸದ ಪ್ರಮಾಣದ ಕುರಿತು ದಾಖಲೆಗಳಿವೆ. ರಾಜ್ಯವಾರು ವಿವರಗಳು ಇಲ್ಲ. ಡೈರಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ ಟಿ), ವಿದೇಶಿ ವ್ಯಾಪಾರ ನೀತಿ ಪ್ರಕಾರ, ಬೀಫ್ ( ಹಸು, ಎತ್ತು, ಕರುವಿನ ಮಾಂಸ) ರಫ್ತನ್ನು ನಿಷೇಧಿಸಲಾಗಿದೆ. ಇದನ್ನು ರಫ್ತು ಮಾಡಲು ನಾವು ಅನುಮತಿ ನೀಡಿಲ್ಲ ಎಂದು ಸಂಸದ ಜಾನ್ ಬ್ರಿಟ್ಟಾಸ್ ಕೇಳಿದ ಪ್ರಶ್ನೆಗೆ ವಾಣಿಜ್ಯ ಸಚಿವ ಜಿತಿನ್ ಪ್ರಸಾದ್ ಉತ್ತರಿಸಿದರು.

“2020-21 ರಲ್ಲಿ ಸುಮಾರು 3.22 ಶತಕೋಟಿ ಡಾಲರ್ ಮೌಲ್ಯದ 10.98 ಲಕ್ಷ ಮೆಟ್ರಿಕ್ ಟನ್ ಮಾಂಸ ರಫ್ತು ಆಗಿತ್ತು. 2021-22 ರಲ್ಲಿ ಇದು ಸುಮಾರು 11.90 ಲಕ್ಷ ಟನ್ ಗಳಿಗೆ ಏರಿತು. ಇದರ ಮೌಲ್ಯ 3.38 ಶತಕೋಟಿ ಡಾಲರ್. 2022-23 ರಲ್ಲಿ ರಫ್ತು ಪ್ರಮಾಣ ಸುಮಾರು 11.91 ಲಕ್ಷ ಟನ್. ರಫ್ತು ಮೌಲ್ಯ 3.27 ಶತಕೋಟಿ ಡಾಲರ್ ಆಗಿತ್ತು. 2023-24 ರಲ್ಲಿ ಮಾಂಸದ ರಫ್ತು 13.13 ಲಕ್ಷ ಟನ್ ಗೆ ಏರಿದಾಗ ಅದರ ಮೌಲ್ಯ 3.83 ಶತಕೋಟಿ ಡಾಲರ್ ಆಗಿತ್ತು. 2024-25 ರಲ್ಲಿ ರಫ್ತು ಮೌಲ್ಯವು ಸುಮಾರು 4.16 ಶತಕೋಟಿ ಡಾಲರ್ ಗೆ ತಲುಪಿತು. ಕುರಿ, ಮೇಕೆ, ಕೋಳಿ ಮಾಂಸದ ರಫ್ತು ಅಲ್ಪ ಆದರೆ ಎಮ್ಮೆ ಮಾಂಸದ ಪ್ರಮಾಣ ಹೆಚ್ಚು” ಎಂದರು.
