30 ಮಂದಿ ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿಗೆ ಹೈಕೋರ್ಟ್ ಆದೇಶ

ರಾಷ್ಟ್ರೀಯ

ರಾಜ್ಯ ಪೊಲೀಸ್‌ ಸೇವೆಯಲ್ಲಿದ್ದ 30 ಐಪಿಎಸ್‌ ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಾನಕ್ಕೆ ಬಡ್ತಿ ನೀಡಿ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಎಸ್‌ಪಿ ಹುದ್ದೆಗೆ ಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ 2025ರ ಆಗಸ್ಟ್ 20ರಂದು ನೀಡಿರುವ ಆದೇಶ ರದ್ದುಗೊಳಿಸುವಂತೆ ಕೋರಿ ರಾಜ್ಯ ಗೃಹ ಇಲಾಖೆ ಸಲ್ಲಿಸಿದ್ದ ರಿಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಕೆಎಸ್‌ಎಟಿ ಆದೇಶವನ್ನು ಮಾರ್ಪಾಡು ಮಾಡಿ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ‘ಕರ್ನಾಟಕ ನಾಗರಿಕ ಸೇವಾ ನಿಯಮ 45ರ ನಿಯಮದಡಿ ಬಡ್ತಿ ಪರಿಗಣನೆ ಮಾಡಬೇಕು’ ಎಂದು ಆದೇಶಿಸಿದೆ.

ಹುದ್ದೆಗಳು ಖಾಲಿ ಇರುವ ಅಂಶವನ್ನು ನ್ಯಾಯಮಂಡಳಿ ಪರಿಗಣಿಸಬೇಕಿತ್ತು. ಎಸ್‌ಪಿ ಹುದ್ದೆಗಳು ಮತ್ತು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಹುದ್ದೆಗಳ ಲಭ್ಯತೆಯನ್ನು ಆಧರಿಸಿ ಗೃಹ ಸಚಿವರ ಅನುಮೋದನೆ ಪಡೆದು ಎರಡು ತಿಂಗಳಲ್ಲಿ ಪ್ರತಿವಾದಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡಲು ತೀರ್ಮಾನಿಸಬೇಕು ಎಂದು ಆದೇಶದಲ್ಲಿ ವಿವರಿಸಿದೆ.

2023ರ ನವೆಂಬರ್ 15ರಂದು ನಡೆದ ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆಯು ಡಿಎಸ್‌ಪಿ ಗಳಾಗಿದ್ದ 30 ಮಂದಿ ಪ್ರತಿವಾದಿಗಳಿಗೆ ಐಪಿಎಸ್‌ ಯೇತರ ಎಸ್‌ಪಿ ವೃಂದಕ್ಕೆ ನೇರವಾಗಿ ಬಡ್ತಿ ನೀಡಲು ತೀರ್ಮಾನಿಸಿತ್ತು. ಆದರೆ, ಸರ್ಕಾರ ನೇರ ಬಡ್ತಿ ನೀಡುವ ಬದಲಿಗೆ ಕೆಸಿಎಸ್‌ಆರ್‌ ನಿಯಮ 32ರ ಅನ್ವಯ ಎಸ್‌ಪಿಗಳಾಗಿ ಉಸ್ತುವಾರಿ ಹೊಣೆ ನೀಡಿತ್ತು. ಇದನ್ನು ಪ್ರಶ್ನಿಸಿ, ಪ್ರಕರಣದ ಪ್ರತಿವಾದಿಗಳು ಕೆಎಸ್‌ಎಟಿ ಮೊರೆ ಹೋಗಿದ್ದರು. ನ್ಯಾಯಮಂಡಳಿ ಅಷ್ಟೂ ಮಂದಿಗೂ ಎಸ್‌ಪಿ ವೃಂದಕ್ಕೆ ಬಡ್ತಿ ನೀಡುವಂತೆ ಆದೇಶಿಸಿತ್ತು.