ಅದು ವಿಶ್ವ ವಿಖ್ಯಾತ ಧರ್ಮಸ್ಥಳ ದೇವಸ್ಥಾನದ ಕೂಗಳತೆಯ ದೂರದಲ್ಲಿರುವ ಮಲೆಕುಡಿಯ ಕಾಲನಿಯ ಸತ್ಯ ಕಥೆ. ಇಲ್ಲಿ 80 ಕ್ಕೂ ಹೆಚ್ಚು ಮಲೆಕುಡಿಯ ಸಮುದಾಯದ ಕುಟುಂಬಗಳು ತಲೆ-ತಲಾಂತರಗಳಿಂದಲೂ ವಾಸಿಸುತ್ತಿದೆ. ಇಲ್ಲಿ 10 ಕ್ಕೂ ಹೆಚ್ಚು ಇತರ ಜಾತಿಯ ಕುಟುಂಬಗಳೂ ಇವೆ. ಇಲ್ಲಿಯ ರಸ್ತೆ ಇಂದಿಗೂ ಪಕ್ಕಾ ಮಣ್ಣಿನ ರಸ್ತೆ. ರಸ್ತೆಯಲ್ಲಿ ಬಾರಿ ಗಾತ್ರದ ಕಲ್ಲುಗಳು , ಮರದ ಬೇರುಗಳು ಜೊತೆಗೆ ರಸ್ತೆ ಮಧ್ಯೆದಲ್ಲೇ ಪ್ರಕೃತಿ ರೂಪಿಸಿದ ತಾತ್ಕಾಲಿಕ ಚರಂಡಿ ಇದರಲ್ಲಿಯೇ ಜನ, ವಾಹನ ಸಂಚಾರ. ತುರ್ತು ಅಗತ್ಯಗಳಿಗೆ ಆಂಬುಲೆನ್ಸ್ ವಾಹನಗಳೂ ಕೂಡ ಇಲ್ಲಿ ಬರಲು ಒಪ್ಪಲ್ಲ. ಅಂತಹ ದುಸ್ಥಿತಿಯ ರಸ್ತೆಯ ಡಾಮರೀಕರಣ ಅಥವಾ ಕಾಂಕ್ರೀಟಿಕರಣಕ್ಕಾಗಿ ಹೋರಾಟದ ಅಂತಿಮ ಹೆಜ್ಜೆಯೇ ಚುನಾವಣಾ ಬಹಿಷ್ಕಾರ.
ಈ ರಸ್ತೆಯು ಧರ್ಮಸ್ಥಳ ಬಸದಿಯಿಂದ ಕೊಲ್ಪೆ, ನೆಲ್ಲಿಕಟ್ಟೆ, ಮುಳಿಕ್ಕಾರು ಪ್ರದೇಶಕ್ಕೆ 5 ಕಿಮೀ, ಇಲ್ಲಿಂದ ಭೀಮಂಡೆ ಪ್ರದೇಶದ 6 ಕಿಮೀ ರಸ್ತೆ ಅವ್ಯವಸ್ಥೆಯ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದಿಡಿದು ಜಿಲ್ಲಾ ಪಂಚಾಯತ್ ವರೆಗೂ, ಸಮಾಜ ಕಲ್ಯಾಣ ಇಲಾಖೆ, ಗಿರಿಜನ ಕಲ್ಯಾಣ ಇಲಾಖೆಯಿಂದ ಹಿಡಿದು ಸರ್ಕಾರದ ವರೆಗೂ, ಗ್ರಾಮ ಪಂಚಾಯತ್ ನ ಸದಸ್ಯರಿಂದ ಹಿಡಿದು ತಾಲೂಕು, ಜಿಲ್ಲಾ ಪಂಚಾಯತ್ ಸದಸ್ಯರ ವರೆಗೂ, ಶಾಸಕ, ಸಂಸದರಿಗೂ ಮನವಿ ಮೇಲೆ ಮನವಿ ಸಲ್ಲಿಸಿದರೂ ಯಾರೂ ಇತ್ತ ಕಡೆಗೆ ತಲೆಯೂ ಹಾಕಿಲ್ಲ ಎನ್ನುವುದಕ್ಕೆ ರಸ್ತೆಯ ದುರವಸ್ಥೆಗಳೇ ಸಾಕ್ಷಿ ನುಡಿಯುತ್ತದೆ. ಅಧಿಕಾರಿಗಳು ಯಾವುದೋ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಂತೆ ಬಂದು ಹೋಗಿದ್ದು ಬಿಟ್ಟರೆ ಉಳಿದ ಯಾವುದೇ ಕೆಲಸವಾಗಿಲ್ಲ ಎಂದು ನೋವಿನಿಂದ ನುಡಿಯುತ್ತಾರೆ ಈ ಪ್ರದೇಶದ ಜನರು.

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪ್ರದೇಶದ ಕೋಲ್ಪೆಯಿಂದ ನೆಲ್ಲಿಕಟ್ಟೆ ; ಪಿಜತಡ್ಕದಿಂದ ಭೀಮಂಡೆವರೆಗಿನ ರಸ್ತೆಯ ಅವ್ಯವಸ್ಥೆಯ ಸರಿ ಪಡಿಸಲು ಹೋರಾಟದ ಅಂತಿಮ ಭಾಗವಾಗಿ ಚುನಾವಣಾ ಬಹಿಷ್ಕಾರ ಹಾಕಲಾಗಿದೆ. ಭೀಮಂಡೆ ಪ್ರದೇಶದಲ್ಲಿ 26, ಕೊಲ್ಪೆ 20, ನೆಲ್ಲಿಕಟ್ಟೆ 15, ಕುದ್ರಾಯ 3 ಮತ್ತು ಹೊಳೆಬದಿ 13 ಹೀಗೆ ಒಟ್ಟು 77 ಮಲೆಕುಡಿಯ ಸಮುದಾಯ ವಾಸವಾಗಿರುವ ಈ ರಸ್ತೆಯ ಅಭಿವೃದ್ಧಿಗಾಗಿ ಈ ತನಕವೂ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗದಿರುವುದು ಅವರಿಗೆ ಆದಿವಾಸಿಗಳ ಬಗ್ಗೆ ಇರುವ ನಿರ್ಲಕ್ಷ್ಯತೆಗೆ ಸಾಕ್ಷಿಯಾಗಿದೆ. ಇಂತಹ ನಿರ್ಲಕ್ಷ್ಯತೆಯ ವಿರುದ್ಧದ ಅಂತಿಮ ಹೋರಾಟದ ಭಾಗವೇ ಚುನಾವಣಾ ಬಹಿಷ್ಕಾರ.
