ಭಾರತದ ರಾಜಕಾರಣದಲ್ಲಿ ಇದೀಗ ಒಂದು ಹೆಸರು ಬಹಳ ವೈರಲ್ ಆಗುತ್ತಿದೆ. ಇದು ನಗು ಮತ್ತು ಚರ್ಚೆಗೆ ಕಾರಣವಾಗುತ್ತಿರುವುದು ‘ಕಾಕ್ರೋಚ್ ಜನತಾ ಪಕ್ಷ'(CJP). ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಈ ಅಭಿಯಾನ ಈಗ ಯುವಕರ ಕೋಪ, ನಿರುದ್ಯೋಗ, ವ್ಯವಸ್ಥೆಯ ಬಗ್ಗೆ ಅತೃಪ್ತಿ ಮತ್ತು ಮೀಮ್ ಸಂಸ್ಕೃತಿಯ ಪ್ರಮುಖ ಸಂಕೇತವಾಗುತ್ತಿದೆ. ಕುತೂಹಲಕಾರಿ ವಿಷಯವೆಂದರೆ, ಪಕ್ಷವು ತನ್ನನ್ನು ಯುವಕರಿಂದ, ಯುವಕರಿಗಾಗಿ ಯುವಕರ ಪಕ್ಷ ಎಂದು ಕರೆದುಕೊಂಡಿದೆ. ಸಾವಿರಾರು ಜನರು ಆನ್ಲೈನ್ನಲ್ಲಿ ಪಕ್ಷವನ್ನು ಸೇರಿದ್ದಾರೆ. ಅಲ್ಲದೆ ಅನೇಕರು ಇದನ್ನು ಕೇವಲ ತಮಾಷೆಯಲ್ಲ, ಆದರೆ ಹೊಸ ರೀತಿಯ ಡಿಜಿಟಲ್ ರಾಜಕೀಯವೆಂದು ಪರಿಗಣಿಸುತ್ತಿದ್ದಾರೆ. ಯುವಕರ ನಿರುದ್ಯೋಗ, ವ್ಯವಸ್ಥೆಯ ವಿರುದ್ಧದ ಅಸಮಾಧಾನ ಮತ್ತು ರಾಜಕೀಯ ನಿರಾಶೆಯನ್ನು ವ್ಯಂಗ್ಯ ಹಾಗೂ ಮೀಮ್ ಗಳ ಮೂಲಕ ವ್ಯಕ್ತಪಡಿಸುತ್ತಿರುವ ಈ ಡಿಜಿಟಲ್ ಚಳುವಳಿ ಹಿಂದೆ ಇರುವ ವ್ಯಕ್ತಿ ಅಭಿಜಿತ್ ದೀಪ್ಕೆ. ಈ ಪಾರ್ಟಿಯ ಕುರುಹುಗಳನ್ನು ನೋಡುತ್ತಿದ್ದರೆ, ನೇಪಾಳದ ಜೆನ್ ಜೀ ಹೋರಾಟವೇ ಕಣ್ಣ ಮುಂದೆ ಬರುತ್ತಿದೆ. ನೆರೆಯ ನೇಪಾಳದಲ್ಲಿ ಯುವ ಕ್ರಾಂತಿ ಪ್ರಾರಂಭವಾದಾಗಲೇ ಅದರ ದಟ್ಟ ಕಾರ್ಮೋಡಗಳು ಭಾರತದಲ್ಲೂ ಆವರಿಸಿತ್ತು. ಅದೀಗ ಹೊಸ ರೂಪ ವೊಂದನ್ನು ಪಡೆದುಕೊಳ್ಳುತ್ತಿದೆ.
ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ನಿರುದ್ಯೋಗಿ ಯುವಕರನ್ನು, ಪತ್ರಿಕೋದ್ಯಮ, ಆರ್ಟಿಐ ಚಟುವಟಿಕೆ ಮತ್ತು ಕಾನೂನಿನಂತಹ ವೃತ್ತಿಗಳಲ್ಲಿರುವವರನ್ನು ‘ಜಿರಳೆಗಳು’ ಮತ್ತು ‘ಪರಾವಲಂಬಿಗಳು’ಗೆ ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಯುವಕರು ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನಲ್ಲಿ ಪಕ್ಷವನ್ನು ಶುರು ಮಾಡಿದ್ದು ಇದು ಆನ್ಲೈನ್ನಲ್ಲಿ ತೀವ್ರವಾಗಿ ಟ್ರೆಂಡಿಂಗ್ ಆಗಿದೆ.
CJP ಯ ಪೋಸ್ಟ್ಗಳು, ಮೀಮ್ಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ. ಪಕ್ಷವು ತನ್ನನ್ನು ಸಂಪೂರ್ಣವಾಗಿ ಡಿಜಿಟಲ್ ಚಳುವಳಿ ಎಂದು ವಿವರಿಸಿದ್ದು ಸಾವಿರಾರು ಯುವಕರು ಸೇರಿದ್ದಾರೆ ಎಂದು ಹೇಳುತ್ತದೆ. ಈ ಪಕ್ಷಕ್ಕೆ ಸದಸ್ಯರಾಗಲು ‘ನಿರುದ್ಯೋಗಿ’, ‘ಆನ್ಲೈನ್ ಬಳಕೆ’, ‘ವೃತ್ತಿಪರ ವಾಗ್ಮಿ’ ಮತ್ತು ‘ಸೋಮಾರಿ’ ಆಗಿರಬೇಕು ಎಂದು ಪಕ್ಷದ ಪೋಸ್ಟ್ಗಳು ಹಾಸ್ಯಮಯವಾಗಿ ಹೇಳುತ್ತವೆ. ಆದಾಗ್ಯೂ, ಈ ಹಾಸ್ಯದ ನಡುವೆ, ಯುವಕರ ಉದ್ಯೋಗ, ಪರೀಕ್ಷಾ ವಿವಾದಗಳು, ವ್ಯವಸ್ಥಿತ ಪಾರದರ್ಶಕತೆ ಮತ್ತು ರಾಜಕೀಯ ಪ್ರಾತಿನಿಧ್ಯದಂತಹ ಗಂಭೀರ ಸಮಸ್ಯೆಗಳನ್ನು ಸಹ ಎತ್ತಲಾಗುತ್ತಿದೆ. ಪಕ್ಷವು ವರ್ಚುವಲ್ ಜೆನ್ ಝೀ ಸಮಾವೇಶವನ್ನು ಸಹ ಘೋಷಿಸಿದೆ. ಅಲ್ಲಿ ಯುವಕರು ನೀತಿ ಮತ್ತು ಆಡಳಿತವನ್ನು ಚರ್ಚಿಸುತ್ತಾರೆ.
ಈ ಹೇಳಿಕೆ ಭಾರತದ ಯುವ ಜನತೆ ಕಿವಿಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದರು. 30 ವರ್ಷದ ಅಭಿಜಿತ್ ದಿಪ್ಕೆ ಎನ್ನುವವರು ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ಪಾರ್ಟಿಯ ಖಾತೆ ಮೇ 16ರಂದು ಆರಂಭವಾಗುತ್ತಿದ್ದಂತೆ ಅಬ್ಬರಿಸಿದ ಭಾರತದ ಯುವ ಜನತೆ ದೊಡ್ಡ ಮಟ್ಟದಲ್ಲಿ ಖಾತೆಯನ್ನು ಅನುಸರಿಸಲು ಆರಂಭಿಸಿದ್ದಾರೆ.
ಖಾತೆಯನ್ನು ನಿರ್ವಹಿಸಲು ದೊಡ್ಡ ದೊಡ್ಡ ಎಸಿ ಇರುವ ಆಫೀಸ್ ಇಲ್ಲದೇ, ನೂರಾರು ಕೆಲಸಗಾರರಿಲ್ಲದೇ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಖಾತೆಗೆ ಕೇವಲ 4 ದಿನಗಳಲ್ಲಿ ಬರೋಬ್ಬರಿ 9.6 ಮಿಲಿಯನ್ ಫಾಲೋವರ್ಸ್ ಬಂದಿದ್ದಾರೆ. ಈ ಮೂಲಕ ದೇಶದ ಅತಿಹೆಚ್ಚು ರಾಜ್ಯಗಳಲ್ಲಿ ಗೆದ್ದು ಬಲಿಷ್ಠ ಪಕ್ಷ ಎನಿಸಿಕೊಂಡಿರುವ ಭಾರತೀಯ ಜನತಾ ಪಾರ್ಟಿಯನ್ನು ಕಾಕ್ರೋಚ್ ಜನತಾ ಪಾರ್ಟಿ ಹಿಂದಿಕ್ಕಿದೆ. ಬಿಜೆಪಿಯ ಮುಖ್ಯ ಖಾತೆಗೆ 8.8 ಮಿಲಿಯನ್ ಹಿಂಬಾಲಕರಿದ್ದಾರೆ
