ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಬಲಿಯಾಗುತ್ತಿದೆ ಅಮಾಯಕ ಜೀವಗಳು
“ಮೆಡಿಕಲ್ ಹಬ್” ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿ ಘಟನೆಗಳು ಪದೇಪದೇ ಮರುಕಳಿಸುತ್ತಿರುವುದು ದುರಂತದ ಸಂಗತಿ. ದುರಂತಗಳು ಸಂಭವಿಸಿ ಒಂದೆರಡು ದಿನ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಮಾತ್ರ ತೋರಿಕೆಗೆ ತನಿಖೆ ನಡೆಸಿ ಹಳೇ ಕಡತ ಸೇರಿಸುವ ಪ್ರವೃತ್ತಿ ನಮ್ಮ ಇಲಾಖೆಗಳಲ್ಲಿದೆ. ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಮೇಲಿನ ಸರ್ಕಾರದ ನಿಯಂತ್ರಣ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಇಂತಹ ಘಟನೆಗಳಲ್ಲಿ ಅಮಾಯಕರು ಬಲಿಯಾದಾಗ ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದಕ್ಕೆ ಹೊಣೆ ಯಾರು? ಸರ್ಕಾರವೇ? ಜಿಲ್ಲಾಡಳಿತವೇ.? ಪೊಲೀಸ್ ಇಲಾಖೆಯೇ.? ಅಥವಾ ಮೆಡಿಕಲ್ ಕೌನ್ಸಿಲೇ.?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಬೆಳ್ತಂಗಡಿ ತಾಲೂಕಿನ ಪರಪ್ಪು ನಿವಾಸಿ ಶರೀಫ್ ಎಂಬ ಯುವಕನೇ ಬಲಿಯಾದಾತ. ಸಣ್ಣ ಪ್ರಮಾಣದ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು, “ಇದು ಸಣ್ಣ ತೊಂದರೆ, ಒಂದು ದಿನ ದಾಖಲಾದರೆ ಸರಿಯಾಗುತ್ತದೆ” ಎಂದು ಹೇಳಿ ಒಳರೋಗಿಯಾಗಿ ಸೇರಿಸಿಕೊಂಡಿದ್ದಾರೆ. ಆದರೆ, ಚಿಕಿತ್ಸೆಯ ಭಾಗವಾಗಿ ಹೊಟ್ಟೆಗೆ ಪೈಪ್ ಅಳವಡಿಸುವ ಸಂದರ್ಭದಲ್ಲಿ ಅಲ್ಲಿನ ವೈದ್ಯರ ಅನುಭವದ ಕೊರತೆಯೋ ಅಥವಾ ಘೋರ ನಿರ್ಲಕ್ಷ್ಯವೋ ಗೊತ್ತಿಲ್ಲ, ಬಲವಂತವಾಗಿ ಅಳವಡಿಸಿದ ಪೈಪ್ ಯುವಕನ ಸಣ್ಣಕರುಳಿನ ಭಾಗಕ್ಕೆ ತಾಗಿ ಗಂಭೀರ ಗಾಯ ಉಂಟಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಯುವಕನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಾಗ ಗಾಬರಿಗೊಂಡ ಆಸ್ಪತ್ರೆ ಮ್ಯಾನೇಜ್ಮೆಂಟ್, “ಇದು ನಮ್ಮಿಂದ ಸಾಧ್ಯವಿಲ್ಲ, ತಕ್ಷಣ ಮಂಗಳೂರಿಗೆ ಕರೆದೊಯ್ಯಿರಿ” ಎಂದು ಆಂಬುಲೆನ್ಸ್ ಹತ್ತಿಸಿ ಕೈತೊಳೆದುಕೊಂಡಿದೆ. ಅಲ್ಲಿಂದ ಮಂಗಳೂರಿನ ಬಂದು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಶರೀಫ್, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಇಡೀ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನಕ್ಕೆ ಅಮೂಲ್ಯ ಜೀವಗಳು ಬಲಿಯಾಗುತ್ತಿರುವುದು ಇದು ಮೊದಲೇನಲ್ಲ. ಹಲವು ಜೀವಗಳು ಬಲಿಯಾದ ಘಟನೆಗಳು ನಮ್ಮ ಕಣ್ಣ ಮುಂದೆ ಇದೆ. ಇತ್ತೀಚೆಗಷ್ಟೇ ಮಂಗಳೂರು ಹೊರವಲಯದ ಸುರತ್ಕಲ್ ಭಾಗದ ಆಸ್ಪತ್ರೆಯೊಂದರಲ್ಲಿ ಸಣ್ಣ ಅಪಘಾತದಿಂದ ಕಾಲಿಗೆ ಗಾಯಗೊಂಡಿದ್ದ ಯುವಕನೊಬ್ಬ ವೈದ್ಯರು ನೀಡಿದ ಓವರ್ ಡೋಸ್ ಔಷಧಿಯಿಂದ ಮೃತಪಟ್ಟ ಘಟನೆ ಇನ್ನೂ ಮಾಸುವ ಮುನ್ನವೇ ಉಪ್ಪಿನಂಗಡಿಯ ಮೂರು ಅಪ್ರಾಪ್ತ ಮಕ್ಕಳ ತಂದೆ, ಬೀದಿ ಬದಿ ತರಕಾರಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಮುಹಮ್ಮದ್ ಶರೀಫ್ ಹೊಟ್ಟೆ ನೋವು ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಯ ಘೋರ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದಾನೆ.
ಸರಕಾರ, ವ್ಯವಸ್ಥೆಗಳು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಸರಕಾರಿ ಆಸ್ಪತ್ರೆಗಳನ್ನೇ ಖಾಸಗಿ ತೆಕ್ಕೆಗೆ ವಹಿಸಿ ಕೊಡುತ್ತಿರುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳೇ ಜನರ ಪಾಲಿಗೆ ಯಮನಾಗಿ ಕಾಡುತ್ತಿರುವುದು ದುರಂತವೇ ಸರಿ.
