ಒಂದೇ ಕುಟುಂಬದ ಹತ್ತು ಮಂದಿ ಜಲ ಸಮಾಧಿ. ಕಪ್ಪೆ ಚಿಪ್ಪು ತಂದ ಆಪತ್ತು.

ರಾಜ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಜಲ ದುರಂತವೊಂದು ಸಂಭವಿಸಿದ್ದು, ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬಕ್ಕೆ ಸೇರಿದ ಹತ್ತು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ​

ಭಟ್ಕಳ ತಾಲೂಕಿನ ಶಿರಾಲಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಭಾನುವಾರ ಈ ಭೀಕರ ದುರಂತ ಸಂಭವಿಸಿದೆ. ಕಪ್ಪೆಚಿಪ್ಪು ಆರಿಸಲು ಇಳಿದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹತ್ತು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಲಾಗಿದೆ.