ಚನ್ನಿ-ವೀಡಿಗೆ ಡಿಕೆಶಿ ಫೆವಿಕಾಲ್.?, ಒಗ್ಗಟ್ಟಿನ ಮಹತ್ವ ವಿವರಿಸಿದ ಡಿಕೆಶಿ
✍️. ಆರ್.ಟಿ.ವಿಠ್ಟಲಮೂರ್ತಿ
ಕಳೆದ ವಾರ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಕೇರಳಕ್ಕೆ ಹೋಗಿದ್ದರು. ಹೀಗೆ ಹೋದವರು ವಿ.ಡಿ.ಸತೀಶನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದಾದ ನಂತರ ಸಮಾರಂಭಕ್ಕೆ ದಿಲ್ಲಿಯಿಂದ ಬಂದಿದ್ದ ಹಿರಿಯ ನಾಯಕರೊಬ್ಬರ ಜತೆ ಅವರು ಒನ್ ಟು ಒನ್ ಮಾತನಾಡಿದ್ದಾರೆ.
ಹೀಗೆ ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿ: ‘ಸಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯೆ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷ ಎಲ್ಲಿಯ ತನಕ ಮುಂದುವರಿಯುತ್ತದೆ? ಹಾಗೊಂದು ವೇಳೆ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂಬುದಾದರೆ ಹೈಕಮಾಂಡ್ ಅದನ್ನು ಸ್ಪಷ್ಟಪಡಿಸಬೇಕು. ಇಲ್ಲ, ಸಿದ್ದರಾಮಯ್ಯ ಅವರನ್ನು ಬದಲಿಸುವುದಾದರೆ ಅದನ್ನಾದರೂ ಸ್ಪಷ್ಡವಾಗಿ ಹೇಳಬೇಕು. ಆದರೆ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಪಕ್ಷದ ಶಾಸಕಾಂಗಕ್ಕೂ ಗೊಂದಲ, ಅತ್ತ ಅಧಿಕಾರಿಗಳಿಗೂ ಗೊಂದಲ, ಇನ್ನೊಂದು ಕಡೆ ರಾಜ್ಯದ ಜನರಿಗೂ ಗೊಂದಲ ಅಂತ ಹೇಳಿದ್ದಾರೆ.
ಇವರು ಹೇಳಿದ ಮಾತನ್ನು ಕೇಳಿದ ದಿಲ್ಲಿಯ ನಾಯಕರು ತಕ್ಷಣ ಮಾತನಾಡಿಲ್ಲ. ಹೀಗಾಗಿ ಮಾತು ಮುಂದುವರಿಸಿದ ರಾಜ್ಯ ಕಾಂಗ್ರೆಸ್ ನ ಈ ನಾಯಕರು: ‘ಐದು ರಾಜ್ಯಗಳ ಚುನಾವಣೆಯ ನಂತರ ಅಧಿಕಾರ ಹಂಚಿಕೆಯ ಸಂಘರ್ಷಕ್ಕೆ ರಾಹುಲ್ ಗಾಂಧಿ ಬ್ರೇಕ್ ಹಾಕುತ್ತಾರೆ. ಉಭಯ ನಾಯಕರನ್ನು ದಿಲ್ಲಿಗೆ ಕರೆಸುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಇಬ್ಬರು ನಾಯಕರನ್ನು ರಾಹುಲ್ ಗಾಂಧಿ ದಿಲ್ಲಿಗೆ ಕರೆಸುವುದಿರಲಿ, ಬದಲಿಗೆ ಅವರೇ ವಿದೇಶದ ಕಡೆ ಮುಖ ಮಾಡಿದ್ದಾರೆ’ ಅಂತ ಹೇಳಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ? ಆಗ ದಿಲ್ಲಿಯ ಅ ನಾಯಕರು ಕೂಲಾಗಿ ಉತ್ತರಿಸಿದ್ದಾರೆ. ಅವರ ಪ್ರಕಾರ: ‘ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಏನಿದೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತ್ತು ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತದಲ್ಲ?ಇದಾದ ನಂತರ ನಡೆಯುವ ಒಂದು ಬೆಳವಣಿಗೆ ಕರ್ನಾಟಕದಲ್ಲಿ ಏನು ನಡೆಯುತ್ತದೆ ಎಂಬುದರ ದಿಕ್ಸೂಚಿ ಆಗಬಹುದು’ ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಹೇಗೆ ರನ್ ಆಗುತ್ತದೆ ಎಂಬುದರ ಮೇಲೆ ಕರ್ನಾಟಕದ ರಾಜಕೀಯ ಸ್ವರೂಪ ನಿರ್ಧಾರವಾಗುತ್ತದೆ.

ಅದರ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯ ಟಿಕೆಟ್ ನೀಡಲು ನಿರ್ಧಾರವಾದರೆ ಖರ್ಗೆಯವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಸ್ಥಾನ ನಿರ್ವಹಿಸಲಿ ಎಂಬುದು ರಾಹುಲ್ ಗಾಂಧಿ ಅವರ ಸಂದೇಶ. ಒಂದು ವೇಳೆ ರಾಜ್ಯಸಭೆಯ ಟಿಕೆಟ್ ಕೊಡದೆ ವಿಧಾನಪರಿಷತ್ತಿನ ಟಿಕೆಟ್ ಕೊಟ್ಟರೆ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಲಿ ಎಂಬುದು ಅವರ ಸಂದೇಶ.
ಹಾಗೊಂದು ವೇಳೆ ಖರ್ಗೆಯವರಿಗೆ ರಾಜ್ಯಸಭೆ ಅಥವಾ ವಿಧಾನಪರಿಷತ್ತಿನ ಟಿಕೆಟ್ ಕೊಡದೆ ಹೋದರೆ ನೀವು ಎಐಸಿಸಿ ಅಧ್ಯಕ್ಷರಾಗಿ ಮುಂದುವರಿದರೆ ಸಾಕು ಎಂಬುದು ರಾಹುಲ್ ಗಾಂಧಿಯವರ ಸಂದೇಶ.
ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರುವ ವಿಷಯ ಎಂದರೆ ಖರ್ಗೆಯವರಿಗೆ ವಿಧಾನಪರಿಷತ್ ಟಿಕೆಟ್ ಕೊಟ್ಟು ಅವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸುವುದು ಎಂದರೆ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿ ಎಂದರ್ಥವೇ ಹೊರತು ಬೇರೇನಲ್ಲ. ಅದೇನಾದರೂ ನಿಜವಾದರೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಕರ್ನಾಟಕ ಮೊಟ್ಟ ಮೊದಲ ದಲಿತ ಮುಖ್ಯಮಂತ್ರಿಯನ್ನು ನೋಡಬಹುದು ಎಂದು ದಿಲ್ಲಿಯ ನಾಯಕರು ಹೇಳಿದ್ದಾರೆ.
ಅವರು ಹೇಳಿದ್ದನ್ನು ಕೇಳಿದ ರಾಜ್ಯದ ನಾಯಕರು: ‘ಆದರೆ ಸಿದ್ಧರಾಮಯ್ಯನವರು ಕೆಳಗಿಳಿಯುವುದೇ ಆದರೆ ನೀವು ಸಿಎಂ ಆಗಿ ಕರ್ನಾಟಕಕ್ಕೆ ಬನ್ನಿ ಅಂತ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಹೇಳಿದಾಗ ‘ಇಲ್ಲ, ಇಲ್ಲ ಅದನ್ನು ಸೋನಿಯಾ ಮೇಡಂ ಒಪ್ಪುತ್ತಿಲ್ಲ’ ಅಂತ ಖರ್ಗೆ ಹೇಳಿದರಂತೆ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಮರು ಉತ್ತರಿಸಿದ ದಿಲ್ಲಿಯ ನಾಯಕರು: ‘ಮೇಡಂ ಭಾವನೆ ಏನೇ ಇರಲಿ, ಆದರೆ ರಾಹುಲ್ ಗಾಂಧಿ ತೀರ್ಮಾನಿಸಿದರೆ ಖರ್ಗೆಯವರು ಸಿಎಂ ಆಗುವುದನ್ನು ಯಾರೂ ತಡೆಗಟ್ಟಲು ಸಾಧ್ಯವಿಲ್ಲ’ ಎಂದಿದ್ದಾರೆ.
ಅಷ್ಟೇ ಅಲ್ಲ, ಇವತ್ತು ಸಿದ್ದರಾಮಯ್ಯ-ಡಿಕೆಶಿ ನಡುವೆ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷ ಕೋರ್ಟ್ ಹಿಯರಿಂಗಿನಂತೆ ಪದೇ ಪದೇ ಮುಂದಕ್ಕೆ ಹೋಗಲು ಇದೂ ಒಂದು ಕಾರಣ ಎಂದಿದ್ದಾರೆ. ಹೀಗಾಗಿ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯ ಟಿಕೆಟ್ ಫೈನಲ್ ಆಗಲಿ. ಆನಂತರ ಸಿದ್ದರಾಮಯ್ಯ ಇಳಿಯುತ್ತಾರೋ, ಉಳಿಯುತ್ತಾರೋ?ಡಿಕೆ ಸಿಎಂ ಆಗುತ್ತಾರೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ ಎಂದಿದ್ದಾರೆ.
ಯಾವಾಗ ಅವರು ಈ ಮಾತು ಹೇಳಿದರೋ? ಆಗ ರಾಜ್ಯದ ನಾಯಕರು: ‘ಆಟ ಯಾವ ತಿರುವು ಪಡೆಯುತ್ತದೋ? ಆಟದಲ್ಲಿ ಫ್ರಂಟ್ ಲೈನಿಗೆ ಬರುವ ಪ್ಲೇಯರು ಯಾರೋ? ‘ಅಂತ ನಿಟ್ಟುಸಿರು ಬಿಟ್ಟರಂತೆ.
ಚನ್ನಿ-ವೀಡಿಗೆ ಡಿಕೆಶಿ ಫೆವಿಕಾಲ್.?
ಈ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ಇಂಟರೆಸ್ಟಿಂಗ್ ಸುದ್ದಿಯೊಂದು ತೇಲಿ ಬರುತ್ತಿದೆ.
ಅದರ ಪ್ರಕಾರ: ‘ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್ ಬಹುಮತ ಗಳಿಸಿತಲ್ಲ?ಇದಾದ ನಂತರ ಅಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಆರಂಭವಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ವಿ.ಡಿ.ಸತೀಶನ್, ರಮೇಶ್ ಚನ್ನಿತಾಲ ಮತ್ತು ಕೆ.ಸಿ.ವೇಣುಗೋಪಾಲ್ ಮಧ್ಯೆ ಪೈಪೋಟಿ ಆರಂಭವಾಯಿತು. ಹೀಗೆ ಮೂವರ ಮಧ್ಯೆ ಶುರುವಾದ ಪೈಪೋಟಿ ದಿನದಿಂದ ದಿನಕ್ಕೆ ಟಫ್ ಆಗುತ್ತಾ ಕಾಂಗ್ರೆಸ್ ವರಿಷ್ಟರ ತಲೆ ಬಿಸಿಗೆ ಕಾರಣವಾಯಿತು.
ಅಂದ ಹಾಗೆ ಪೈಪೋಟಿಯಲ್ಲಿದ್ದ ವಿ.ಡಿ.ಸತೀಶನ್ ಮಾಸ್ ಲೀಡರ್ ಅದರೆ, ರಮೇಶ್ ಚನ್ನಿತಾಲ ಕೇರಳ ಕಾಂಗ್ರೆಸ್ಸಿನ ಸೀನಿಯರ್ ಮೋಸ್ಟ್ ಲೀಡರು.ಇನ್ನು ಕೆ.ಸಿ. ವೇಣುಗೋಪಾಲ್ ಅವರಂತೂ ರಾಹುಲ್ ಗಾಂಧಿಯವರ ಪರಮಾಪ್ತ, ಕಾಂಗ್ರೆಸ್ ಹೈಕಮಾಂಡ್ ನ ಪವರ್ ಫುಲ್ ಪಿಲ್ಲರು. ಹೀಗಾಗಿ ಯಾರು ಹಿತವರು ಈ ಮೂವರೊಳಗೆ ಅಂತ ತಲೆ ಕೆಡಿಸಿಕೊಂಡ ಕಾಂಗ್ರೆಸ್ ವರಿಷ್ಟರು ಒಂದು ಹಂತದವರೆಗೆ ಕೆ.ಸಿ.ವೇಣುಗೋಪಾಲ್ ಪರವಾಗಿಯೇ ಇದ್ದರು.
ಈ ಹಂತದಲ್ಲಿ ಎಂಟ್ರಿಯಾದ ಡಿ.ಕೆ.ಶಿವಕುಮಾರ್ ಅವರು ವಿ.ಡಿ.ಸತೀಶನ್ ಮತ್ತು ರಮೇಶ್ ಚನ್ನಿತಾಲ ಅವರನ್ನು ಸಂಪರ್ಕಿಸಿದ್ದಾರೆ. ಈ ಪೈಕಿ ರಮೇಶ್ ಚನ್ನಿತಾಲ ಅವರು ಮುಂಚಿನಿಂದ ಡಿಕೆಶಿ ಪರಮಾಪ್ತರು. ಚನ್ನಿತಾಲ ಕೂಡಾ ಡಿಕೆಶಿ ತರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಮಂತ್ರಿಯಾದವರು.
ಇಂತಿಪ್ಪ ರಮೇಶ್ ಚನ್ನಿತಾಲ ಮತ್ತು ವಿ.ಡಿ.ಸತೀಶನ್ ಅವರಿಗೆ ಒಗ್ಗಟ್ಟಿನ ಮಹತ್ವ ವಿವರಿಸಿದ ಡಿಕೆಶಿ:’ಈ ಸಂದರ್ಭದಲ್ಲಿ ನೀವಿಬ್ಬರು ಒಗ್ಗಟ್ಟಾಗಿರಿ. ಒಬ್ಬರು ಮತ್ತೊಬ್ಬರ ಪರವಾಗಿ ನಿಂತರೆ ಬೆಟರ್ರು’ ಎಂದಿದ್ದಾರೆ.
ಇದಾದ ನಂತರ ಸಿಎಂ ಹುದ್ದೆಯ ಫೈಟು ದಿಲ್ಲಿಯಲ್ಲಿ ಇನ್ನಷ್ಟು ತೀವ್ರವಾದಾಗ ಕೆ.ಸಿ.ವೇಣುಗೋಪಾಲ್ ಅವರು ಅಧಿಕಾರ ಹಂಚಿಕೆಯ ಸೂತ್ರವನ್ನು ಮುಂದಿಟ್ಟಿದ್ದಾರೆ.
‘ಮುಂದಿನ ಲೋಕಸಭಾ ಚುನಾವಣೆಯ ತನಕ ನಾನು ಸಿಎಂ ಆಗಿರುತ್ತೇನೆ. ಆನಂತರ ವಿ.ಡಿ.ಸತೀಶನ್ ಅವರಿಗೆ ಜಾಗ ಬಿಟ್ಟುಕೊಡುತ್ತೇನೆ’ ಅಂತ ಅವರು ಹೇಳಿದಾಗ ‘ಓಕೆ ಇದು ಅತ್ಯುತ್ಯಮ ಸೂತ್ರ’ ಅಂತ ವರಿಷ್ಟರು ಹೇಳಿದರಂತೆ.
ಆದರೆ ಈ ಹಂತದಲ್ಲಿ ಪುನ: ಎಂಟ್ರಿಯಾದ ಡಿಕೆಶಿ:’ಅಧಿಕಾರ ಹಂಚಿಕೆ ಸೂತ್ರವನ್ನು ನಂಬಿ ಸಿಎಂ ಹುದ್ದೆ ಬಿಟ್ಟುಕೊಡಬೇಡಿ. ಒಂದು ಸಲ ಬಿಟ್ಟುಕೊಟ್ಟರೆ ಆನಂತರ ಅದು ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ನಿಮಗೆ ನನ್ನ ಸ್ಥಿತಿ ಬರುವುದು ಬೇಡ’ ಎಂದಿದ್ದಾರೆ.

ಯಾವಾಗ ಡಿಕೆಶಿ ಹೀಗೆ ಹೇಳಿದರೋ!ಆಗ ವಿ.ಡಿ.ಸತೀಶನ್ ಇನ್ನಷ್ಟು ಉಗ್ರರೂಪಿಯಾಗಿ ‘ಸಿಕ್ಕರೆ ಸಿಎಂ ಗಿರಿ ಇಲ್ಲದಿದ್ದರೆ ಏನೂ ಬ್ಯಾಡ್ರೀ’ ಅಂತ ಪಟ್ಟು ಹಿಡಿದಿದ್ದಾರೆ. ಹೀಗೆ ಅವರು ರೊಚ್ಚಿಗೆದ್ದು ಕೂತ ರೀತಿಯನ್ನು ನೋಡಿದ ರಾಹುಲ್ ಗಾಂಧಿ ಮತ್ತಿತರರಿಗೆ ಚಿಂತೆ ಶುರುವಾಗಿದೆ. ಯಾಕೆಂದರೆ ಎಲ್ಲವನ್ನೂ ಓವರ್ ಕಮ್ ಮಾಡಿ ಕೆ.ಸಿ.ವೇಣುಗೋಪಾಲ್ ಅವರನ್ನು ಸಿಎಂ ಮಾಡಿದರೆ ಮುಂದೆ ಹಲವು ಸವಾಲುಗಳು ಎದುರಾಗುತ್ತವೆ.
ಬಹು ಮುಖ್ಯವಾಗಿ ಸಿಎಂ ಆದ ಕೂಡಲೇ ಕೆ.ಸಿ.ವೇಣುಗೋಪಾಲ್ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಅದೇ ರೀತಿ ಪಕ್ಷದ ಯಾವುದಾದರೂ ಶಾಸಕರ ಕೈಲಿ ರಾಜೀನಾಮೆ ಕೊಡಿಸಿ ಉಪಚುನಾವಣೆಗೆ ಸ್ಪರ್ಧಿಸಬೇಕು.
ಅಂತಹ ಸಂದರ್ಭದಲ್ಲಿ ವಿ.ಡಿ.ಸತೀಶನ್ ತಿರುಗಿ ಬಿದ್ದರೆ ವೇಣುಗೋಪಾಲ್ ತೆರವು ಮಾಡಿದ ಕ್ಷೇತ್ರದಲ್ಲೂ ಕಾಂಗ್ರೆಸ್ ಸೋಲು ಅನುಭವಿಸುತ್ತದೆ. ಇದೇ ರೀತಿ ಉಪಚುನಾವಣೆಯಲ್ಲಿ ಕೆ.ಸಿ.ವೇಣುಗೋಪಾಲ್ ಮಣ್ಣು ಮುಕ್ಕುವ ಸ್ಥಿತಿ ಬರುತ್ತದೆ. ಹಾಗೇನಾದರೂ ಆದರೆ ಯುಡಿಎಫ್ ಸರ್ಕಾರ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ ಎಂಬ ಧಾವಂತ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ವರಿಷ್ಟರು ವೇಣುಗೋಪಾಲ್ ಹೆಸರನ್ನು ಬದಿಗೆ ಸರಿಸಿ ವಿ.ಡಿ.ಸತೀಶನ್ ಅವರಿಗೆ ಪಟ್ಟ ಕಟ್ಟಿ ಕೈ ತೊಳೆದುಕೊಂಡಿದ್ದಾರೆ. ಹೀಗೆ ಕೇರಳದ ಎಪಿಸೋಡು ಸೆಟ್ಲಾದ ನಂತರ ಇಲ್ಲಿ ಡಿಕೆಶಿ ಬೆಂಬಲಿಗರು: ನಮ್ಮ ಸಾಹೇಬ ಸಿಎಂ ಆಗಲು ಕೆ.ಸಿ.ವೇಣುಗೋಪಾಲ್ ಅಡ್ಡಿ ಮಾಡುತ್ತಾ ಬಂದರು. ಈಗ ನಮ್ಮ ಸಾಹೇಬ ವೇಣುಗೋಪಾಲ್ ಅವರಿಗೇ ಗುನ್ನ ಹಾಕಿದ್ರು ಎನ್ನುತ್ತಿದ್ದಾರೆ.
ಇದು ಅಮಿತ ಯುದ್ಧ ಸೂತ್ರ
ಇನ್ನು ಕರ್ನಾಟಕಕ್ಕೆ ಬಂದು ಹೋದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಶಕ್ತಿ ತುಂಬಿ ಹೋಗಿದ್ದಾರೆ. ಅಂದ ಹಾಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಬೇಕು ಅಂತ ರಾಜ್ಯ ಘಟಕದ ಹಲ ನಾಯಕರು ಹೋರಾಡುತ್ತಿದ್ದರೂ ನಬಿನ್ ಅವರು ವಿಜಯೇಂದ್ರ ಅವರ ಪರವಾಗಿಯೇ ಇದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿ ಸಣ್ಣ ಪುಟ್ಟ ಲೋಪವಾಗಿದ್ದರೆ ಸರಿಪಡಿಸಬೇಕೇ ಹೊರತು ನಾಯಕತ್ವವನ್ನು ದುರ್ಬಲ ಮಾಡುವುದಲ್ಲ ಎಂಬುದು ನಬಿನ್ ಲೆಕ್ಕಾಚಾರ.
ಮೂಲಗಳ ಪ್ರಕಾರ,’ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು, ಮುಂದಿನ ಯುದ್ದಕ್ಕೆ ಅಣಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ಲಾನು ರೆಡಿಯಾಗಿದೆ. ಅವರು ಇಂತಹ ಪ್ಲಾನು ರೆಡಿ ಮಾಡಲು 2018 ರ ಅನುಭವವೇ ಕಾರಣ.
ಆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಅಮಿತ್ ಶಾ ಬೆಂಗಳೂರಿನ ಯಲಹಂಕ ಸಮೀಪದ ರೆಸಾರ್ಟ್ ಒಂದರಲ್ಲಿ ಮೀಟಿಂಗು ಮಾಡಿದ್ದರು. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ನಾಯಕಿಯೊಬ್ಬರು: ‘ನಾವು ಚುನಾವಣೆಯಲ್ಲಿ ಗೆಲ್ಲಲು ಅದು ಮಾಡಬೇಕು, ಇದು ಮಾಡಬೇಕು ಅಂತ ವೀರಾವೇಶದಿಂದ ಮಾತನಾಡಿದರಂತೆ. ಆಗ ಅಮಿತ್ ಶಾ ಅವರು: ‘ಇದೆಲ್ಲ ಮಾಡಬೇಕು ಅಂತ ನಮಗೂ ಗೊತ್ತಿದೆ. ಆದರೆ ಇಲ್ಲಿ ಅದನ್ನು ಹೆಗಲ ಮೇಲೆ ಹೊತ್ತು ಮಾಡುವವರು ಯಾರು? ‘ಅಂತ ಪ್ರಶ್ನಿಸಿದ್ದರಂತೆ. ಆಗ ಮತ್ತೊಬ್ಬ ನಾಯಕರು ಎದ್ದು ನಿಂತು, ‘ನಾವು ಕಾಂಗ್ರೆಸ್ ಸರ್ಕಾರದ ವಿರುದ್ದ ಅಷ್ಟು ಪ್ರತಿಭಟನೆ ಮಾಡಿದ್ದೇವೆ. ಇಷ್ಟು ಟೀಕೆ ಮಾಡಿದ್ದೇವೆ’ ಎಂದರಂತೆ. ಅಗ ಅಮಿತ್ ಶಾ ಅವರು ‘ಕೆಟ್ಟ ಸರ್ಕಾರ, ದುಷ್ಟ ಸರ್ಕಾರ, ಭ್ರಷ್ಟ ಸರ್ಕಾರ ಅಂತ ಟೀಕೆ ಮಾಡುವುದು ಹೋರಾಟವಲ್ಲ. ಬದಲಿಗೆ ಜನರ ಮನಸ್ಸಿನಲ್ಲುಳಿಯುವಂತೆ ಮಾಡುವುದು ಹೋರಾಟ. ಇಲ್ಲಿ ನೀವು ಮಾಡಿದ ಪ್ರತಿಭಟನೆಯ ವಿರುದ್ದ ಲಾಠಿ ಚಾರ್ಜ್ ಅಗಿದೆಯೇ?ಗೋಲಿಬಾರ್ ಅಗಿದೆಯೇ?’ಅಂತ ಕೇಳಿದ್ದಾರೆ.

ಆದರೆ ಮುಂದೆ ಅತಂತ್ರ ವಿಧಾನಸಭೆ ಬಂದು ಮೈತ್ರಿ ಸರ್ಕಾರ ರಚನೆಯಾಗಿ, ಅದನ್ನು ಬೀಳಿಸಿ ಬಿಜೆಪಿ ಸರ್ಕಾರ ರಚಿಸಿದ ಬೆಳವಣಿಗೆ ನಡೆಯಿತು.
ಆದರೆ ಅವತ್ತಿನ ಬೆಳವಣಿಗೆ ಅಮಿತ್ ಶಾ ಅವರಿಗೆ ಇಷ್ಟವಾಗಿರಲಿಲ್ಲ. ಕಾರಣ? ನಾವೇ ಸ್ವಯಂ ಅಗಿ ಅಧಿಕಾರಕ್ಕೆ ಬರುವ ಶಕ್ತಿ ಗಳಿಸಿಕೊಳ್ಳಬೇಕೇ ಹೊರತು ಮೀಸಳ್ ಭಾಜಿ ಸರ್ಕಾರ ಮಾಡುವಂತಿರಬಾರದು ಎಂಬುದು ಅವರ ಯೋಚನೆ.
ಹೀಗಾಗಿ 2028 ರಲ್ಲಿ ಸ್ವಯಂ ಅಗಿ ಅಧಿಕಾರಕ್ಕೆ ಬರಲು ಅವರು ಸ್ಕೆಚ್ ಹಾಕಿದ್ದಾರೆ. ಅರ್ಥಾತ್, ಮುಂದಿನ ದಿನಗಳಲ್ಲಿ ಜನರ ಮನಸ್ಸಿನಲ್ಲುಳಿಯುವಂತಹ ಹೋರಾಟಗಳಿಗೆ ರಾಜ್ಯ ಬಿಜೆಪಿ ಅಣಿಯಾಗಬೇಕು ಎಂಬುದು ಅಮಿತ್ ಶಾ ಸುಪಾರಿ.
ಇದು ನಿತಿನ್ ನಬಿನ್ ಅವರಿಗೆ ಗೊತ್ತು. ಹೀಗಾಗಿ ಅವರು ಪಕ್ಷದ ರಾಜ್ಯಘಟಕದಲ್ಲಿ ಯಥಾಸ್ಥಿತಿ ಮುಂದುವರಿಯಲಿ. ಉಳಿದದ್ದು ನಮಗಿರಲಿ ಎಂಬ ಧೋರಣೆ ಹೊಂದಿದ್ದಾರೆ.

ಲಾಸ್ಟ್ ಸಿಪ್
ಕಳೆದ ವಾರ ತಿರುವನಂತಪುರಕ್ಕೆ ಹೋದಾಗ ರಾಹುಲ್ ಗಾಂದಿಯವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು:’ನಿಮ್ಮ ಬಳಿ ಮಾತನಾಡುವುದಿದಿದೆ. ಟೈಮು ಕೊಡಿ ದಿಲ್ಲಿಗೆ ಬರುತ್ತೇನೆ’ ಎಂದಿದ್ದಾರೆ. ಆದರೆ ಅದರ ಬಗ್ಗೆ ಅಸಕ್ತಿ ತೊರದ ರಾಹುಲ್ ಗಾಂಧಿ:ಓಕೆ. ಅದಷ್ಟು ಬೇಗ ಹೇಳುತ್ತೇನೆ’ ಎಂದಿದ್ದಾರೆ. ಅಲ್ಲಿಗೆ ಸಂಪುಟ ಪುನರ್ರಚನೆ, ಅದಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿದೆ ಅಂತಲೇ ಅರ್ಥ.
