ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ರೌಡಿಶೀಟರ್ ಟೊಪ್ಪಿ ನೌಫಾಲ್ ಸಹೋದರನ ಬಂಧನ.

ಕರಾವಳಿ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊರ್ವ ಆರೋಪಿ ಮೊಹಮ್ಮದ್ ಇಬ್ರಾಹಿಂ ಸಿನಾನ್ @ ಚಿನ್ನು, ಎಂಬಾತನನ್ನು ದಿನಾಂಕ 25-05-2026 ರಂದು ಸಿಸಿಬಿ ಪೊಲೀಸರು ಬಂಧಿಸಿರುತ್ತಾರೆ.

ತೊಕ್ಕೊಟ್ಟು ಪ್ಲೈಓವರ್ ಮೇಲಿಂದ ಬೈಕ್ನಲ್ಲಿ ಸಂಚರಿಸುತ್ತಿದ್ದ ಆರೀಫ್ ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕೆಡವಿ, ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದರು. ಬಳಿಕ ಕೃತ್ಯಕ್ಕೆ ಬಳಸಿದ ಕಾರನ್ನು ಬಂಟ್ವಾಳ ತಾಲೂಕಿನ ಬುಡೋಳಿ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆಯನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

ಆರೋಪಿ ಮೊಹಮ್ಮದ್ ಇಬ್ರಾಹಿಂ ಸಿನಾನ್ @ ಚಿನ್ನು, ವಿರುದ್ಧ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ ಪ್ರಕರಣ ಹಾಗೂ 2024ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಆರೋಪಿಯು 2026ರ ಫೆಬ್ರವರಿ ತಿಂಗಳಲ್ಲಿ ಆರೀಫ್ ಹುಸೇನ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸಮಯ ಹಾಜರಿದ್ದ ಬಗ್ಗೆ ಹಾಗೂ 27-03-2026 ರಂದು ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ. ಈತ ಮೃತ ರೌಡಿಶೀಟರ್ “ಟೊಪ್ಪಿ ನೌಫಾಲ್” ಎಂಬಾತನ ಸಹೋದರ.

ಈ ಕೊಲೆ ಪ್ರಕರಣದಲ್ಲಿ ಈಗಾಗಲೇ ಒಂಬತ್ತು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಅವರ ವಿರುದ್ಧ “ಕೋಕಾ ಕಾಯಿದೆ” ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ.