ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ: ತಿನ್ನಲು ಯೋಗ್ಯವಲ್ಲ: ಆಹಾರ ಇಲಾಖೆ
ಬೇಕರಿ ಪದಾರ್ಥ, ಮಿಕ್ಸರ್, ಚಿಪ್ಸ್ ಹಾಗೂ ಬಣ್ಣ ಬಣ್ಣದ ಸ್ವೀಟ್ ಗಳು ಮಾನವನ ಬಳಕೆಗೆ ಅಸುರಕ್ಷಿತವಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಹೋಟೆಲ್ ಗಳು, ಬೇಕರಿಗಳು, ಸ್ವೀಟ್ ಸ್ಟಾಲ್ ಗಳು ಮತ್ತು ಉತ್ಪಾದನಾ ಘಟಕಗಳಿಂದ ಒಟ್ಟು 35,639 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇವುಗಳಲ್ಲಿ ಒಟ್ಟಾರೆ ಪರೀಕ್ಷಿಸಿದ ಮಾದರಿಗಳ ಪೈಕಿ ಸುಮಾರು ಶೇಕಡಾ 12 ರಿಂದ 15 ರಷ್ಟು ಆಹಾರ ಪದಾರ್ಥಗಳು ಮಾನವ ಬಳಕೆಗೆ ಯೋಗ್ಯವಾಗಿಲ್ಲ ಅಥವಾ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ತಿಳಿದುಬಂದಿದೆ.

ಪರೀಕ್ಷಿಸಲಾದ ಬೇಕರಿ ಮತ್ತು ಕರಿದ ತಿಂಡಿಗಳ ಪೈಕಿ ಅತಿ ಹೆಚ್ಚು ಅಂದರೆ 400 ಕ್ಕೂ ಹೆಚ್ಚು ಮಾದರಿಗಳು ವಿಫಲವಾಗಿವೆ. ವಿವಿಧ ಮಾದರಿ ರೀತಿಯ ಮಿಕ್ಸರ್, ಚಿಪ್ಸ್ ಹಾಗೂ ಬಣ್ಣ ಬಣ್ಣದ ಸ್ವೀಟ್ ಗಳಲ್ಲಿ ನಿಷೇಧಿತ ಕೃತಕ ಬಣ್ಣಗಳನ್ನು ಮಿತಿ ಮೀರಿ ಬಳಸಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಶೇಕಡಾ 80ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಿಷೇಧಿತ ಕೃತಕ ಬಣ್ಣಗಳ ಮಿತಿಮೀರಿದ ಬಳಕೆ ಪತ್ತೆಯಾಗಿದೆ. ಇವುಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಗಳು ಇರುವುದು ಗೊತ್ತಾಗಿದೆ.
ನಿತ್ಯ ಬಳಕೆಯ ಹಾಲು, ಪನ್ನೀರ್, ಬೆಣ್ಣೆ ಮತ್ತು ತುಪ್ಪದಲ್ಲಿ ವ್ಯಾಪಕವಾಗಿ ಕಲಬೆರಕೆ ಮಾಡಲಾಗುತ್ತಿದೆ. ಹಾಲಿನ ಸಾಂದ್ರತೆ ಹೆಚ್ಚಿಸಲು ಯೂರಿಯಾ, ಡಿಟರ್ಜೆಂಟ್ ಅಥವಾ ಸ್ಪಾರ್ಚ್ ಬಳಸಿರುವುದು ಮತ್ತು ಪನ್ನೀರ್ ನಲ್ಲಿ ಸಸ್ಯಜನ್ಯ ಎಣ್ಣೆ ಬಳಸಿರುವುದು ಪತ್ತೆಯಾಗಿದೆ. ಪರೀಕ್ಷಿಸಲಾದ ಹಾಲಿನ ಉತ್ಪನ್ನಗಳ ಪೈಕಿ ಸುಮಾರು 250 ಕ್ಕೂ ಹೆಚ್ಚು ಮಾದರಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದೆ. ಇದರಲ್ಲಿ ಮುಖ್ಯವಾಗಿ ಪನೀರ್ ಮತ್ತು ತುಪ್ಪದಲ್ಲಿ ಸಸ್ಯಜನ್ಯ ಎಣ್ಣೆ ಹಾಗೂ ಸ್ಪಾರ್ಚ್ ಕಲಬೆರಕೆ ಮಾಡಿರುವುದು ಶೇಕಡಾ 35 ರಷ್ಟು ಪ್ರಕರಣಗಳಲ್ಲಿ ದೃಢಪಟ್ಟಿದೆ.

ಬೇಕರಿ ಹಾಗೂ ನಮ್ಕೀನ್ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಪದೇ ಪದೇ ಕಾಯಿಸಿ ತಿಂಡಿಯನ್ನು ತಯಾರಿಸುತ್ತಿರುವುದು ಕಂಡು ಬಂದಿದೆ. ಇದು ಮಾನವನ ಹೃದಯದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾದ ‘ಟ್ರಾನ್ಸ್ ಫ್ಯಾಟ್’ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಬ್ಬದ ಸೀಸನ್ ಹಾಗೂ ದಿನನಿತ್ಯದ ಬಳಕೆಯ ಆಹಾರ ಪದಾರ್ಥಗಳ ಗುಣಮಟ್ಟದ ಮೇಲೆ ನಾವು ಕಟ್ಟುನಿಟ್ಟಿನ ನಿಗಾ ಇಟ್ಟಿದ್ದೇವೆ. ಯಾವುದೇ ಕಾರಣಕ್ಕೂ ಕಲಬೆರಕೆ ಅಥವಾ ಕೃತಕ ರಾಸಾಯನಿಕಯುಕ್ತ ಆಹಾರ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಗ್ರಾಹಕರು ಕೂಡ ಪ್ಯಾಕ್ ಮಾಡಿದ ತಿಂಡಿಗಳನ್ನು ಕೊಳ್ಳುವಾಗ ಎಫ್ ಎಸ್ ಎಸ್ ಎಐ ಪರವಾನಿಗೆ ಮತ್ತು ಅವಧಿ ಮುಗಿಯುವ ದಿನಾಂಕವನ್ನು ಕಡ್ಡಾಯವಾಗಿ ಗಮನಿಸಬೇಕು ಎಂದು ಆಹಾರ ಸುರಕ್ಷತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
2025-26 ನೇ ಸಾಲಿನಲ್ಲಿ ರಾಜ್ಯದಲ್ಲಿ ಆಹಾರ ಉದ್ಯಮದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ.3.83 ಲಕ್ಷ ಹೊಸ ಆಹಾರ ಉದ್ಯಮಗಳು ನೋಂದಣೆಯಾಗಿದೆ. ಇದರಿಂದ ಪ್ರಸಕ್ತ ವರ್ಷ 25 ಕೋಟಿ ರೂಪಾಯಿ ಆದಾಯವನ್ನು ಗಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

390 ಕ್ರಿಮಿನಲ್ ಪ್ರಕರಣಗಳು ದಾಖಲು
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ನೂರಾರು ಸಂಸ್ಥೆಗಳು ಮತ್ತು ತಯಾರಕರ ವಿರುದ್ಧ ಇಲಾಖೆಯು ಕಾನೂನು ಕ್ರಮ ಜರುಗಿಸಿದೆ. ರಾಜ್ಯಾದ್ಯಂತ ನಿಯಮ ಉಲ್ಲಂಘಿಸಿದ ತಯಾರಕರ ವಿರುದ್ಧ ಒಟ್ಟು 390 ಕ್ಕೂ ಹೆಚ್ಚು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಗುಣಮಟ್ಟವಿಲ್ಲದ ಆಹಾರ ಮಾರಾಟ ಮಾಡುತ್ತಿದ್ದ ಸಂಸ್ಥೆಗಳಿಗೆ ಒಟ್ಟು 77 ಲಕ್ಷ ರೂಪಾಯಿ ಗೂ ಅಧಿಕ ಭಾರಿ ಮೊತ್ತದ ದಂಡವನ್ನು ವಿಧಿಸಲಾಗಿದೆ. ಕೆಲವು ಅನಧಿಕೃತ ಘಟಕಗಳಿಗೆ ಬೀಗ ಜಡಿಯಲಾಗಿದೆ.
