ಈಗಲೇ ನಾಯಕತ್ವ ಬದಲಾವಣೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಾಭವಾಗಬಹುದು ಅನ್ನುವ ದೂರದೃಷ್ಟಿ
ಕರ್ನಾಟಕ ರಾಜಕೀಯದ ಭವಿಷ್ಯ ನಿರ್ಧಾರವಾಗುವ ಸಮಯ ಹತ್ತಿರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ನಡುವಿನ ನಾಯಕತ್ವದ ಸಂಘರ್ಷ ಈಗ ಅಂತಿಮ ಹಂತಕ್ಕೆ ತಲುಪಿದ್ದು ಹೈಕಮಾಂಡ್ ಸರಣಿ ಸಭೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಗಾಂಧಿ ಅವರು ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವುದು ಸಿದ್ದರಾಮಯ್ಯ ಬಣದಲ್ಲಿ ಭಾರಿ ತಲ್ಲಣ ಮೂಡಿಸಿದೆ.
ಪ್ರಬಲ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಡಿಕೆ ಶಿವಕುಮಾರ್ ಪಕ್ಷದ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2028ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಲೇ ನಾಯಕತ್ವ ಬದಲಾವಣೆ ಮಾಡಿದರೆ ಪಕ್ಷಕ್ಕೆ ದೀರ್ಘಕಾಲದ ಲಾಭವಾಗಲಿದೆ ಎಂಬುದು ಪ್ರಿಯಾಂಕಾ ಗಾಂಧಿ ಅವರ ವಾದ. ಡಿಕೆಶಿಯವರ ನಿರಂತರ ಪರಿಶ್ರಮ, ಸಂಘಟನಾ ಚಾತುರ್ಯ ಮತ್ತು ಪಕ್ಷದ ಮೇಲಿನ ನಿಷ್ಠೆಯನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ನ್ಯಾಯಯುತವಾಗಿದೆ ಎಂದು ಅವರು ಹೈಕಮಾಂಡ್ ಮುಂದೆ ಪ್ರತಿಪಾದಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತ್ಯೇಕ ಸಭೆಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಮ್ಮದೇ ಆದ ವಾದಗಳನ್ನು ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಕೇವಲ ಸಚಿವ ಸಂಪುಟ ಪುನರ್ ರಚನೆಯ ಬೇಡಿಕೆಯನ್ನು ಮುಂದಿಟ್ಟು ಆಡಳಿತ ಸುಧಾರಣೆಯ ಮಾತುಗಳನ್ನಾಡಿದ್ದರೆ, ಡಿಕೆ ಶಿವಕುಮಾರ್ ಮಾತ್ರ ಅಧಿಕಾರ ಹಂಚಿಕೆಯ ಮೂಲ ಒಪ್ಪಂದದಂತೆ ತಮಗೆ ಮುಖ್ಯಮಂತ್ರಿ ಪಟ್ಟ ನೀಡಲೇಬೇಕು ಎಂದು ಹಠಕ್ಕೆ ಬಿದ್ದಿದ್ದಾರೆ. ಸುಮಾರು 40 ನಿಮಿಷಗಳ ಕಾಲ ನಡೆದ ಈ ರಹಸ್ಯ ಸಭೆಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಪ್ರಿಯಾಂಕಾ ಗಾಂಧಿ ಅವರ ಬೆಂಬಲ ಡಿಕೆ ಶಿವಕುಮಾರ್ ಬಣಕ್ಕೆ ಆನೆ ಬಲ ತಂದಿದೆ. ಹೈಕಮಾಂಡ್ ಈ ಇಬ್ಬರೂ ಘಟಾನುಘಟಿ ನಾಯಕರ ವಾದಗಳನ್ನು ಕೂಲಂಕಷವಾಗಿ ಆಲಿಸಿದ್ದಾರೆ. ಸದ್ಯಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಸ್ಥಿರತೆ ಉಂಟಾಗದಂತೆ ಎಚ್ಚರಿಕೆ ವಹಿಸಿರುವ ಹೈಕಮಾಂಡ್, ಶೀಘ್ರದಲ್ಲೇ ಒಂದು ಕಠಿಣ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಪ್ರಿಯಾಂಕಾ ಗಾಂಧಿ ಅವರ ಒಲವು ಡಿಕೆ ಶಿವಕುಮಾರ್ ಕಡೆ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾದರೂ ಅಚ್ಚರಿಯಿಲ್ಲ.
