ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಜೂನ್ ಆರರಂದು ನೀಟ್ ಪರೀಕ್ಷೆ ಅವ್ಯವಸ್ಥೆ ವಿರುದ್ದ CJP ಯಿಂದ ಪ್ರತಿಭಟನೆ

ರಾಷ್ಟ್ರೀಯ

ದೆಹಲಿ: ಪರೀಕ್ಷಾ ಸಂಬಂಧಿತ ಲೋಪದೋಷ, ವಿವಾದಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಜೂನ್ 6 ರಂದು ಭಾರತಕ್ಕೆ ಮರಳುವುದಾಗಿ ಹಾಗೂ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ‘ಕಾಕ್ರೋಚ್ ಜನತಾ ಪಾರ್ಟಿ’ಯ ಸ್ಥಾಪಕ ಅಭಿಜೀತ್ ದಿಪ್ಕೆ ಸೋಮವಾರ ಘೋಷಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪರೀಕ್ಷಾ ಸಂಬಂಧಿತ ಗೊಂದಲಗಳು ಮತ್ತು ವಿವಾದಗಳು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿವೆ ಮತ್ತು ಸರ್ಕಾರವು ಇದಕ್ಕೆ ಹೊಣೆಗಾರಿಕೆಯನ್ನು ಹೊರಬೇಕು ಎಂದು ಹೇಳುತ್ತಾ, ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.

​”ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಒತ್ತಾಯಿಸಲು ನಾವೆಲ್ಲರೂ ಒಗ್ಗೂಡಿ ಶಾಂತಿಯುತವಾಗಿ ಧ್ವನಿ ಎತ್ತಬೇಕಾದ ಸಮಯ ಬಂದಿದೆ. ನಾವು ಒಟ್ಟಾಗಿ ಧ್ವನಿ ಎತ್ತಿದರೆ, ಅವರು ಖಂಡಿತವಾಗಿಯೂ ನಮ್ಮ ಮಾತನ್ನು ಕೇಳಲೇಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ. ಸಂವಿಧಾನದ ಅಡಿಯಲ್ಲಿ ಪ್ರಜೆಗಳು ಒಗ್ಗೂಡಿ ಶಾಂತಿಯುತವಾಗಿ ತಮ್ಮ ಧ್ವನಿಯನ್ನು ಎತ್ತಬೇಕು ಎಂದು ಕರೆ ನೀಡಿದ ದಿಪ್ಕೆ, ಸಾಮೂಹಿಕ ಕ್ರಮವು ಅಧಿಕಾರಿಗಳನ್ನು ಈ ಬೇಡಿಕೆಯನ್ನು ಗಮನಿಸುವಂತೆ ಒತ್ತಾಯಿಸುತ್ತದೆ ಎಂದು ತಿಳಿಸಿದರು.

​ಜೂನ್ 6ರ ಶನಿವಾರ ಬೆಳಗ್ಗೆ ದೆಹಲಿಗೆ ಆಗಮಿಸಲು ನಿರ್ಧರಿಸಿದ್ದು, ದಯವಿಟ್ಟು ವಿಮಾನ ನಿಲ್ದಾಣದಲ್ಲಿ ನನ್ನೊಂದಿಗೆ ಸೇರಿಕೊಳ್ಳಿ. ನಾವೆಲ್ಲರೂ ಒಟ್ಟಾಗಿ ಸಂಸತ್ ಮಾರ್ಗದ ಪೊಲೀಸ್ ಠಾಣೆಗೆ ತೆರಳಿ, ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೋರೋಣ” ಎಂದು ಅವರು ತನ್ನ ಬೆಂಬಲಿಗರಿಗೆ ತಿಳಿಸಿದ್ದಾರೆ.