ಮನೆ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಗೃಹಿಣಿಯರು ರಾಷ್ಟ್ರ ನಿರ್ಮಾಣಕಾರರು

ಕರಾವಳಿ

ಗೃಹಿಣಿಯರ ಕೆಲಸ ಪ್ರತಿ ತಿಂಗಳ 30,000 ರೂಪಾಯಿ ವೇತನಕ್ಕೆ ಸಮ: ಸುಪ್ರೀಂ ಕೋರ್ಟ್

ಮನೆ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಗೃಹಿಣಿಯರ ಕೆಲಸ ಸಮಾಜ ಮತ್ತು ರಾಷ್ಟ್ರ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮಹತ್ವದ ಕಾರ್ಯ ನಿರ್ವಹಿಸುವ ಮಹಿಳೆಯರನ್ನು ಗೃಹಿಣಿ ಬದಲು ರಾಷ್ಟ್ರ ನಿರ್ಮಾಣಕಾರರು ಎಂದು ಪರಿಗಣಿಸುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಗೃಹಿಣಿಯರ ಕೆಲಸ ಪ್ರತಿ ತಿಂಗಳು 30 ಸಾವಿರ ರೂಪಾಯಿ ಸಂಬಳಕ್ಕೆ ಸಮ ಎಂದು ತೀರ್ಪು ನೀಡಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪತ್ನಿ ಸಾವಿಗೆ ಹೆಚ್ಚಿನ ಪರಿಹಾರ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ನ್ಯಾಯಮೂರ್ತಿ ಎನ್.ಕೆ ಸಿಂಗ್ ಅವರಿದ್ದ ಪೀಠ “ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮನೆ ಆರೈಕೆಯ ನಷ್ಟವನ್ನು ಪ್ರತ್ಯೇಕ ಪರಿಹಾರದ ಶೀರ್ಷಿಕೆಯಾಗಿ ಗುರುತಿಸಬೇಕು” ಎಂದು ಸೂಚಿಸಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಕುಟುಂಬಕ್ಕೆ 8 ಲಕ್ಷ ರೂಪಾಯಿ ಪರಿಹಾರ ನೀಡಿದ್ದ ಹರಿಯಾಣ-ಪಂಜಾಬ್ ಹೈಕೋರ್ಟ್ ಆದೇಶ ಪರಿಗಣಿಸಿದ ಸುಪ್ರೀಂ ಕೋರ್ಟ್ ಹಿಂದಿನ ಪರಿಹಾರ ಹಣಕ್ಕೆ ಬಡ್ಡಿ ಸೇರ್ಪಡೆಗೊಳಿಸಿ 62.77 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿತು.

ಸಂಬಳವಿಲ್ಲದೆ ಕೆಲಸ ಮಾಡುವ ಗೃಹಿಣಿಯರು ಕುಟುಂಬ ಹಾಗೂ ಸಮಾಜಕ್ಕೆ ನೀಡುವ ಕೊಡುಗೆಯು ಯಾವುದೇ ಕೆಲಸಕ್ಕಿಂತ ಚಿಕ್ಕದಲ್ಲ. ರಾಷ್ಟ್ರ ನಿರ್ಮಾಣಕ್ಕೂ ಕೊಡುಗೆ ನೀಡುತ್ತಾರೆ. ಅವರ ಅಮೂಲ್ಯವಾದ ಕೊಡುಗೆಯನ್ನು ಯಾವ ಮಾನದಂಡದಲ್ಲಿ ನಿರ್ಣಯಿಸುತ್ತೀರಿ. ಆರ್ಥಿಕ ಮೌಲ್ಯವನ್ನು ಹೇಗೆ ನಿರ್ಧರಿಸುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿತು.