ಪಾರ್ಕಿಂಗ್‌ ದೀಪ, ಸೂಚನಾ ಫಲಕ ಇಲ್ಲದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಮಾತ್ರಕ್ಕೆ, ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ, ಆತನೇ ತಪ್ಪಿತಸ್ಥ ಎಂಬ ವಾದವನ್ನು ಒಪ್ಪಲಾಗದು: ಸುಪ್ರೀಂ ಕೋರ್ಟ್

ರಾಷ್ಟ್ರೀಯ

ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಪಾರ್ಕಿಂಗ್‌ ದೀಪ, ಪ್ರತಿಫಲಕ ಅಥವಾ ಸೂಚನಾ ಫಲಕಗಳಿಲ್ಲದೆ ನಿಲುಗಡೆ ಮಾಡಲಾದ ಟ್ರಕ್‌ಗೆ ಕಾರು ಚಾಲಕನೊಬ್ಬ ಹಿಂದಿನಿಂದ ಡಿಕ್ಕಿ ಹೊಡೆದರೆ, ಆ ಅಪಘಾತಕ್ಕೆ ಟ್ರಕ್ ಚಾಲಕ ಮತ್ತು ಅದರ ಮಾಲೀಕರೇ ಪ್ರಾಥಮಿಕ ಹೊಣೆಗಾರರಾಗುತ್ತಾರೆ. ಇದರಲ್ಲಿ ಕಾರು ಚಾಲಕನ ತಪ್ಪೇನೂ ಇಲ್ಲ’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ದೆಹಲಿಯಲ್ಲಿ 2013ರಲ್ಲಿ 20 ವರ್ಷದ ಚಾರ್ಟರ್ಡ್‌ ಅಕೌಂಟೆನ್ಸಿ ವಿದ್ಯಾರ್ಥಿಯೊಬ್ಬನ ಸಾವಿಗೆ ಕಾರಣವಾಗಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ, ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಪ್ರಶಾಂತ್‌ ಕುಮಾರ್ ಮಿಶ್ರಾ ಮತ್ತು ಎನ್‌.ವಿ ಅಂಜಾರಿಯಾ ಅವರ ಪೀಠವು ವಜಾಗೊಳಿಸಿತು.

ವಿಮಾ ಪರಿಹಾರ ಮೊತ್ತಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ‘ರಾತ್ರಿ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಪಾರ್ಕಿಂಗ್‌ ದೀಪ, ಸೂಚನಾ ಫಲಕ ಇಲ್ಲದೆ ನಿಲ್ಲಿಸಲಾಗಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಮಾತ್ರಕ್ಕೆ, ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ, ಆತನೇ ತಪ್ಪಿತಸ್ಥ ಎಂಬ ವಾದವನ್ನು ಒಪ್ಪಲಾಗದು. ಚಾಲಕನ ‘ನಿರ್ಲಕ್ಷ್ಯ’ವನ್ನು ಸಂದರ್ಭದ ಹಿನ್ನೆಲೆಯಲ್ಲೂ ಪರಿಶೀಲಿಸಬೇಕು’ ಎಂದು ಹೇಳಿದೆ. ‘ರಾತ್ರಿ ವೇಳೆ ಮತ್ತು ಕಡಿಮೆ ಗೋಚರತೆ ಇದ್ದಾಗ ಪಾರ್ಕಿಂಗ್‌ ದೀಪ, ಪ್ರತಿಫಲಕ ಸೇರಿ ಅಗತ್ಯ ಮುನ್ನೆಚ್ಚರಿಕೆ ಪಾಲಿಸದೆ ಭಾರಿ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸುವುದು ಗಂಭೀರ, ಅನಿರೀಕ್ಷಿತ ಅಪಾಯವನ್ನು ಉಂಟುಮಾಡುತ್ತದೆ’ ಎಂದೂ ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ.

2013ರ ಜೂನ್‌ 11ರಂದು ನಸುಕಿನಲ್ಲಿ ದೆಹಲಿಯ ಬಿಆರ್‌ಟಿ ಕಾರಿಡಾರ್‌ನಲ್ಲಿರುವ ಆಂಡ್ರ್ಯೂಸ್ ಗಂಜ್ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿತ್ತು. ಸಿ.ಎ ಅಂತಿಮ ವರ್ಷದ ವಿದ್ಯಾರ್ಥಿ ಆಕಾಶ್ ಕುಮಾರ್, ತನ್ನ ಸ್ನೇಹಿತ ನಿಖಿಲ್‌ ಕುಮಾರ್‌ ಜೈನ್‌ ಚಲಾಯಿಸುತ್ತಿದ್ದ ಕಾರಿನಲ್ಲಿ ಬರುವಾಗ, ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿತ್ತು. ಟ್ರಕ್‌ ಚಾಲಕ ಪಾರ್ಕಿಂಗ್‌ ದೀಪ ‌ಹಾಕಿರಲಿಲ್ಲ, ಸೂಚನಾ ಫಲಕವೂ ಇರಲಿಲ್ಲ. ರಾತ್ರಿ ಮತ್ತು ಕಡಿಮೆ ಗೋಚರತೆ ಇದ್ದಿದ್ದರಿಂದ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಆಕಾಶ್ ಕುಮಾರ್ ಮೃತಪಟ್ಟಿದ್ದರು.

ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿ (ಎಂಎಸಿಟಿ) ಟ್ರಕ್‌ ಚಾಲಕನ ನಿರ್ಲಕ್ಷ್ಯವು ಅಪಘಾತಕ್ಕೆ ಕಾರಣ ಎಂದು ಹೇಳಿ, ಶೇ 9ರಷ್ಟು ಬಡ್ಡಿಯೊಂದಿಗೆ ₹81.21 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತು. ಕಾರು ಚಾಲಕನ ನಿರ್ಲಕ್ಷ್ಯವೂ ಅಪಘಾತಕ್ಕೆ ಕಾರಣ ಎಂಬ ವಿಮಾ ಕಂಪನಿಯ ಮನವಿಯನ್ನು ತಿರಸ್ಕರಿಸಿತು. ದೆಹಲಿ ಹೈಕೋರ್ಟ್ ಕೂಡ ಈ ನಿರ್ಧಾರವನ್ನು ಎತ್ತಿಹಿಡಿಯಿತು. ಇದರ ವಿರುದ್ಧ ವಿಮಾ ಕಂಪನಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. 80 ಸಾವಿರ ರೂ. ಹೆಚ್ಚುವರಿ ಪರಿಹಾರ ಸೇರಿಸಿ, ನಾಲ್ಕು ವಾರಗಳಲ್ಲಿ 82.01 ಲಕ್ಷ ರೂ. ಪರಿಹಾರ ಮೊತ್ತವನ್ನು ಪಾವತಿಸುವಂತೆ ಸುಪ್ರೀಂಕೋರ್ಟ್‌ ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.