ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ, ಆರೋಗ್ಯ ಕೇಂದ್ರಗಳ ಔಷಧಿ ಮೂಲಭೂತ ಸೌಕರ್ಯಗಳ ಕೊರತೆಗೆ ಸಂಬಂಧಿಸಿದ ಅಧ್ಯಯನಕ್ಕಾಗಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಗುರುಪುರ ವಲಯ ಸಮಿತಿಯು ಸಮಿತಿಯನ್ನು ರಚಿಸಿದ್ದು, ಈ ನಿಯೋಗವು ಗುರುಪುರ ಹೋಬಳಿಯಲ್ಲಿರುವ ಕುಪ್ಪೆಪದವು, ಗಂಜಿಮಠ, ಕೊಂಪದವು, ಕುಡುಪು ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಮಾಹಿತಿ ಸಂಗ್ರಹಿಸಿತು.
ಗುರುಪುರ ಹೋಬಳಿಯಲ್ಲಿರುವ ನಾಲ್ಕು ಆರೋಗ್ಯ ಕೇಂದ್ರಗಳ ಪೈಕಿ ಕುಡುಪು ಮತ್ತು ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊರತುಪಡಿಸಿದರೆ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರವು ಕೊಂಪದವು, ಮುಚ್ಚೂರು, ಬಡಗ ಎಡಪದವು, ತೆಂಕ ಎಡಪದವುಗಳೆಂಬ ವಿಸ್ತಾರ ಪ್ರದೇಶವನ್ನು ಹೊಂದಿದ್ದು, ಬಹು ಜನಸಂಖ್ಯೆಯನ್ನು ಹೊಂದಿರುವ ಗ್ರಾಮೀಣ ಪ್ರದೇಶವು ಇದಾಗಿದೆ. ಆದರೆ ಇಲ್ಲಿರುವ ವೈದ್ಯರು ಕೂಡ ಇತರೇ ಪ್ರಾಥಮಿಕ ಆರೋಗ್ಯ ಕೇಂದ್ರದ ಜವಾಬ್ದಾರಿಯಿಂದಾಗಿ ಕೊಂಪದವಿನಲ್ಲಿ ವೈದ್ಯರ ಕೊರತೆ ಎದುರಾಗುತ್ತಿದೆ. ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳು ಇತರೆ ಹೆಚ್ಚುವರಿ ಜವಾಬ್ದಾರಿಗಳ ಕಾರಣದಿಂದ ಕೇವಲ ಎರಡು ದಿನ ಮಾತ್ರವೇ ಆರೋಗ್ಯ ಕೇಂದ್ರದಲ್ಲಿ ಲಭ್ಯವಿರುತ್ತಾರೆ.

ಬಹುತೇಕ ಆರೋಗ್ಯ ಕೇಂದ್ರದ ವೈದ್ಯರುಗಳಿಗೆ ಹೆಚ್ಚುವರಿ ಹೊಣೆಗಾರಿಕೆ, ಕಾರಾಗೃಹದ ಜವಾಬ್ದಾರಿ, ಇತರೇ ಕೆಲಸಗಳು ಎಂಬಂತೆ ರೋಗಿಗಳಿಗೆ ನಿತ್ಯವೂ ವೈದ್ಯರು ದೊರಕುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಅಧೀನದಲ್ಲಿರುವ ಉಪ ಆರೋಗ್ಯ ಕೇಂದ್ರಗಳು ಕೂಡ ಸಿಬ್ಬಂದಿಗಳಿರದೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗುರುಪುರ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ಬಹುಪಾಲು ಎದುರಿಸುತ್ತಿದೆ. ಇರುವ ಸಿಬ್ಬಂದಿಗಳಲ್ಲಿ ಅನೇಕರು ಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುಪುರ ಹೋಬಳಿಯು ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿದ್ದು ಸಾಂಕ್ರಾಮಿಕ ರೋಗಗಳು, ಹಾವು ಕಡಿತ, ನಾಯಿ ಕಡಿತದಂತಹ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗಿದ್ದು ಈ ಭಾಗದ ಜನರು ಹೆಚ್ಚಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅವಲಂಭಿಸಿರುವಾಗ ಸರಕಾರವು ಈ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವತ್ತ ಗಮನ ಹರಿಸಬೇಕಾಗಿತ್ತು. ಆದರೆ ಸರಕಾರವು ಈ ಕುರಿತು ಗಮನಹರಿಸುತ್ತಿಲ್ಲ. ಬದಲಿಗೆ, ಆರೋಗ್ಯ ಕೇಂದ್ರಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಈಗಿನ ಆರೋಗ್ಯ ಸಚಿವರು ಮುಂದಾಗಿರುವುದು ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಯಲ್ಲಿ ಮತ್ತಷ್ಟು ಸಂಕಷ್ಟವನ್ನು ಉಂಟು ಮಾಡಿದೆ.

ಸಿಪಿಎಂ ಗುರುಪುರ ವಲಯ ಸಮಿತಿಯು ಗುರುಪುರ ಹೋಬಳಿಯ ಸರಕಾರಿ ಆಸ್ಪತ್ರೆಗಳ ಬಲವರ್ಧನೆಗಾಗಿ ಹೋರಾಟವನ್ನು ನಡೆಸುತ್ತಿದ್ದು, ಈಗ ಸಂಗ್ರಹಿಸಿರುವ ಮಾಹಿತಿಯಲ್ಲಿ ಕಂಡು ಬಂದಿರುವ ಗುರುಪುರ ವಲಯದ ಆರೋಗ್ಯ ಕೇಂದ್ರಗಳ ಸಮಸ್ಯೆಗಳು, ಕೊರತೆಗಳನ್ನು ಆರೋಗ್ಯ ಇಲಾಖೆ ಹಾಗು ಜನತೆಯ ಮುಂದಿಟ್ಟು ಜನಾಭಿಪ್ರಾಯಗಳನ್ನು ರೂಪಿಸುವ ಮೂಲಕ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಈ ನಿಯೋಗದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಇದರ ದ. ಕ ಜಿಲ್ಲಾ ಕಾರ್ಯದರ್ಶಿಯಾದ ಮುನೀರ್ ಕಾಟಿಪಳ್ಳ, ಜಿಲ್ಲಾ ಸಮಿತಿ ಮುಖಂಡರಾದ ಸದಾಶಿವ ದಾಸ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರ್, ವಲಯ ಸಮಿತಿ ಸದಸ್ಯರಾದ ಅಶೋಕ್ ಬಂಗೇರ, ಹೊನ್ನಯ ಅಮೀನ್, ಬಾಬು ಸಾಲ್ಯಾನ್, ಆನಂದ ಇರುವೈಲು, ಸಾಮಾಜಿಕ ಹೋರಾಟಗಾರರಾದ ಬಾವಾ ಪದರಂಗಿ ಮೊದಲಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.
