ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಪ್ರಕ್ರಿಯೆಗೆ ಅಧಿಕೃತವಾಗಿ ವೇಗ; ರಾಜ್ಯ ಚುನಾವಣಾ ಆಯೋಗದಿಂದ ಸಿದ್ಧತೆ, ಮಹತ್ವದ ಸುತ್ತೋಲೆ

ರಾಷ್ಟ್ರೀಯ

ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ನಡೆಸುವ ಪ್ರಕ್ರಿಯೆಗೆ ಈಗ ಅಧಿಕೃತವಾಗಿ ವೇಗ ಸಿಕ್ಕಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ಈಗಿನಿಂದಲೇ ರಾಜಕೀಯ ಕಾವೇರತೊಡಗಿದೆ. 2027ರ ಮಾರ್ಚ್ ಅಂತ್ಯದೊಳಗೆ ಅವಧಿ ಮುಕ್ತಾಯಗೊಳ್ಳಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳು ಹಾಗೂ ಹೊಸದಾಗಿ ಪುನರ್‌ರಚಿತವಾಗಿರುವ 42 ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಸುಗಮ ಮತ್ತು ಪಾರದರ್ಶಕವಾಗಿ ನಡೆಸಲು ಆಯೋಗವು ಅಧಿಕಾರಿಗಳ ನಿಯೋಜನೆಗೆ ಹೊಸದೊಂದು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿಗೊಬ್ಬ ‘ಗ್ರೂಪ್-ಬಿ’ ವೃಂದದ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಬೇಕಾಗುತ್ತದೆ. ಈ ಚುನಾವಣಾಧಿಕಾರಿಗಳ ಕೆಲಸದಲ್ಲಿ ನೆರವಾಗಲು ಶಿರಸ್ತೇದಾರ್, ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜಿಸಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳ ಸ್ವಂತ ಊರು ಅಥವಾ ತವರು ಕ್ಷೇತ್ರಕ್ಕೆ ಅವರನ್ನು ಚುನಾವಣಾ ಕರ್ತವ್ಯದ ಮೇಲೆ ನಿಯೋಜಿಸಬಾರದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಪಂಚಾಯಿತಿಗಳಲ್ಲಿ ಇರುವ ಸದಸ್ಯ ಸ್ಥಾನಗಳ ಆಧಾರದ ಮೇಲೆ ಅಧಿಕಾರಿಗಳ ನಿಯೋಜನೆಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಯಾವುದೇ ಪಂಚಾಯಿತಿಯಲ್ಲಿ 25 ಸದಸ್ಯ ಸ್ಥಾನಗಳವರೆಗೆ ಇದ್ದರೆ ಅಲ್ಲಿ ಒಬ್ಬರು ಚುನಾವಣಾಧಿಕಾರಿ ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಸದಸ್ಯ ಸ್ಥಾನಗಳ ಸಂಖ್ಯೆ 25 ರಿಂದ 35ರ ವರೆಗೆ ಇದ್ದಲ್ಲಿ, ಒಬ್ಬರು ಚುನಾವಣಾಧಿಕಾರಿ ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತದೆ. ಇನ್ನು 35ಕ್ಕಿಂತ ಹೆಚ್ಚು ಸದಸ್ಯ ಸ್ಥಾನಗಳನ್ನು ಹೊಂದಿರುವ ದೊಡ್ಡ ಪಂಚಾಯಿತಿಗಳಾಗಿದ್ದರೆ, ಅಲ್ಲಿ ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳು ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ.

ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಮೊದಲ ಆದ್ಯತೆ ನೀಡಿದೆ.ಇದರ ಜೊತೆಗೆ, 2027ರ ಏಪ್ರಿಲ್ ನಂತರ ಅವಧಿ ಮುಕ್ತಾಯಗೊಳ್ಳಲಿರುವ 56 ಗ್ರಾಮ ಪಂಚಾಯಿತಿಗಳ ಪಟ್ಟಿಯನ್ನೂ ಆಯೋಗ ತನ್ನ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಮುಂದಿನ ಹಂತದ ಚುನಾವಣಾ ಸಿದ್ಧತೆಗಳಿಗೂ ಮುನ್ನೋಟ ನೀಡಿದೆ. ಈ ಮಹತ್ವದ ಬೆಳವಣಿಗೆಯೊಂದಿಗೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ದಟ್ಟವಾಗಿದೆ.