✍️. ಆರ್.ಟಿ.ವಿಠ್ಠಲಮೂರ್ತಿ
ಕೆಲ ದಿನಗಳ ಹಿಂದೆ ತಮ್ಮ ಪತ್ನಿ ಹಾಗೂ ಸಹೋದರನ ಜತೆಗೂಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಹೋಗಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಮಹತ್ವದ ವಿಷಯವನ್ನು ಪ್ರಸ್ತಾಪಿಸಿದರಂತೆ. ಅಂದ ಹಾಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಮಹತ್ವದ ವಿಷಯವನ್ನು ಪ್ರಸ್ತಾಪಿಸಲು ಡಿ.ಕೆ.ಶಿವಕುಮಾರ್ ಅವರಿಗಿದ್ದ ಫೀಡ್ ಬ್ಯಾಕೇ ಕಾರಣ. ಅದೆಂದರೆ, ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪಕ್ಷದ ಕೆಲ ಶಾಸಕರು: ‘ಡಿಕೆ ಫುಲ್ಲು ಚೇಂಜ್ ಆಗಿದ್ದಾರೆ. ಸರ್ಕಾರದ ಮಟ್ಟದಲ್ಲಿ ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಕಿವಿ ಕಚ್ಚಿದ್ದಾರೆ ಎಂಬುದು.
ಯಾವಾಗ ಈ ವಿಷಯ ಗೊತ್ತಾಯಿತೋ? ಅಗ ಡಿ.ಕೆ.ಶಿವಕುಮಾರ್ ತಕ್ಷಣ ಎಚ್ಚೆತ್ತಿದ್ದಾರೆ. ಯಾಕೆಂದರೆ ಇಂತಹ ವಿಷಯ ಗೊತ್ತಾದ ಮೇಲೂ ಸುಮ್ಮನಿದ್ದರೆ ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವೆ ಕಮ್ಯುನಿಕೇಷನ್ ಗ್ಯಾಪು ಹೆಚ್ಚಾಗುತ್ತದೆ. ಈ ಗ್ಯಾಪು ಹೆಚ್ಚುತ್ತಾ ಹೋದರೆ ಸರಿಪಡಿಸುವುದು ಕಷ್ಟ ಎಂಬುದು ಅವರಿಗೆ ಗೊತ್ತು. ಅಂದ ಹಾಗೆ ಕಮ್ಯುನಿಕೇಷನ್ ಗ್ಯಾಪ್ (ಸಂವಹನದ ಕೊರತೆ) ಇದ್ದರೆ ಏನೇನು ಅನಾಹುತಗಳಾಗುತ್ತವೆ ಎಂಬುದಕ್ಕೆ ರಾಜಕಾರಣದಲ್ಲಿ ಹಲವು ಉದಾಹರಣೆಗಳಿವೆ.
1957 ರಲ್ಲಿ ಮುಖ್ಯಮಂತ್ರಿಯಾದ ನಿಜಲಿಂಗಪ್ಪ,1958 ರಲ್ಲಿ ಪಕ್ಷದೊಳಗಿನ ಬಂಡಾಯಕ್ಕೆ ಬಲಿಯಾಗಬೇಕಾಯಿತು. ಅದರೆ ಹೀಗೆ ಸಿಎಂ ಹುದ್ದೆಯಿಂದ ಕೆಳಗಿಳಿದರೂ ಪಕ್ಷದಲ್ಲಿ ಅವರ ಶಕ್ತಿ ಕುಂದಿರಲಿಲ್ಲ. ಆದರೆ ನಿಜಲಿಂಗಪ್ಪ ಅವರ ಜಾಗಕ್ಕೆ ಬಂದು ಕುಳಿತ ಬಿ.ಡಿ.ಜತ್ತಿಯವರಿಗೆ ಇದು ಮುಖ್ಯವಾಗಲಿಲ್ಲ. ಹೀಗಾಗಿ ಅವರು ತಮ್ಮಿಚ್ಚೆಯಂತೆ ಮುನ್ನುಗ್ಗಿದರು. ಯಾವಾಗ ಜತ್ತಿಯವರು ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಿ ತಮ್ಮಿಚ್ಚೆಯಂತೆ ನಡೆದರೋ? ಅಗ ನಿಜಲಿಂಗಪ್ಪನವರ ಬೆಂಬಲಿಗರಿಗೆ ಅಸಮಾಧಾನವಾಯಿತು. ಪರಿಣಾಮ?ಅವರು ದಿನ ಬೆಳಗಾದರೆ ಜತ್ತಿಯವರ ವಿರುದ್ದ ನಿಜಲಿಂಗಪ್ಪನವರ ಬಳಿ ದೂರು ತೆಗೆದುಕೊಂಡು ಹೋಗುತ್ತಿದ್ದರು. ಹೀಗಾಗಿ ನಿಜಲಿಂಗಪ್ಪ ಮತ್ತು ಜತ್ತಿ ನಡುವಣ ಕಂದಕ ಹೆಚ್ಚಾಗುತ್ತಾ ಹೋಯಿತು. ಮುಂದೆ ಅದು ಯಾವತ್ತೂ ಸರಿಹೋಗದಷ್ಟು ಕೆಟ್ಟು ಹೋಯಿತು.
ಇದೇ ರೀತಿ ಜನತಾ ಪಕ್ಷದ ಸರ್ಕಾರವಿದ್ದಾಗ ಎಸ್.ಅರ್. ಬೊಮ್ಮಾಯಿ ಮುಖ್ಯಮಂತ್ರಿಯಾದರಲ್ಲ? ಹೀಗೆ ಅವರು ಮುಖ್ಯಮಂತ್ರಿಯಾಗಲು ಕಾರಣರಾದವರು ರಾಮಕೃಷ್ಣ ಹೆಗಡೆ. ಆದರೆ ಹೀಗೆ ಮುಖ್ಯಮಂತ್ರಿಯಾದ ನಂತರ ಬೊಮ್ನಾಯಿ ತಮ್ಮಿಚ್ಚೆಯಂತೆ ನಡೆಯಲು ಶುರು ಮಾಡಿದರು. ಇದು ಸಹಜವಾಗಿಯೇ ಸರ್ಕಾರದಿಂದ ಬಹಳಷ್ಟನ್ನು ನಿರೀಕ್ಷಿಸಿದ್ದ ಹೆಗಡೆ ಬೆಂಬಲಿಗ ಸಚಿವರು ಮತ್ತು ಶಾಸಕರಿಗೆ ಪಥ್ಯವಾಗಲಿಲ್ಲ. ಪರಿಣಾಮ? ಅವರು ದಿನ ಬೆಳಗಾದರೆ ರಾಜ್ ಮಹಲ್ ವಿಲಾಸ್ ನಲ್ಲಿದ್ದ ಹೆಗಡೆಯವರ ನಿವಾಸ ‘ಕೃತ್ತಿಕಾ’ಗೆ ದೂರು ಒಯ್ಯತೊಡಗಿದರು. ಹೀಗೆ ಬೆಂಬಲಿಗರು ಸತತವಾಗಿ ದೂರು ತರುತ್ತಿದ್ದರೆ, ಬೊಮ್ಮಾಯಿ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದರೆ ಹೆಗಡೆ ಸುಮ್ಮನಿರಲು ಸಾಧ್ಯವೇ? ಹೀಗಾಗಿ ಬೊಮ್ಮಾಯಿಯವರ ಮೇಲೆ ನಿಗಾ ಇಡುವಂತೆ ಅವರು ತಮ್ಮ ಆಪ್ತ ಜೀವರಾಜ್ ಆಳ್ವ ಅವರಿಗೆ ಸೂಚಿಸಿದರು. ಮುಂದೆ ಬೊಮ್ಮಾಯಿ ಸರ್ಕಾರ ಲಟಕ್ಕಂತ ಉದುರಿ ಬೀಳಲು ದೇವೇಗೌಡರು ಮಾತ್ರವಲ್ಲ, ಹೆಗಡೆಯವರ ಆಪ್ತ ಜೀವರಾಜ್ ಆಳ್ವ ಅವರ ಪಾತ್ರವೂ ಮುಖ್ಯವಾಗಿತ್ತು.

ಇನ್ನು ಬಿಜೆಪಿ ಸರ್ಕಾರದಲ್ಕಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ 2011 ರಲ್ಲಿ ಗಣಿ ಹಗರಣದ ಹೊಡೆತಕ್ಕೆ ಸಿಲುಕಿ ರಾಜೀನಾಮೆ ನೀಡಿದರಲ್ಲ? ಇದಾದ ನಂತರ ಅವರು ಪಟ್ಟು ಹಿಡಿದು ಡಿ.ವಿ.ಸದಾನಂದಗೌಡರನ್ನು ಸಿಎಂ ಹುದ್ದೆಯ ಮೇಲೆ ಕೂರಿಸಿದರು. ಆದರೆ ಹೀಗೆ ಸಿಎಂ ಹುದ್ದೆಯ ಮೇಲೆ ಕುಳಿತ ಸದಾನಂದಗೌಡರು ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲು ಹೊರಟರು. ಇದು ಸಹಜವಾಗಿಯೇ ಯಡಿಯೂರಪ್ಪ ಬೆಂಬಲಿಗರಲ್ಲಿ ಅಸಮಾಧಾನ ಹುಟ್ಟು ಹಾಕಿತು. ತಾವು ಹೇಳಿದ ಕೆಲಸಗಳು ಆಗದೆ ಇದ್ದಾಗ ಅವರು ಡಾಲರ್ ಕಾಲೋನಿಯಲ್ಲಿದ್ದ ಯಡಿಯೂರಪ್ಪ ಅವರ ನಿವಾಸಕ್ಕೆ ಕಂಪ್ಲೇಂಟುಗಳ ಪಟ್ಟಿ ತೆಗೆದುಕೊಂಡು ಹೋಗತೊಡಗಿದರು. ‘ನೀವೇ ಹೇಳಿದರೂ ಸದಾನಂದಗೌಡರು ಕೆಲಸ ಮಾಡಿಕೊಡುತ್ತಿಲ್ಲ. ಗಟ್ಟಿಯಾಗಿ ಕೇಳಲು ಹೋದರೆ ಉಚಾಯಿಸಿ ಮಾತನಾಡುತ್ತಿದ್ದಾರೆ. ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮಾಡಿಟ್ಟ ಕೊಳೆ ತೊಳೆಯಲು ಆಗುತ್ತಿಲ್ಲ ನಡೀರೀ ಎನ್ನುತ್ತಿದ್ದಾರೆ’ಎಂದೆಲ್ಲ ಕಿವಿ ಕಚ್ಚತೊಡಗಿದರು. ಯಾವಾಗ ಇದು ಜಾಸ್ತಿಯಾಗುತ್ತಾ ಹೋಯಿತೋ? ಆಗ ಯಡಿಯೂರಪ್ಪ ಥೇಟು ಜಮದಗ್ನಿಯಂತಾದರು. ಅಷ್ಟೇ ಅಲ್ಲ, ಸದಾನಂದಗೌಡರ ವಿರುದ್ಧ ಬಂಡಾಯವೆಬ್ಬಿಸಿ, ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರು. ಹೀಗೆ ಜತ್ತಿ, ಬೊಮ್ಮಾಯಿ, ಸದಾನಂದಗೌಡರ ಎಪಿಸೋಡುಗಳನ್ನು ನೋಡುತ್ತಾ ಹೋದರೆ ಢಾಳಾಗಿ ಕಣ್ಣಿಗೆ ಕಾಣುವುದು ಕಮ್ಯುನಿಕೇಶನ್ ಗ್ಯಾಪು.
ಮುಖ್ಯಮಂತ್ರಿಯಾದವರು ಪಕ್ಷದಲ್ಲಿರುವ ಪರ್ಯಾಯ ಶಕ್ತಿ ಕೇಂದ್ರಗಳ ಜತೆ ಸಂವಹನ ಸಾಧಿಸುವ ಕೆಲಸ ಮಾಡಿದ್ದರೆ ದೊಡ್ಡ ಮಟ್ಟದ ಅಪಾಯಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ಇಂತಹ ಇತಿಹಾಸ ಡಿ.ಕೆ. ಶಿವಕುಮಾರ್ ಅವರಿಗೆ ಗೊತ್ತಲ್ಲ? ಹೀಗಾಗಿ ತಮ್ಮ ಬಗ್ಗೆ ದೂರು ಒಯ್ಯುವವರು ಹೆಚ್ಚಾಗುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಹೋಗಿದ್ದಾರೆ.
ಹೀಗೆ ಹೋದ ಸಂದರ್ಭದಲ್ಲಿ:’ಸಾರ್, ನನ್ನ ಬಗ್ಗೆ ಯಾರೇ ದೂರು ಹೇಳಿದರೂ ನಂಬಬೇಡಿ. ಒಂದು ವೇಳೆ ನಿಮಗೇನೇ ಅನುಮಾನ ಬಂದರೂ ನನಗೆ ಹೇಳಿ. ಹಾಗೆಯೇ ಇಂತಹ ಕೆಲಸವಾಗಬೇಕು ಎಂದರೆ ಒಂದು ಸೂಚನೆ ಕೊಡಿ ಸಾಕು. ಅಥವಾ ಬರಲು ಹೇಳಿದರೆ ನಾನೇ ಅರ್ಧ ಗಂಟೆಯಲ್ಲಿ ನಿಮ್ಮ ಮನೆಗೆ ಬರುತ್ತೇನೆ’ ಎಂದಿದ್ದಾರೆ. ಯಾವಾಗ ಅವರು ಈ ಮಾತನಾಡಿದರೋ? ಅಗ ಮುಖದಲ್ಲಿ ನಗು ಅರಳಿಸಿದ ಸಿದ್ಧರಾಮಯ್ಯ ಅವರು: ‘ಆಗ್ಲಿ ಬಿಡ್ರೀ ಡಿಕೆ.ಏನೇ ಇದ್ರೂ ಹೇಳುತ್ತೇನೆ. ಸರ್ಕಾರ ಚೆನ್ನಾಗಿ ನಡೆದುಕೊಂಡು ಹೋಗ್ಲೀ’ ಎಂದಿದ್ದಾರೆ. ಅಷ್ಟೇ ಅಲ್ಲ, ಉಪ್ಪಿಟ್ಟು ತಿನ್ನಿಸಿ ಬೀಳ್ಕೊಟ್ಟಿದ್ದಾರೆ.
ಅರ್ಥಾತ್, ಶುರುವಿನಲ್ಲೇ ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವೆ ಕಮ್ಯುನಿಕೇಷನ್ ಗ್ಯಾಪು ಬಿಲ್ಡ್ ಆಗದಂತೆ ನೋಡಿಕೊಳ್ಳುವಲ್ಲಿ ಡಿಕೆ ಸಕ್ಸಸ್ ಆಗಿದ್ದಾರೆ.
ಆಷಾಡಕ್ಕೆ ಸಂಪುಟ ವಿಸ್ತರಣೆ
ಈ ಮಧ್ಯೆ ಜುಲೈ ಹತ್ತರ ಹೊತ್ತಿಗೆ ಫುಲ್ ಆಗಬೇಕಿದ್ದ ಡಿಕೆ ಫ್ಲೈಟು ಆಷಾಡ ಮಾಸದಲ್ಲಿ ಫುಲ್ ಆಗಲಿದೆ.
ಹೀಗೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಲು ರಾಹುಲ್ ಗಾಂಧಿಯವರ ವಿದೇಶ ಪ್ರವಾಸವೇ ಮುಖ್ಯ ಕಾರಣ. ಮೂಲಗಳ ಪ್ರಕಾರ, ಡಿಕೆ ಸಂಪುಟಕ್ಕೆ ಸೇರಬೇಕಾದವರು ಯಾರು? ಎಂಬುದು ಬಹುತೇಕ ನಿರ್ಧಾರವಾಗಿದೆ. ಮತ್ತು ರಾಹುಲ್ ಗಾಂಧಿ ಕೂಡಾ ‘ಗೋ ಅಹೆಡ್’ ಅಂತ ಸೂಚಿಸಿದ್ದಾರೆ.
ಆದರೆ ಅವರು ಹೇಳಿದರೂ, ಅವರು ಇಲ್ಲಿಲ್ಲದ ಹೊತ್ತಿನಲ್ಲಿ ಸಂಪುಟ ವಿಸ್ತರಣೆಯ ರಿಸ್ಕು ಖರ್ಗೆ, ಸುರ್ಜೇವಾಲ, ವೇಣುಗೋಪಾಲ್ ಅವರಿಗೆ ಬೇಕಾಗಿಲ್ಲ. ಕಾರಣ?ಎರಡನೇ ಕಂತಿನ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿರುವುದು. ಹೀಗೆ ಹೊಸ ಮುಖಗಳಿಗೆ ಆದ್ಯತೆ ಹೆಚ್ಚಿರುವುದರಿಂದ ಸಂಪುಟ ಸೇರಲು ಬಯಸಿದ ಬಹುತೇಕ ಸೀನಿಯರುಗಳಿಗೆ ನಿರಾಸೆ ಗ್ಯಾರಂಟಿ. ಹೀಗಾಗಿ ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಸಂಪುಟ ವಿಸ್ತರಿಸಿದರೆ ಭಿನ್ನಮತ ಮೇಲೇಳಬಹುದಲ್ಲ? ಆದ್ದರಿಂದ ಈ ನಾಯಕರಿಗೆ ರಿಸ್ಕು ಬೇಕಿಲ್ಲ.
ಅಂದ ಹಾಗೆ ಇದೇ ಮೂಲಗಳ ಪ್ರಕಾರ, ಸಂಪುಟದಲ್ಲಿ ಯಾರು ಮಂತ್ರಿಗಳಾಗಬೇಕು ಎಂಬ ವಿಷಯದಲ್ಲಿ ಖರ್ಗೆ, ಸಿದ್ದು, ಡಿಕೆಶಿಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಟ್ಟಿ ರೂಪಿಸಲಾಗಿದೆ. ಮತ್ತು ರಾಹುಲ್ ಉಪಸ್ಥಿತಿಯಲ್ಲೇ ಅದನ್ನು ಬಿಡುಗಡೆ ಮಾಡಲು ನಿರ್ದರಿಸಲಾಗಿದೆ.
ಸಿದ್ದು ಫಿಟ್ನೆಸ್ ಸೆಂಟರ್
ಇನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಸಿದ್ದರಾಮಯ್ಯ ಅವರು ತಮ್ಮ ಫಿಟ್ನೆಸ್ ಕಡೆ ಗಮನ ಕೊಟ್ಟಿದ್ದಾರೆ. ಹೀಗೆ ಅವರು ಫಿಟ್ನೆಸ್ ಗೆ ವಿಶೇಷ ಗಮನ ಕೊಡಲು ಅವರಿಗಿರುವ ಗುರಿ ಕಾರಣ. ಮೂಲಗಳ ಪ್ರಕಾರ, ದಸರಾ ಕಳೆದ ನಂತರ ಅಹಿಂದ ಸಂಘಟನೆಯನ್ನು ಬಲಪಡಿಸಲು ಸಿದ್ಧರಾಮಯ್ಯ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹೀಗೆ ಇಡೀ ರಾಜ್ಯ ಸುತ್ತಬೇಕು ಎಂದರೆ ಫಿಟ್ನೆಸ್ ಇರಬೇಕಲ್ಲ?ಹೀಗಾಗಿ ಪ್ರತಿದಿನ ವಾಕಿಂಗು, ವ್ಯಾಯಾಮ, ಯೋಗ ಮಾಡುತ್ತಿರುವ ಸಿದ್ದರಾಮಯ್ಯ ಇದಕ್ಕೆ ಪೂರಕವಾಗಿ ಡಯೆಟ್ ಮಾಡುತ್ತಿದ್ದಾರೆ.
ಹೀಗೆ ಒಂದು ಕಡೆ ಫಿಟ್ನೆಸ್ ಗೆ ಗಮನ ಕೊಟ್ಟರೆ ಮತ್ತೊಂದು ಕಡೆ ಅವರ ಆಪ್ತರು, ಸಿದ್ದರಾಮಯ್ತ ಅವರ ರಾಜ್ಯ ಪ್ರವಾಸಕ್ಕೆ ಅಗತ್ಯವಾದ ವಾಹನ ಯಾವುದಿರಬೇಕು? ಅದನ್ನು ಹೇಗೆ ರೆಡಿ ಮಾಡಬೇಕು? ಎಂಬ ಬಗ್ಗೆ ಲಕ್ಷ್ಯ ವಹಿಸಿದ್ದಾರೆ. ಇದೇ ರೀತಿ ಪ್ರವಾಸಕ್ಕೆ ಅಗತ್ಯ ಅಂತ ಐವತ್ತು ಪಂಚೆಗಳನ್ನು ಖರೀದಿಸುವುದರಿಂದ ಹಿಡಿದು ಡ್ರೆಸ್ ಕೋಡ್ ಹೇಗೆ ವಿಶಿಷ್ಟವಾಗಿರಬೇಕು?ಎಂಬುದರ ತನಕ ಪ್ರತಿಯೊಂದರ ಮೇಲೂ ಗಮನ ಹರಿಸಿದ್ದಾರೆ.
ಬಿಕೆ ಹೆಗಲಿಗೆ ಹೊಸ ಜವಾಬ್ದಾರಿ
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಅವರ ಮೇಲೆ ಹೊಸ ಜವಾಬ್ದಾರಿ ಬಿದ್ದಿದೆ. ಅದೆಂದರೆ ಪಕ್ಷದ ಚಟುವಟಿಕೆಗೆ ಅಗತ್ಯವಾದ ಹಣಕಾಸನ್ನು ಸಂಗ್ರಹಿಸುವುದು. ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷರಾದ ನಂತರ ಪಕ್ಷದ ಲೆಕ್ಕ-ಪತ್ರಗಳನ್ನು ಪರಿಶೀಲಿಸಿದ ಬಿ.ಕೆ.ಹರಿಪ್ರಸಾದ್ ಅವರಿಗೆ ಒಂದು ವಿಷಯ ಗಮನ ಸೆಳೆದಿದೆ.
ಅದೆಂದರೆ ಪಕ್ಷ ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಕೆಪಿಸಿಸಿಯ ಬೊಕ್ಕಸದಲ್ಲಿ ಹೆಚ್ಚು ಹಣವಿಲ್ಲ. ಇವತ್ತು ಸನ್ನಿವೇಶ ಹೇಗಿದೆ ಎಂದರೆ ಒಂದರ ಹಿಂದೊಂದರಂತೆ ವಿವಿಧ ಚುನಾವಣೆಗಳು ಎದುರಾಗಲಿವೆ. ಹೋಗಲಿ ಎಂದರೆ ವಿಧಾನಸಭೆ ಚುನಾವಣೆ ಕೂಡಾ ತುಂಬ ದೂರವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ಕೊಡಬೇಕು.

ಸಂಘಟನೆ ಮಾಡುವುದು ಎಂದರೆ ತಮಾಷೆಯೇ? ರಾಜ್ಯಾದ್ಯಂತ ಸಭೆ-ಸಮಾವೇಶಗಳನ್ನು ಮಾಡಬೇಕು. ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಆದರೆ ಇದಕ್ಕೆಲ್ಲ ಹಣ ಬೇಕಲ್ಲ? ಈ ದೃಷ್ಟಿಯಿಂದ ನೋಡಿದರೆ ಕೆಪಿಸಿಸಿ ಬೊಕ್ಕಸದಲ್ಲಿ ಕೆಲವೇ ಲಕ್ಷಗಳಷ್ಟು ಹಣವಿದೆ. ಇಷ್ಟು ಹಣವಿಟ್ಟುಕೊಂಡು ಬೆಂಗಳೂರಿನಲ್ಲಿ ಒಂದು ಸಮಾವೇಶ ನಡೆಸುವುದೂ ಕಷ್ಟ. ಹೀಗಾಗಿ ಈ ಪರಿಸ್ಥಿತಿಯನ್ನು ಬದಲಿಸಿ, ಕೆಪಿಸಿಸಿ ಬೊಕ್ಕಸವನ್ನು ಗಟ್ಟಿಗೊಳಿಸುವ ಜವಾಬ್ದಾರಿ ಬಿಕೆ ಹೆಗಲಿಗೇರಿದೆ ಎಂಬುದು ಕಾಂಗ್ರೆಸ್ ಮೂಲಗಳ ಮಾತು.
ಲಾಸ್ಟ್ ಸಿಪ್
ರಾಜ್ಯ ಬಿಜೆಪಿಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಅವರ ಜಾಗಕ್ಕೆ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್ ಬರಲಿದ್ದಾರೆಯೇ? ಹಾಗೆಂಬ ಸುದ್ದಿ ಬಿಜೆಪಿ ಪಾಳಯದಲ್ಲಿ ಹರಡಿದೆ. ಅಂದ ಹಾಗೆ ಈಗ ಕೇಂದ್ರ ಸಂಪುಟದಲ್ಲಿರುವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸುವ ಲೆಕ್ಕಾಚಾರ ಮೋದಿ-ಶಾ ಅವರಲ್ಲಿದ್ದು, ಈ ಹಿನ್ನೆಲೆಯಲ್ಲಿಯೇ ಪ್ರಧಾನ್ ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿಯಾಗಿ ಬರಬಹುದು ಎಂಬ ಮಾತುಗಳಿಗೆ ಕಾರಣವಾಗಿದೆ.
ಅಂದ ಹಾಗೆ ಈ ಹಿಂದೆ ರಾಜ್ಯ ಬಿಜೆಪಿಯ ಯಶಸ್ಸಿನ ಪರ್ವ ಶುರುವಾಗುವ ಕಾಲಘಟ್ಟದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದವರು ಧರ್ಮೇಂದ್ರ ಪ್ರಧಾನ್. ಹೀಗಾಗಿ ವಿವಿಧ ರಾಜ್ಯಗಳ ಉಸ್ತುವಾರಿಗಳನ್ನು ಬದಲಿಸುವಾಗ ಅಗರ್ವಾಲ್ ಜಾಗಕ್ಕೆ ಅವರು ಬರಬಹುದು ಎಂಬುದು ಮೂಲಗಳ ಮಾತು.
