ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಭರದಿಂದ ಸಾಗುತ್ತಿದ್ದು, ಬೃಹತ್ ಪ್ರಮಾಣದಲ್ಲಿ ಹೆಸರುಗಳು ಕರಡು ಪಟ್ಟಿಯಿಂದ ಹೊರಬೀಳುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ, ವಾರಾಂತ್ಯದ ವೇಳೆಗೆ ಸುಮಾರು 98.73 ಲಕ್ಷ ಮತದಾರರನ್ನು ‘ASDDO’ (ಪತ್ತೆಯಾಗದವರು, ಶಾಶ್ವತ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು, ಇತರೆ) ವರ್ಗಕ್ಕೆ ಸೇರಿಸಲಾಗಿದ್ದು, ಈ ಸಂಖ್ಯೆಯು ಆಗಸ್ಟ್ 8ರ ವೇಳೆಗೆ ಒಂದು ಕೋಟಿಗೂ ಮಿಕ್ಕಿ ಗಡಿ ದಾಟುವ ಸಾಧ್ಯತೆಯಿದೆ.
ಇದುವರೆಗೆ ನಡೆಸಲಾದ ಸಾರ್ವತ್ರಿಕ ಪರಿಶೀಲನೆಯಲ್ಲಿ ಒಟ್ಟು 98.73 ಲಕ್ಷ ಜನರನ್ನು ಈ ತಾತ್ಕಾಲಿಕ ಪಟ್ಟಿಯಲ್ಲಿ ಗುರುತಿಸಲಾಗಿದೆ. ಈ ಪೈಕಿ ವಿಳಾಸದಲ್ಲಿ ಪತ್ತೆಯಾಗದ ಅಥವಾ ಗೈರಾದವರು 13.77 ಲಕ್ಷ, ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡವರು 60.42 ಲಕ್ಷ ಹಾಗೂ ಮೃತಪಟ್ಟವರು 15.79 ಲಕ್ಷ ಸಂಖ್ಯೆಯಲ್ಲಿದ್ದಾರೆ. ಇದಲ್ಲದೆ, ಈಗಾಗಲೇ ಮತ್ತೊಂದು ಕಡೆ ಮತದಾರರಾಗಿ ನೋಂದಾಯಿಸಿಕೊಂಡಿರುವ 6.33 ಲಕ್ಷ ಜನರು ಮತ್ತು ಇತರೆ ಕಾರಣಗಳಿಂದ 2.40 ಲಕ್ಷ ಜನರು ಸೇರಿದ್ದಾರೆ. ಈ ಎಲ್ಲ ಮತದಾರರು ಸದ್ಯಕ್ಕೆ ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ.
ಕರಡು ಪಟ್ಟಿ ಪ್ರಕಟವಾದ ತಕ್ಷಣವೇ ಕೇಂದ್ರ ಚುನಾವಣಾ ಆಯೋಗವು ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದೆ. 2002ರ ಮತದಾರರ ಪಟ್ಟಿ ಹಾಗೂ ಪ್ರಸ್ತುತ SIR ಪ್ರಕ್ರಿಯೆಯ ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದಿರುವ ಮತದಾರರಿಗೆ ಆಯಾ ಭಾಗದ ಬಿಎಲ್‌ಒ ಗಳು ನೋಟಿಸ್ ನೀಡಲಿದ್ದಾರೆ. ಅಂತಹ ಸಂದರ್ಭದಲ್ಲಿ ಸಾರ್ವಜನಿಕರು ಆಯೋಗ ನಿಗದಿಪಡಿಸಿದ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ SIR ಕಾರ್ಯಚರಣೆಯಲ್ಲಿ ಶುಕ್ರವಾರದ ವರೆಗೆ 4.36 ಕೋಟಿ ಗಣತಿ ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಒಟ್ಟಾರೆ ಶೇ. 78.71ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿದುಬಂದಿದೆ.
