ಜೂನ್ 14 ರಂದು ಸೂಟರ್‌ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಮೀಪ ಮಹಿಳೆಯೊಬ್ಬರ ಬಂಗಾರದ ಸರವನ್ನು ಕಸಿದುಕೊಂಡು ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಜೂನ್ 26 ರಂದು ಪಾಂಡೇಶ್ವರದ ರೋಸಾರಿಯೋ ಶಾಲೆ ಸಮೀಪ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಸಂದರ್ಭ ಪ್ರಮುಖ ಆರೋಪಿ ಅಲ್ತಾಫ್ ಹುಸೈನ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅ.ಕ್ರ. 133/2026 ಕಲಂ 121(1),132,262 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಈಗಾಗಲೇ ದೋಚಿದ ಚಿನ್ನದ ಸರ ಮತ್ತು ಬೈಕನ್ನು ಆರೋಪಿಗಳಾದ ಉತ್ತರ ಪ್ರದೇಶ ರಾಜ್ಯದ ನಿವಾಸಿಗಳಾದ ರವಿ ಬೌರಾ ಮತ್ತು ಮೊಹಮ್ಮದ್ ಸಾಹೀಲ್ ಸಿದ್ದೀಖಿ ಯಾನೆ ಮೋಹಮ್ಮದ್ ಸಾಹಿಲ್ ರವರಿಂದ ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರ ವಶದಿಂದ ಪರಾರಿಯಾಗಿದ್ದ ಬಾಗಲಕೋಟೆ ನಿವಾಸಿ ಅಲ್ತಾಫ್ ಹುಸೈನ್ ನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ವಿಶೇಷ ತಂಡವು ನಿರಂತರವಾಗಿ ಕಾರ್ಯಾಚರಣೆ ನಡೆಸಿ, ಆರೋಪಿಯ ಕುರಿತು ಖಚಿತ ಮಾಹಿತಿ ಪಡೆದು ಅಗಸ್ಟ್ 10 ರಂದು ವಿಜಯಪುರ (ಬಿಜಾಪುರ) ನಗರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ದ ರಾಜ್ಯದ ವಿವಿಧ ಭಾಗಗಳಲ್ಲಿ 6 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಮಧ್ಯ ಕೋಡಿಪ್ಪಾಡಿಯಲ್ಲಿನ ಕೋರ್ದಬ್ಬು ದೈವಸ್ಥಾನದಲ್ಲಿ ಅಗಸ್ಟ್ 5 ರಂದು ಬೆಳಗಿನ ಜಾವ ಸುಮಾರು 1.30 ರ ವೇಳೆಗೆ ಕಾಣಿಕೆ ಹುಂಡಿ ಕಳವು ಪ್ರಕರಣದ ಹಿನ್ನೆಲೆಯನ್ನು ಸುರತ್ಕಲ್ ಪೊಲೀಸರು ಭೇದಿಸುವಲ್ಲಿ ಸಫಲರಾಗಿದ್ದು, ಪ್ರಮುಖ ಆರೋಪಿ ಉಡುಪಿ ಜಿಲ್ಲೆ ಕುಕ್ಕಿಕಟ್ಟೆ ನಿವಾಸಿ ಸುಖೇಶ್ ನಾಯ್ಕ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಕಬ್ಬಿಣದ ಆಯುಧದಿಂದ ದೈವಸ್ಥಾನದ ಬಾಗಿಲು ಮತ್ತು ಕಿಟಕಿಯನ್ನು ಮುರಿದು ಒಳನುಗ್ಗಿ, ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಹುಂಡಿಯಲ್ಲಿದ್ದ ಸುಮಾರು ರೂ.15,000/- ನಗದು ಹಣವನ್ನು ಕಳವು ಮಾಡಿದ್ದ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ. 96/2026, ಕಲಂ 331(4), 305 ಬಿ.ಎನ್.ಎಸ್. ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿ ಪತ್ತೆ ಕಾರ್ಯಕ್ಕಾಗಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಅಗಸ್ಟ್ 10 ರಂದು ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣಗಳು ದಾಖಲಾಗಿರುವುದು ಹಾಗೂ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ. ಅಲ್ಲದೇ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರಂಟ್ ಗಳು ಇರುವುದೂ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
