ಅನ್ಯಾಯದ ವ್ಯಾಪಾರ, ಸೇವೆಯಲ್ಲಾದ ನಿರ್ಲಕ್ಷ್ಯ: ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು
ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಮಹತ್ವದ ತೀರ್ಪು ನೀಡಿದೆ. ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯಲ್ಲಿರುವ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ರಾಜೇಂದ್ರ ಎಂಬವರಿಂದ ಕ್ಯಾರಿ ಬ್ಯಾಗ್‌ಗಾಗಿ ಹೆಚ್ಚುವರಿಯಾಗಿ ಹತ್ತು ರೂ. ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.
ರಾಜೇಂದ್ರ ಎಂಬವರು ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದಾಗ, ಅವುಗಳನ್ನು ಒಯ್ಯಲು ಕ್ಯಾರಿ ಬ್ಯಾಗ್ ನೀಡಲು ಮಳಿಗೆಯವರು ಹೆಚ್ಚುವರಿಯಾಗಿ ಹತ್ತು ರೂ. ಶುಲ್ಕ ಪಡೆದಿದ್ದರು. ಇದರಿಂದ ನೊಂದ ಗ್ರಾಹಕರು ಅನ್ಯಾಯದ ವ್ಯಾಪಾರ ಪದ್ಧತಿ ಹಾಗೂ ಸೇವೆಯಲ್ಲಿನ ಕೊರತೆಯನ್ನು ಪ್ರಶ್ನಿಸಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರನ್ನು ಕೂಲಂಕುಷವಾಗಿ ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.
ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ಹತ್ತು ಸಾವಿರ ರೂ. ಪರಿಹಾರ ಹಾಗೂ ಬ್ಯಾಗಿಗಾಗಿ ಪಾವತಿಸಿದ್ದ ಹತ್ತು ರೂಪಾಯಿಯನ್ನು ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆದೇಶಿಸಲಾಗಿದೆ. ಇದರೊಂದಿಗೆ, ಗ್ರಾಹಕ ಕಾನೂನು ನೆರವು ಖಾತೆಗೆ ರೂ. 20 ಸಾವಿರ ಜಮಾ ಮಾಡಲು ಸೂಚಿಸಲಾಗಿದ್ದು, ಒಟ್ಟು ರೂ. 30 ಸಾವಿರ ರೂ. ಗಳ ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.
ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್‌ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್‌ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.ಈ ಮಹತ್ವದ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಕುಮಾರಿ ಹೆಚ್.ಎನ್. ಮೀನಾ ಹಾಗೂ ಸದಸ್ಯರಾದ ಶ್ರೀ ಸಿ.ಎಸ್. ತ್ಯಾಗರಾಜನ್ ಅವರನ್ನೊಳಗೊಂಡ ಪೀಠವು ಹೊರಡಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
