ರಾಜ್ಯದಲ್ಲಿನ ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಗಳ ಆವರಣದಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಅಥವಾ ಸಂಘಟನೆಗಳು ಯಾವುದೇ ರೀತಿಯ ಚಟುವಟಿಕೆ ಅಥವಾ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಇನ್ಮುಂದೆ ಕಾನೂನುಬದ್ಧವಾಗಿ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಅನುಮೋದನೆ ದೊರೆತಿದೆ.
ಸರ್ಕಾರದ ಈ ನೂತನ ಕಾಯ್ದೆಯು ಆರ್ಎಸ್ಎಸ್ ಸೇರಿದಂತೆ ವಿವಿಧ ಸಂಘಟನೆಗಳು ಸರ್ಕಾರಿ ಜಾಗಗಳಲ್ಲಿ ನಡೆಸುವ ಸಭೆ-ಸಮಾರಂಭಗಳಿಗೆ ಪರೋಕ್ಷವಾಗಿ ಬ್ರೇಕ್ ಹಾಕಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಈ ಕಾಯ್ದೆಯ ವಿಧೇಯಕವನ್ನು ಮಂಡಿಸುವ ಸಾಧ್ಯತೆಯಿದೆ.
