ರಾಜ್ಯದಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇವಿಎಂ ಯಂತ್ರ ಪೇಲು; ಬ್ಯಾಲೆಟ್ ಪೇಪರ್ ಪಾಸು: ರಾಜ್ಯಪಾಲರ ಅಸ್ತು

ರಾಜ್ಯ

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಕೈಬಿಟ್ಟು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಯನ್ನು ಮರುಪರಿಚಯಿಸುವ ಮಹತ್ವದ ನಿರ್ಧಾರವನ್ನು ಅಧಿಕೃತಗೊಂಡಿದೆ. ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅಸ್ತು ಎಂದಿದ್ದಾರೆ.

ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಕಳವಳ ವ್ಯಕ್ತವಾಗುತ್ತಿದ್ದು, ವಿಶ್ವಾಸಾರ್ಹತೆ ಮತ್ತು ಮತದಾರರ ಗೌಪ್ಯತೆ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ಹಾಗಾಗಿ ಗೌಪ್ಯತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲು ಕಾಗದದ ಮತಪತ್ರಗಳಿಗೆ ಮರಳಲು ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿತ್ತು. ಅಂತೆಯೇ ಪೂರಕ ಕಾನೂನು ತಿದ್ದುಪಡಿಗಾಗಿ ರಾಜ್ಯ ಸರಕಾರ ರೂಪಿಸಿದ್ದ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ವಿಧೇಯಕ’ಕ್ಕೆ ಕಳೆದ ಬಜೆಟ್‌ ಅಧಿವೇಶನದಲ್ಲಿ ವಿಧಾನಮಂಡಲ ಉಭಯ ಸದನಗಳ ಅನುಮೋದನೆ ದೊರಕಿತ್ತು.

ಈ ಹೊಸ ತಿದ್ದುಪಡಿ ಕಾಯ್ದೆಯ ಪ್ರಮುಖ ಅಂಶವೆಂದರೆ, ಮತದಾನದ ಪ್ರಕ್ರಿಯೆಯಲ್ಲಿನ ಬದಲಾವಣೆ. ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸೇರಿದಂತೆ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನು ಬಳಸಲಾಗುವುದಿಲ್ಲ. ಅದರ ಬದಲಾಗಿ, ಹಿಂದಿನಂತೆ ಬ್ಯಾಲೆಟ್ ಪೇಪರ್ ಮತ್ತು ಮತಪೆಟ್ಟಿಗೆಗಳನ್ನು ಬಳಸಿಯೇ ಮತದಾನ ನಡೆಸಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಾಜ್ಯಪಾಲರು ವಿಧೇಯಕಕ್ಕೆ ಸಹಿ ಹಾಕುತ್ತಿದ್ದಂತೆಯೇ, ಸ್ವಲ್ಪವೂ ವಿಳಂಬ ಮಾಡದ ರಾಜ್ಯ ಸರ್ಕಾರವು ತಕ್ಷಣವೇ ಈ ಕುರಿತು ಅಧಿಕೃತ ಗೆಜೆಟ್ ನೋಟಿಫಿಕೇಶನ್ ಅನ್ನು ಹೊರಡಿಸಿದೆ. ಇದರೊಂದಿಗೆ ಈ ಹೊಸ ನಿಯಮವು ತಕ್ಷಣದಿಂದಲೇ ರಾಜ್ಯಾದ್ಯಂತ ಜಾರಿಗೆ ಬಂದಂತಾಗಿದ್ದು, ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಇದೇ ನಿಯಮದನ್ವಯ ನಡೆಯಲಿವೆ.