ಪುತ್ತೂರು ಕಮ್ಯೂನಿಟಿ ಸೆಂಟರ್ ನ ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಸೌದಿ ಅರೇಬಿಯಾದ ಪ್ರಸಿದ್ಧ ಕಂಪೆನಿ ಅಲ್-ಮುಝೈನ್ ಇದರ ಮಾಲಕರಾದ ಝಕಾರಿಯಾ ಹಾಜಿ ಜೋಕಟ್ಟೆ ಅವರು ಸುಮಾರು 20 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಹಿದಾಯ ಫೌಂಡೇಶನ್ ನ ಬಹು ನಿರೀಕ್ಷಿತ ಸಮುದಾಯ ಕೇಂದ್ರ ಎಪಿ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ನೀಟ್ ಸಾಧಕ ವಿದ್ಯಾರ್ಥಿಗಳ ಭವಿಷ್ಯದ ಮೆಡಿಕಲ್ ವಿದ್ಯಾಭ್ಯಾಸಕ್ಕೆ ನೆರವಾಗಲು ಈ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವಿವಿಧ ಮಾನದಂಡಗಳ ಆಯ್ಕೆಯ ಮೂಲಕ ಒಂದು ಲಕ್ಷ, ಐವತ್ತು ಸಾವಿರ, ಎಪ್ಪತೈದು ಸಾವಿರದಂತೆ ಸುಮಾರು 28 ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನ ನೀಡಲಾಯಿತು. ಈ ಮೊದಲು ನೀಟ್ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸುಮಾರು 60 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಘೋಷಣೆ ಮಾಡಿದ್ದ ಕಮ್ಯೂನಿಟಿ ಸೆಂಟರ್ ಮೊದಲ ಹಂತವಾಗಿ ಇಂದು ಝಕಾರಿಯಾ ಹಾಜಿಯವರ ಪ್ರೋತ್ಸಾಹದ ಮೂಲಕ 20 ಲಕ್ಷ ರೂಪಾಯಿ ನೀಡಿದೆ.

ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಝಕಾರಿಯಾ ಹಾಜಿಯವರು ನಾವು ನಿಮಗೆ ನೀಡಿದ ಪ್ರೋತ್ಸಾಹವನ್ನು ನೀವು ಸಮಾಜಕ್ಕೆ ಮರಳಿ ಹೆಚ್ಚಿನ ರೀತಿಯಲ್ಲಿ ನೀಡಬೇಕು ಎಂದು ಉಪದೇಶ ನೀಡಿದರು. ಹಿದಾಯ ಫೌಂಡೇಶನ್ ಸ್ಥಾಪಕರಾದ ಕಾಸಿಂ ಅಹ್ಮದ್ ವಿದ್ಯಾರ್ಥಿಗಳಿಗೆ ಎಪಿ ಸೆಂಟರ್ ನ ಯೋಜನೆಯ ಬಗ್ಗೆ ಪ್ರಸ್ತುತಿ ನೀಡಿದರು.

ಪುತ್ತೂರು ಕಮ್ಯೂನಿಟಿ ಸೆಂಟರ್ ಕಳೆದ ಐದು ವರ್ಷದ ಅವಧಿಯಲ್ಲಿ ವಿವಿಧ ವೃತ್ತಿಪರ ಕೋರ್ಸ್ ಗೆ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್, ಮೆಂಟರ್ಶಿಪ್, ವಿದ್ಯಾರ್ಥಿ ವೇತನ, ಉಚಿತ ದಾಖಲಾತಿ ನೀಡುವ ಮೂಲಕ ನೆರವು ನೀಡುತ್ತಿದೆ. ನೀಟ್ ಪರೀಕ್ಷೆಯಲ್ಲಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಸೆಂಟರ್ ಮೂಲಕ 79 ವಿದ್ಯಾರ್ಥಿಗಳು ಸರಕಾರಿ ಕೋಟಾದಲ್ಲಿ ರಾಜ್ಯದ ವಿವಿಧ ಮೆಡಿಕಲ್ ಕಾಲೇಜಿನಲ್ಲಿ MBBS ನಲ್ಲಿ ಕಲಿಯುತ್ತಿದ್ದಾರೆ.

ಈ ಬಾರಿ 20 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರಕಾರಿ MBBS ಪಡೆಯುವ ನಿರೀಕ್ಷೆಯನ್ನು ಸೆಂಟರ್ ಹೊಂದಿದೆ. ಇದಲ್ಲದೆ BDS, BAMS, BHMS, Nursing, Pharmacy, allied health science ಸೇರಿದಂತೆ ವಿವಿಧ ವೈದ್ಯಕೀಯ ವಿಭಾಗದಲ್ಲಿ ಸೆಂಟರ್ ನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಾನೂನು, ಇಂಜಿನಿಯರಿಂಗ್, ರಿಸರ್ಚ್, ಯುಜಿ ಮತ್ತು ಪಿಜಿ ಪದವಿಯಲ್ಲಿ ಸೇರಿ 2 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸೆಂಟರ್ ನ ನೆರವಿನಲ್ಲಿ ಕಲಿಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಅಡ್ಡೂರು ಕಮ್ಯೂನಿಟಿ ಸೆಂಟರ್ ನ ಇಬ್ರಾಹಿಂ, ಹಿದಾಯ ಫೌಂಡೇಶನ್ ನ ಆಬಿದ್ ಬಾಯಿ, ಜುಮಿಯತ್ತುಲ್ ಫಲಾಃ ದ ಶಾಹುಲ್ ಹಮೀದ್, ಪಿಸಿಸಿ ಯ ಇಮ್ತಿಯಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
