ರೈಲ್ವೆ ವಿಭಾಗ ಬದಲಾವಣೆ ಐತಿಹಾಸಿಕ ಸಾಧನೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕು ಬಿಜೆಪಿಗಿಲ್ಲ; ಇದು ಸಾಧನೆಯಲ್ಲ—ಜನರ ಕಣ್ಣಿಗೆ ಮಣ್ಣು ಎರಚುವ ರಾಜಕೀಯ ಪ್ರಚಾರ: ಸಂತೋಷ್ ಬಜಾಲ್

ಕರಾವಳಿ

ಮಂಗಳೂರು ರೈಲ್ವೆಯನ್ನು ಮೈಸೂರು ವಿಭಾಗಕ್ಕೆ ಸೇರಿಸಿರುವುದನ್ನೇ ಬಿಜೆಪಿ ತನ್ನ ಅತೀ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ಳುವುದು ದಕ್ಷಿಣ ಕನ್ನಡದ ಜನತೆಗೆ ಮಾಡುವ ಮತ್ತೊಂದು ರಾಜಕೀಯ ಮೋಸ.

ಸತತ ಹಲವು ಅವಧಿಗಳಲ್ಲಿ ದಕ್ಷಿಣ ಕನ್ನಡದಿಂದ ಬಿಜೆಪಿಯ ಸಂಸದರನ್ನು ನಿರಂತರವಾಗಿ ಆಯ್ಕೆ ಮಾಡಿ ಕಳುಹಿಸಿದರೂ, ಜಿಲ್ಲೆಯ ರೈಲ್ವೆ ಮೂಲಸೌಕರ್ಯಕ್ಕೆ ಅಗತ್ಯವಾದ ಅಭಿವೃದ್ಧಿಯನ್ನು ತರುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಮಂಗಳೂರು ಸೆಂಟ್ರಲ್‌ನಂತಹ ಪ್ರಮುಖ ರೈಲು ನಿಲ್ದಾಣಕ್ಕೆ ಸಮರ್ಪಕ ಪ್ಲಾಟ್‌ಫಾರಂ ವಿಸ್ತರಣೆ, ಹೆಚ್ಚಿನ ರೈಲುಗಳ ನಿಲುಗಡೆ, ಹೊಸ ರೈಲು ಸೇವೆಗಳು ಹಾಗೂ ಮಂಗಳೂರು ಕೇಂದ್ರವಾಗಿರುವ ಸಮಗ್ರ ರೈಲ್ವೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದವರು, ವಿಭಾಗ ಬದಲಾವಣೆಯನ್ನೇ ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ.

ದಕ್ಷಿಣ ಕನ್ನಡದ ಜನರು ಬಿಜೆಪಿ ಸಂಸದರಿಗೆ ಹಲವು ಚುನಾವಣೆಗಳಲ್ಲಿ ನೀಡಿದ ಅವಕಾಶಕ್ಕೆ ಪ್ರತಿಯಾಗಿ ಜಿಲ್ಲೆಯ ರೈಲ್ವೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಿತ್ತು. ಆದರೆ ಅಧಿಕಾರದಲ್ಲಿದ್ದರೂ ಜಿಲ್ಲೆಯ ಹಕ್ಕುಗಳಿಗಾಗಿ ಗಟ್ಟಿಯಾಗಿ ಧ್ವನಿ ಎತ್ತುವ ಬದಲು, ಕೇಂದ್ರ ಸರ್ಕಾರದ ಮುಂದೆ ಜಿಲ್ಲೆಯ ಜನರ ಬೇಡಿಕೆ ಮಂಡಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಂತೆ ವರ್ತಿಸಿದ್ದಾರೆ. ಮಂಗಳೂರು–ಬೆಂಗಳೂರು, ಮಂಗಳೂರು–ಮೈಸೂರು, ಕರಾವಳಿ–ಉತ್ತರ ಕರ್ನಾಟಕ ಸಂಪರ್ಕ ಸೇರಿದಂತೆ ಅಗತ್ಯ ರೈಲು ಸೇವೆಗಳ ವಿಸ್ತರಣೆ, ಮಂಗಳೂರು ಸೆಂಟ್ರಲ್‌ನ ಆಧುನೀಕರಣ ಮತ್ತು ಕೊಂಕಣ್ ರೈಲ್ವೆ ಮಾರ್ಗದ ಸಮರ್ಪಕ ಬಳಕೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಮಂಗಳೂರು ರೈಲೈ ವಿಭಾಗದಲ್ಲಿ ಕನಿಷ್ಠ ಮೂಲಭೂತ ವ್ಯವಸ್ಥೆ ಕಲ್ಪಿಸುವಲ್ಲೇ ಸಾಧಿಸಲಾಗದ ಬಿಜೆಪಿಗೆ, ವಿಭಾಗ ಬದಲಾವಣೆಯನ್ನು ಐತಿಹಾಸಿಕ ಸಾಧನೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕಿಲ್ಲ. ಇದು ಸಾಧನೆಯಲ್ಲ—ಜನರ ಕಣ್ಣಿಗೆ ಮಣ್ಣು ಎರಚುವ ರಾಜಕೀಯ ಪ್ರಚಾರ.