ಮೃದು ಹಿಂದುತ್ವವಾದಿಗಳನ್ನು ದೂರ ಇಟ್ಟು ಅರ್ಹರನ್ನು ಪರಿಗಣಿಸಲಿ; ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಮತ್ತು ಇಂದಿನ ಕಾಲಘಟ್ಟಕ್ಕೆ ಅತ್ಯಂತ ತುರ್ತು ಅಗತ್ಯವಾಗಿ ಮುಂಚೂಣಿಯಲ್ಲಿ ಕಾಣಿಸುವ ಏಕೈಕ ವ್ಯಕ್ತಿ ಶೇಖರ್ ಕುಕ್ಕೇಡಿ. ಸಾಮಾಜಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಯುವ ನಾಯಕ ಜಿಲ್ಲಾ ಪರಿಶಿಷ್ಟ ಜಾತಿ ಘಟಕದ ಮಾಜಿ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶೇಖರ್ ಕುಕ್ಕೇಡಿಯವರು ಜಿಲ್ಲಾದ್ಯಕ್ಷ ಸ್ಥಾನಕ್ಕೆ ಅರ್ಹವ್ಯಕ್ತಿ.
ಎಳೆವಯಸ್ಸಿನಲ್ಲೇ ಸಂವಿಧಾನದ ಬಗ್ಗೆ ಅಪಾರ ಜ್ಞಾನ ಹೊಂದಿ, ದಲಿತ ಚಳವಳಿ ಮೂಲಕ ಜನಸಾಮಾನ್ಯರ ನಡುವೆ ಚಿರಪರಿಚಿತರಾಗಿರುವ ಶೇಖರ್ ಕುಕ್ಕೇಡಿರವರು ಬೆಳ್ತಂಗಡಿಯ ಶಾಸಕರಾಗಿದ್ದ ದಿ. ವಸಂತ ಬಂಗೇರರ ಅಪ್ಪಟ ಶಿಷ್ಯ ವರ್ಗದಲ್ಲಿ ಗುರುತಿಸಿಕೊಂಡಿದ್ದರು. ನೇರ ನಡೆನುಡಿಯಿಂದ ಯುವಕರ ಕಣ್ಮಣಿಯಾಗಿರುವ ಅವರು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಅಪ್ಪಟ ಅನುಯಾಯಿಯಾಗಿ ದಲಿತ ಸಮುದಾಯದ ಪರ ಚಳವಳಿಯಲ್ಲಿ ತನ್ನನ್ನು ತಾನು ಅರ್ಪಿಸಿಕೊಂಡು ಹಲವಾರು ಹೋರಾಟಗಳಿಗೆ ಮುಂಚೂಣಿ ನಾಯಕತ್ವ ನೀಡಿದವರು. ತನ್ನ ಹುಟ್ಟೂರು ಕುಕ್ಕೇಡಿಯಲ್ಲಿ ಎರಡುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ, ಜೊತೆಗೆ ಅಂಬೇಡ್ಕರ್ ಪುತ್ಥಳಿಯನ್ನು ನಿರ್ಮಾಣ ಮಾಡಿದ್ದಾರೆ. ಇಡೀ ಜಿಲ್ಲೆಯಲ್ಲಿ ಅಳೆದು ತೂಗಿದರೂ ಪ್ರಸ್ತುತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿಯಾಗಿದ್ದಾರೆ ಶೇಖರ್ ಕುಕ್ಕೇಡಿ.

ಪಕ್ಷದ ತಳಮಟ್ಟದ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ಇತಿಹಾಸ ಪ್ರಸಿದ್ಧ ವೇಣೂರು ಪೆರ್ಮುಡ ಜೋಡುಕರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾಗಿ ಕಂಬಳಕ್ಕೆ ಹೊಸ ಮೆರುಗು ನೀಡಿದ್ದಾರೆ. ಪ್ರತಿ ವರ್ಷವೂ ಯುವಜನರಿಗಾಗಿ ಹಗಲು ರಾತ್ರಿ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸದಾಕಾಲವೂ ಜನಸಾಮಾನ್ಯರ ನಡುವೆ ಬೆರೆಯುತ್ತಿರುವ ಕುಕ್ಕೇಡಿ ಬಳಿ ಯಾವುದೇ ಸಮಸ್ಯೆಗಳನ್ನು ಹೇಳಿಕೊಂಡರೂ ಅದಕ್ಕೆ ಪರಿಹಾರವನ್ನು ದೊರಕಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ಅಪ್ಪಟ ಜಾತ್ಯಾತೀತ ಸಿದ್ದಾಂತವನ್ನು ಮೈಗೂಡಿಸಿಕೊಂಡಿರುವ ಅವರು ಕೋಮುವಾದದ ಸಿದ್ಧಾಂತದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದ ಹೋರಾಟದಲ್ಲೂ ಗುರುತಿಸಿಕೊಂಡಿದ್ದಾರೆ. ಕೋಮುವಾದಿ ಶಕ್ತಿಗಳ ಪ್ರಯೋಗಶಾಲೆಯಾಗಿರುವ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಯನ್ನು ಸಾಂಸ್ಕೃತಿಕ ರಾಜಕೀಯವಾಗಿ ಸಂಘಟಿಸಿ ಮತ್ತಷ್ಟು ಬಲಪಡಿಸಲು ಅತ್ಯಂತ ಅರ್ಹ ವ್ಯಕ್ತಿ ಶೇಖರ್ ಕುಕ್ಕೇಡಿ. ಕೆಪಿಸಿಸಿ ಅಧ್ಯಕ್ಷರಾಗಿರುವ ಬಿ.ಕೆ ಹರಿಪ್ರಸಾದ್ ಅವರಂತೆ ಕೋಮುವಾದದ ಅಪಾಯಕಾರಿ ಸಿದ್ದಾಂತದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಕ್ಕೇಡಿಯವರು ಅದಕ್ಕೆ ತದ್ವಿರುದ್ಧವಾಗಿ ಜಾತ್ಯಾತೀತ ಸಾಂಸ್ಕೃತಿಕ ರಾಜಕೀಯ ನಡೆಸುವ ಮೂಲಕ ಕೋಮುವಾದಿಗಳನ್ನು ಮಟ್ಟ ಹಾಕಲು ಅತ್ಯಂತ ಸೂಕ್ತ ವ್ಯಕ್ತಿ ಎಂದರೆ ತಪ್ಪಾಗಲಾರದು. ಮುಂಬರುವ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿ, ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಸಾಧಿಸಲು ಸಾಧ್ಯವಾಗಬಹುದು ಎಂಬುದನ್ನು ನಿರೀಕ್ಷಿಸಬಹುದು.
ಈ ಹಿನ್ನೆಲೆಯಲ್ಲಿ ಸಂಘಟನಾ ಸೃಜನ್ ಅಭಿಯಾನದ ಎಐಸಿಸಿ ಮತ್ತು ಕೆಪಿಸಿಸಿ ವೀಕ್ಷಕರು ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಮೃದು ಹಿಂದುತ್ವವಾದಿಗಳನ್ನು ಹೊರಗಿಟ್ಟು ಶೇಖರ್ ಕುಕ್ಕೇಡಿ ಎಂಬ ಅಪ್ಪಟ ಜಾತ್ಯಾತೀತವಾದಿ, ಕಾಂಗ್ರೆಸ್ ಪಕ್ಷದ ಕಟ್ಟಾಳುವನ್ನು ಆಯ್ಕೆ ಮಾಡುವುದು ದ.ಕ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಇತಿಹಾಸ ಮರುಕಳಿಸಲು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ವೀಕ್ಷಕರ ತಂಡ ಗಂಭೀರವಾಗಿ ಪರಿಗಣಿಸಿ ಸೂಕ್ತವಾಗಿ ಪರಿಶೀಲಿಸಬೇಕು ಮತ್ತು ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯುವ ಮೂಲಕ ಶೇಖರ್ ಕುಕ್ಕೇಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿ ಎಂಬುದು ಜಿಲ್ಲೆಯ ಬಹುಜನರ ಅಪೇಕ್ಷೆಯಾಗಿದೆ.

ಲೋಕಸಭಾ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ನಡೆಸಿದ ಐತಿಹಾಸಿಕ ಭಾರತ್ ಜೋಡೋ ಕಾಲ್ನಡಿಗೆಯಲ್ಲಿ ಸೌಹಾರ್ದ ಭಾರತ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಅಂತಹ ಐತಿಹಾಸಿಕ ಕಾರ್ಯಕ್ರಮದ ನೆನಪನ್ನು ಶಾಶ್ವತವಾಗಿ ಉಳಿಸಲು ಹಾಗೂ ಜಾತಿ , ಧರ್ಮದ ಭೇದ ಭಾವ ಮರೆತು ಮನಸ್ಸುಗಳನ್ನು ಬೆಸೆಯುವ ಮಹತ್ವದ ಕಾರ್ಯಕ್ರಮದ ಭಾಗವಾಗಿ ಭಾರತ್ ಜೋಡೋ ಯುವ ಸಂಘವನ್ನು ರಾಜ್ಯ ಸರ್ಕಾರ ಸ್ಥಾಪಿಸಲು ಮುಂದಾಗಿದ್ದು , ಕುಕ್ಕೇಡಿ , ನಿಟ್ಟಡೆ ಗ್ರಾಮದ ಯುವಜನರು ಇದರ ಸದುಪಯೋಗ ಪಡಿಸಿಕೊಂಡು ಸೌಹಾರ್ದ ಗ್ರಾಮ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ವ್ಯವಸ್ಥಿತ ಪಿತೂರಿ ದೇಶದಲ್ಲಿ ಆರಂಭವಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇಂತಹ ಸಂದರ್ಭದಲ್ಲಿ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಾಗೂ ಪಡೆಯಲು ಸಂಘಟಿತರಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಯುವ ಜನತೆಗೆ ಕರೆ ನೀಡಿದ್ದರು. ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾದ ಮೀಸಲಾತಿಯನ್ನು ರದ್ದುಪಡಿಸಲು ಸಂವಿಧಾನ ವಿರೋಧಿಗಳು ಪ್ರತಿಭಟನೆಯ ಹಂತಕ್ಕೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯವನ್ನು ಜಾಗೃತಗೊಳಿಸಿದ್ದರು.
ಶೇಖರ್ ಕುಕ್ಕೇಡಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪ್ರದೇಶದ ಪ್ರಮುಖ ಸಾಮಾಜಿಕ ಕಾರ್ಯಕರ್ತರು ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು. ಇವರು ದಲಿತ ಸಂಘರ್ಷ ಸಮಿತಿ (ದಸಂಸ) ಹಾಗೂ ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಸಾರ್ವಜನಿಕ ಸಮಸ್ಯೆಗಳ ಧ್ವನಿಯಾಗಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ, ನಿಷ್ಪಕ್ಷಪಾತ ತನಿಖಾ ಆಗ್ರಹ ಹಾಗೂ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
