ಮೂಲ್ಕಿ- ಪಾವಂಜೆಯಲ್ಲಿ ಮರಳು ಕದಿಯುವವರೇ ಬಾಸ್ ಗಳು.! ಹಸಿರುಪೀಠದ ನಿರ್ದೇಶನವಿದ್ದರೂ ಮರಳು ದೋಚುವ ಖದೀಮರು.!

ಕರಾವಳಿ

ಬಿಜೆಪಿ -ಕಾಂಗಿ, ಸಂಘಿ ಭಾಯಿ-ಭಾಯಿ ವ್ಯವಹಾರ.. ಹಳೇ ಪಾತಕಿಗಳ ಮಿಶ್ರಣ.!

ಕಾಂಡ್ಲಾವನ ನಾಶಪಡಿಸುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧ

ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿ ಪೂರ್ತಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ ಮರಳು ಮಾಫಿಯಾವನ್ನು ಕೇಳುವವರೇ ಇಲ್ಲದಂತಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಗಳೇ ಇಂತಹ ದಂಧೆಕೋರರಿಗೆ ಸಾಥ್ ಕೊಡುತ್ತಿದೆ. ಜಿಲ್ಲಾ ದಂಡಾಧಿಕಾರಿಯಂತೂ ಮೌನಕ್ಕೆ ಶರಣಾಗಿದ್ದಾರೆ.

ಜಿಲ್ಲೆಯ ಹಲವು ಕಡೆ ಅಕ್ರಮ ಮರಳುಗಾರಿಕೆಯಿಂದ ಸೇತುವೆಗಳು ದುರ್ಬಲಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಮೂಲ್ಕಿ ಪರಿಸರದಲ್ಲಂತೂ ಅಕ್ರಮ ಮರಳುಗಾರಿಕೆ ಆಟಾಟೋಪಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಇಲ್ಲಿ ಕಾಂಡ್ಲಾ ವನಗಳನ್ನು ಕಡಿದು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಇನ್ನೊಂದು ಭಯಾನಕ ಸಂಗತಿ. ಆದರೆ ಇಲಾಖೆಯಂತೂ ಪೂರ್ತಿ ಮೌನಕ್ಕೆ ಶರಣಾಗಿದೆ. ಮೂಲ್ಕಿ ಆಚೆಯ ಉಡುಪಿ ಜಿಲ್ಲೆಯಲ್ಲಂತೂ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು ನಿರ್ಬಂಧಿತ ಪ್ರದೇಶಗಳಲ್ಲಿ ಒಂದು ಹಿಡಿ ಮರಳು ತೆಗೆಯಲು ಅವಕಾಶ ನೀಡದೆ ಅಸಲಿ ಸಿಂಗಂ ರೀತಿ ಇಲಾಖೆ ಕಾರ್ಯಾಚರಿಸುತ್ತಿದೆ. ಆದರೆ ಮಂಗಳೂರು ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ ವ್ಯಾಪ್ತಿಯ ಮೂಲ್ಕಿ-ಪಾವಂಜೆ ನಿರ್ಬಂಧಿತ ಪ್ರದೇಶಗಳಲ್ಲಿ ಹಗಲಲ್ಲೇ ನೂರಾರು ದೋಣಿಗಳ ಮೂಲಕ ಮರಳು ದೋಚುವ ಕಾಯಕ ರಾಜಾರೋಷವಾಗಿಯೇ ನಡೆಯುತ್ತಿದೆ.

ಮೂಲ್ಕಿ ಕ್ಷೇತ್ರದ ಚೇಳಾಯೂರು ಚೆಕ್ ಡ್ಯಾಂ ನಲ್ಲಿ ಮರಳು ತೆಗೆಯುವ ರಭಸಕ್ಕೆ ಬಿರುಕುಗಳು ಕಾಣಿಸಿಕೊಂಡಿರುವುದು ವರದಿಯಾಗಿದೆ. ಮೂಲ್ಕಿ ತಾಲೂಕಿನ ಶಾಂಭವಿ, ನಂದಿನಿ ನದಿಗಳು ಅಕ್ರಮ ಮರಳು ದಂಧೆಕೋರರ ಅಡ್ಡೆಯಾಗಿಬಿಟ್ಟಿದೆ.

ಮೂಲ್ಕಿ ಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಪ್ರದೇಶದಲ್ಲಿ ಹಸಿರುಪೀಠದ ಸ್ಪಷ್ಟ ನಿರ್ದೇಶನವಿದ್ದು, ಮರಳುಗಾರಿಕೆ ನಡೆಸದಂತೆ ನಿರ್ದೇಶನವಿದೆ. ಆದರೆ ಕುರುಡು ಕಾಂಚಾಣದ ಮಧ್ಯೆ ಕಾನೂನು ಕಟ್ಟಲೆಗಳಲ್ಲೆವೂ ನೀರುಪಾಲು.

ಉಡುಪಿ ಜಿಲ್ಲೆಯ ಎಸ್ ಪಿ ಅಕ್ರಮ ಮರಳು ಸಾಗಾಟಕ್ಕೆ ಸಹಕರಿಸಿದ ಹತ್ತಾರು ಪೊಲೀಸರನ್ನು ಮನೆಗೆ ಕಳುಹಿಸಿದ್ದಾರೆ. ವಿಚಿತ್ರ ಎಂದರೆ, ದಕ್ಷಿಣ ಕನ್ನಡ ಕಮೀಷನರೇಟ್ ವ್ಯಾಪ್ತಿಯಲ್ಲಿ ಇಲ್ಲಿನ ಪೊಲೀಸರು, ಕಂದಾಯ ಅಧಿಕಾರಿಗಳು ಅಕ್ರಮ ಮರಳು ಸಾಗಾಟದ ಟಿಪ್ಪರ್ ಗಳಿಗೆ ಬೆಂಗಾವಲು ನೀಡುವುದು ಮಾತ್ರವಲ್ಲ ಒಂದು ಟಿಪ್ಪರ್ ಗೆ, ದೋಣಿದಳಿಗೆ ಇಂತಿಷ್ಟು ಎಂದು ವಸೂಲಿ ಬಾಜಿಗೆ ಇಳಿದಿದ್ದಾರೆ.

ನೀವು ಚುನಾವಣಾ ಸಮಯದಲ್ಲಿ ಬಿಜೆಪಿ -ಕಾಂಗ್ರೆಸ್ ಎಂದು ಹೊಡೆದಾಡಿಕೊಳ್ಳುವವರನ್ನು ನೋಡಿರಬಹುದು. ಆದರೆ ಮೂಲ್ಕಿಯಲ್ಲಿ ಬಿಜೆಪಿ -ಕಾಂಗ್ರೆಸ್-ಸಂಘಪರಿವಾರದ ಮಂದಿ ಸೌಹಾರ್ದತೆಯಿಂದ ಭಾಯಿ ಭಾಯಿ ರೀತಿ ಮರಳು ದೋಚುತ್ತಿದ್ದಾರೆ. ಜೊತೆಗೆ ಕೆಲವು ಹಳೆ ಕ್ರಿಮಿನಲ್ ಗಳು ಮರಳು ದಂಧೆಗೆ ಕೈ ಜೋಡಿಸಿ ಮೂಲ್ಕಿ-ಪಾವಂಜೆಯಲ್ಲಿ ಮರಳು ಸಂಪತ್ತನ್ನು ಅವ್ಯಾಹತವಾಗಿ ದೋಚಿ ನೀರು ಕುಡಿಯುತ್ತಿದ್ದಾರೆ. ಇಲ್ಲಿ ಎಲ್ಲರೂ ಭಾಯಿ ಭಾಯಿ ಆಗಿ ಮರಳು ಮುಕ್ಕುವುದರಿಂದ ಇಲಾಖೆಗಳು ತಮಗೇನು ಇಲ್ಲಿ ಕೆಲಸವಿಲ್ಲ ಎಂದು ಮಾರುದ್ದ ಹೋಗುತ್ತಿದ್ದಾರೆ. ಒಟ್ಟಾರೆ ಮೂಲ್ಕಿಯಲ್ಲಿ ಮರಳು ಕದಿಯುವವರೇ ಬಾಸ್ ಗಳಾಗಿದ್ದಾರೆ.

ಕಾಂಡ್ಲಾವನ ನಾಶ.. ಸರ್ವನಾಶಕ್ಕೆ ದಾರಿ, ಜಾಗ್ರತೆ.!

ಪಾವಂಜೆ ನದಿ ತೀರದಲ್ಲಿ ಸೊಂಪಾಗಿ ಬೆಳೆದಿದ್ದ ಕಾಂಡ್ಲಾವನ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಮರಳುಗಾರಿಕೆಗೆ ನಲುಗಿದ್ದು, ವಿನಾಶದತ್ತ ಸಾಗಿದೆ. ಇಲ್ಲಿನ ತೀರದಲ್ಲಿ ಅಳಿದುಳಿದಿದ್ದ ಕಾಂಡ್ಲಾ ಸಸ್ಯಗಳು ಸೊಂಪಾಗಿ ಬೆಳೆದಿದ್ದು ಈಗ ಮತ್ತೆ ಮರಳುಗಾರಿಕೆ ಶುರುವಾಗಿದ್ದರಿಂದ ಕಾಂಡ್ಲ ಗಿಡಗಳನ್ನು ಮರಳು ಮಾಫಿಯಾದ ಕುಳಗಳು ಸರ್ವನಾಶ ಮಾಡುತ್ತಿರುವ ಕಾರಣ ಇಲ್ಲಿನ ಪರಿಸರಕ್ಕೆ ಸಂಚಕಾರ ತಪ್ಪಿದ್ದಲ್ಲ. ಇಲ್ಲಿ ರಾಜಕಾರಣಿಗಳು, ಗೂಂಡಾಗಳು, ಕೋಮುವಾದಿಗಳು, ಹಳೇ ರೌಡಿಗಳು, ವೈಟ್ ಕಾಲರ್ ಕಾಂಗಿಗಳು, ಸಂಘಿಗಳು ಒಟ್ಟಾಗಿ ಕಾಂಡ್ಲಾವನವನ್ನು ಸರ್ವನಾಶಮಾಡಿ ಮರಳಿನ ದಕ್ಕೆ ಮಾಡಿರುತ್ತಾರೆ. ಇದಕ್ಕೆ ಅಧಿಕಾರಿಗಳು, ರಾಜಕೀಯ ಯುವ ಪುಢಾರಿಯೊಬ್ಬನ ಸಾಥ್ ಕೂಡಾ ಇದೆಯಂತೆ. ಇಷ್ಟೇಲ್ಲಾ ಅಕ್ರಮಗಳು ನಡೆಯುತ್ತಿದ್ದರೂ ಮಾನ್ಯ ಜಿಲ್ಲಾಧಿಕಾರಿಗಳು ಮೌನಕ್ಕೆ ಜಾರಿದ್ದು ಸ್ಥಳೀಯರಲ್ಲಿ ಅನುಮಾನ ಹೆಚ್ಚಿಸಿದೆ. ಅಧಿಕಾರಶಾಹಿಗಳ ಬೆಂಬಲ, ಕಾಂಡ್ಲವನ ನಾಶದಿಂದಾಗಿ ಸ್ಥಳೀಯ ಪರಿಸರದ ಮೇಲೆ ಕೆಟ್ಟ ಪರಿಣಾಮ ಆಗುವುದನ್ನು ತಡೆಯಲಾಗದು. ಆದ್ದರಿಂದ ನದಿತೀರಕ್ಕೆ ನೈಸರ್ಗಿಕ ರಕ್ಷಣೆ ಒದಗಿಸಿದ್ದ ಕಾಂಡ್ಲಾವನ ಮರಳು ದಿಬ್ಬಕ್ಕೆ ಬಲಿಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅನಧಿಕೃತ ಮತ್ತು ವಿವೇಚನೆರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ, ನದಿಯ ಸಾವಿಗೂ ಕಾರಣವಾಗಿದೆ: ಹೈಕೋರ್ಟ್

ನದಿ ತಟದಲ್ಲಿ ಅಕ್ರಮ ಮರಳು, ಗಣಿಗಾರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌, ನದಿ ಪಾತ್ರದಲ್ಲಿನ ಬದಲಾವಣೆಗಳ ಬಗ್ಗೆ ವಾಸ್ತವ ಕಾಲದ ಮಾಹಿತಿ ನೀಡುವ ವ್ಯವಸ್ಥೆ ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ನದಿಗಳ ಗಡಿ, ಮರಳಿನ ದಿಬ್ಬಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗುರುತಿಸಬೇಕು, ಮತ್ತು ಇದರಲ್ಲಿ ಏನೇ ಬದಲಾವಣೆಯಾದರೂ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ತಿಳಿಸುವ ವ್ಯವಸ್ಥೆ ರಚನೆ ಆಗಬೇಕು ಎಂದು ಹೈಕೋರ್ಟಿನ ತೀರ್ಪಿನಲ್ಲಿ ಹೇಳಿದೆ.

ಲಭ್ಯ ಇರುವ ತಂತ್ರಜ್ಞಾನವನ್ನು ಬಳಸಿ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಇದು ಒಂದು ಸಕಾಲ. ಆದ್ದರಿಂದ ರಾಜ್ಯ ಸರಕಾರವು ಗಣಿ ಇಲಾಖೆಯ ಮೂಲಕ ಕಂದಾಯ ಮತ್ತು ಅರಣ್ಯ ಇಲಾಖೆ ಮುಂತಾದವುಗಳ ನೆರವಿನಿಂದ ಉಪಗ್ರಹ ಆಧಾರಿತ ಚಿತ್ರಗಳ ವ್ಯವಸ್ಥೆಯನ್ನು ಬಳಸಿಕೊಂಡು ಇಂತಹ ಸಮಸ್ಯೆಗಳನ್ನು ನಿರ್ವಹಿಸಬೇಕು ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ. ಅನಧಿಕೃತ ಮತ್ತು ವಿವೇಚನೆರಹಿತ ಮರಳು ಗಣಿಗಾರಿಕೆಯು ನದಿಗಳ ಬತ್ತುವಿಕೆಗೆ ಕಾರಣವಾಗಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ನದಿಯ ಸಾವಿಗೂ ಕಾರಣವಾಗಿದೆ ಎಂದು ಹೈಕೋರ್ಟ್‌ ಆತಂಕ ವ್ಯಕ್ತಪಡಿಸಿದೆ.

ದ. ಕ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಎಷ್ಟೊ ಜೀವಗಳು ಬಲಿಯಾಗಿದೆ. ಮುಲ್ಲರಪಟ್ಣ ಸೇತುವೆ, ಮರವೂರು ಸೇತುವೆ, ಇದೀಗ ಅಡ್ಡೂರು ಸೇತುವೆಗೂ ಕಂಟಕ ಎದುರಾಗಿದೆ. ಇದಕ್ಕೆಲ್ಲಾ ಅಕ್ರಮ ಮರುಗಾರಿಕೆಯೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಕರಾವಳಿಯ ಹಿನ್ನೀರಿನಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಂಡ್ಲಾವನಗಳು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇದರ ಮಹತ್ವವನ್ನು ಅರಿಯದೆ ನಾಶಪಡಿಸುವುದರಿಂದ ಇದು ನಶಿಸುವ ಹಂತದಲ್ಲಿದೆ. ಹೀಗಾಗಿ ಇದನ್ನು ರಕ್ಷಿಸಲು ಅರಣ್ಯ ಇಲಾಖೆ ಸ್ಥಳೀಯರ ಮೂಲಕ ಕಾಂಡ್ಲಾವನಗಳನ್ನು ಬೆಳೆಸುತ್ತಿದೆ. ಪಾವಂಜೆ ಪ್ರದೇಶದ ಹಿನ್ನೀರಿನಲ್ಲಿ ಬೆಳೆದು ನಿಂತ ಕಾಂಡ್ಲಾವನವನ್ನು ನಾಶಪಡಿಸಿರುವ ಅಕ್ರಮ ಮರಳು ದಂಧೆಕೋರರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು.

ಕಾಂಡ್ಲಾವನವು ಭೂ ಕೊರತಕ್ಕೆ ತಡೆಯಾಗುತ್ತದೆ. ಮರಗಳು ತಡೆಗೋಡೆಯಂತೆ ಬೆಳೆದು ನಿಲ್ಲುವುದರಿಂದ ಬಿರುಗಾಳಿ, ಚಂಡಮಾರುತ, ಪ್ರವಾಹ, ಕಡಲ್ಕೊರೆತ, ಸುನಾಮಿಯಂಥ ಪ್ರಕೃತಿ ವಿಕೋಪದ ಜತೆಗೆ ಸಮುದ್ರದ ತೀರದಲ್ಲಿ ಉಂಟಾಗುವ ವಿನಾಶವನ್ನು ತಡೆಯುವ ಅಪಾರ ಶಕ್ತಿ ಇವುಗಳಿಗಿದೆ. ಇದರ ದಪ್ಪ ಹಸಿರು ಎಲೆಗಳು ಅಧಿಕ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಜತೆಗೆ ಜಲಚರಗಳ ಸಂತಾನಾಭಿವೃದ್ಧಿಗೂ ಪೂರಕವಾಗಿವೆ. ಕಾಂಡ್ಲಾವನ ನಾಶಪಡಿಸುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧವೂ ಆಗಿದೆ.