ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಕ್ಲೇಮು, ಆಕ್ಷೇಪ ಹಾಗೂ ನೋಂದಣಿಗೆ ಅರ್ಜಿ ಸಲ್ಲಿಸುವಲ್ಲಿ ಮತದಾರರಿಗೆ ನೆರವಾಗಲು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಾಲ್ಕು ದಿನಗಳ ವಿಶೇಷ ಅಭಿಯಾನವನ್ನು ಘೋಷಿಸಿದೆ. ಆಗಸ್ಟ್ 29 ಮತ್ತು 30, ಸೆಪ್ಟೆಂಬರ್ 19 ಮತ್ತು 20ರಂದು ಈ ವಿಶೇಷ ಅಭಿಯಾನ ನಡೆಯಲಿದೆ.ನಾಲ್ಕು ದಿನ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ಇರಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೂಚಿಸಿದೆ.
ಈ ಸಂದರ್ಭದಲ್ಲಿ ಅವರು ಅಗತ್ಯ ಪ್ರಮಾಣದಷ್ಟು ಅರ್ಜಿ ನಮೂನೆ-6, 7 ಮತ್ತು 8 ಅನ್ನು ಇರಿಸಿಕೊಂಡಿರಬೇಕು. ಅರ್ಜಿ ಭರ್ತಿ ಮಾಡುವಲ್ಲಿ ಮತದಾರರಿಗೆ ನೆರವಾಗಬೇಕು. ಕರಡು ಮತದಾರರ ಪಟ್ಟಿಗೆ ಆಕ್ಷೇಪ ಮತ್ತು ಕ್ಲೇಮುಗಳನ್ನು ಸ್ವೀಕರಿಸಬೇಕು. ಪ್ರತಿದಿನ ಸಂಜೆ 5.30ಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.
ಮ್ಯಾಪಿಂಗ್ ವಿವರ ಇಲ್ಲದ ಮತ್ತು ಮತದಾರರ ವಿವರದಲ್ಲಿ ವ್ಯತ್ಯಾಸ ಇರುವ 43.81 ಲಕ್ಷ ಜನರಿಗೆ ನೋಟಿಸ್ ನೀಡಬೇಕಿದೆ. ನೋಟಿಸ್ಗಳ ವಿಚಾರಣೆ ನಡೆಸಿ, ಮತದಾರರ ಪಟ್ಟಿಯಲ್ಲಿ ಮತದಾರರನ್ನು ಉಳಿಸಿಕೊಳ್ಳುವ ಅಥವಾ ಕೈಬಿಡುವ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಕ್ಕಾಗಿ 4,262 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನಿಯೋಜನೆ ಮಾಡಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಆದೇಶಿಸಿದೆ.ನೋಟಿಸ್ ನೀಡುವುದು ಮತ್ತು ಅವುಗಳನ್ನು ಇತ್ಯರ್ಥಪಡಿಸುವುದು ಮತದಾರರ ನೋಂದಣಾಧಿಕಾರಿ (ಇಆರ್ಒ) ಹೊಣೆ. ಅವರ ನೆರವಿಗೆಂದು ಎಇಆರ್ಒಗಳನ್ನು ನಿಯೋಜನೆ ಮಾಡಲಾಗಿತ್ತು. ಈಗ ಹೆಚ್ಚುವರಿ ಎಇಆರ್ಒಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದೆ.
ಇಆರ್ಒಗಳು ನೋಟಿಸ್ ಅನ್ನು ಸೃಜಿಸುತ್ತಾರೆ. ಆದರೆ, ಅದನ್ನು ಮತದಾರರಿಗೆ ತಲುಪಿಸುವ ಹೊಣೆಗಾರಿಕೆ ಬಿಎಲ್ ಒಗಳದ್ದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸ್ಪಷ್ಟಪಡಿಸಿದೆ. ಮತದಾರರು ಸಲ್ಲಿಸಿರುವ ಗಣತಿ ನಮೂನೆಗಳಲ್ಲಿ ಅವರ ಮೊಬೈಲ್ ಸಂಖ್ಯೆ ಇರುತ್ತದೆ. ಅದಕ್ಕೆ ಕರೆ ಮಾಡಿ, ಮತದಾರರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಮತದಾರರ ಮನೆಗೆ ಹೋಗಿಯೇ ನೋಟಿಸ್ ನೀಡಬೇಕು ಎಂದು ಬಿಎಲ್ ಒಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.ಯಾರ ಹೆಸರಿಗೆ ನೋಟಿಸ್ ಬಂದಿರುತ್ತದೆಯೋ ಆ ಮತದಾರರೆ ಇಆರ್ಒ ಮುಂದೆ ಹಾಜರಾಗಿ, ನೋಟಿಸ್ಗೆ ಉತ್ತರ ನೀಡಬೇಕು. ಒಬ್ಬ ಮತದಾರರ ಪರವಾಗಿ ಮತ್ತೊಬ್ಬರು ವಿಚಾರಣೆಗೆ ಹಾಜರಾಗಲು ಅವಕಾಶವಿಲ್ಲ ಎಂದು ತಿಳಿಸಿದೆ.
