2029 ಕ್ಕೆ ದೇಶದಲ್ಲಿ ಜೆನ್ ಝೀ ಗಳದ್ದೇ ಕಾರುಬಾರು.. ಜೆನ್ ಝೀ ಗಳ ಹೃದಯ ಗೆದ್ದವರಿಗೆ ಗದ್ದುಗೆ ಫಿಕ್ಸ್!

ರಾಷ್ಟ್ರೀಯ

ಹಿಂದೂ -ಮುಸ್ಲಿಂ ಖೇಲ್ ಖತಂ.. ಜೆನ್ ಝೀ -ಮಿಲೇನಿಯಲ್ಸ್ ತೀರ್ಪೆ ಫೈನಲ್

2029 ಕ್ಕೆ ಚುನಾವಣೆಯ ಇಶ್ಯೂ ಯಾವುದೆಂದರೆ ಒಳ್ಳೆಯ ಗುಣಮಟ್ಟದ ಶಿಕ್ಷಣ, ಉಜ್ವಲ ಭವಿಷ್ಯಕ್ಕಾಗಿ ಯುವಜನತೆಗೆ ಉದ್ಯೋಗ, ಪರಿಸರದ ಬಗ್ಗೆ ಕಾಳಜಿ, ಆರೋಗ್ಯಕರ ಜೀವನ, ಬೆಲೆ ಏರಿಕೆಗೆ ಕಡಿವಾಣ, ಸ್ವಾಭಿಮಾನದ ಬದುಕು ಇದೇ ಮುಖ್ಯ ಅಸ್ತ್ರ ವಾಗುವ ಸಾಧ್ಯತೆಗಳಿವೆ. ದೇಶದೆಲ್ಲೆಡೆ ಜೆನ್ ಝೀ ಗಳ ಸಂಖ್ಯೆ ಗಣನೀಯ ಮಟ್ಟದಲ್ಲಿರುವುದರಿಂದ ಈ ತಲೆಮಾರನ್ನು ರಾಜಕಾರಣಿಗಳು ಭಾವನಾತ್ಮಕ ಅಂಶಗಳನ್ನು ಮುಂದಿಟ್ಟು ಮಂಕು ಮರುಳು ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಒಟ್ಟು 38 ಕೋಟಿ ಜೆನ್ ಝೀ ಮತದಾರರಿದ್ದಾರೆ. ಜೆನ್ ಝೀ ಗಳ ಹೃದಯ ಗೆದ್ದವರಿಗೆ ಪಟ್ಟ ಖಚಿತ. ಹಿಂದೂ -ಮುಸ್ಲಿಂ ಖೇಲ್ ಖತಂ. ಆ ಜಾತಿ, ಈ ಜಾತಿ ಲೆಕ್ಕಕ್ಕಿಲ್ಲ. ಉಗ್ರರ ಕಥೆ, ಸೈನಿಕರ ಮರಣ ಇಂತಹ ಕಥೆಗಳಿಗೆ ವಿರಾಮ ಬೀಳುವುದು ಖಂಡಿತ. ಇಂತಹ ಆಟಗಳು ಜೆನ್ ಝೀ ಗಳ ಮುಂದೆ ನಡೆಯದು.

ಇತ್ತೀಚೆಗೆ ಜಂತರ್ ಮಂತರ್ ನಲ್ಲಿ ನಡೆದ ಜೆನ್‍ಝೀ ಹೋರಾಟ ದಿಕ್ಕು ದೆಸೆಯಿಲ್ಲದೆ ಸಾಗುವ ಭೀತಿಗೆ ದೆಹಲಿ ಸಿಂಹಾಸನೇ ಗಡಗಡ ನಡುಗಿತ್ತು. ಯಾವುದೇ ಹೋರಾಟಗಳು ಏಕಕಾಲದಲ್ಲಿ ಶುರುವಾಗುವುದಿಲ್ಲ. ಪ್ರತೀ ದೊಡ್ಡ ಹೋರಾಟದ ಹಿಂದೆ ಇಂಕ್ಯುಬೇಷನ್ ಪೀರಿಯಡ್ ಅಂತ ಇರುತ್ತದೆ. ಮೊಟ್ಟೆಗೆ ಕಾವು ಕೊಟ್ಟು ಅದು ಒಳಗೆ ಬೆಳೆದು, ಕೊಕ್ಕು ಕುಕ್ಕುವಷ್ಟು ಶಕ್ತಿ ದೊರೆತಾಗ ಮಾತ್ರ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತದೆ. ನಿರಂತರ ಪೇಪರ್ ಲೀಕ್, ಉದ್ಯೋಗ ಬಿಕ್ಕಟ್ಟು ಹಾಗೂ ಕೇಂದ್ರ ಸರಕಾರದ ಸರ್ವಾಧಿಕಾರ ನಡೆಯಿಂದ ರೋಸಿ ಹೋದ ಯುವಜನತೆ ಸರಕಾರವನ್ನೇ ಮಣಿಸಿತು. ಕಳೆದ ಹನ್ನೆರಡು ವರ್ಷಗಳಿಂದ ಒಬ್ಬನೇ ಒಬ್ಬ ಸಚಿವರನ್ನು ಬಿಟ್ಟುಕೊಡಲು ತಯಾರಿಲ್ಲದ ಕೇಂದ್ರ ಸರಕಾರ ಯುವಶಕ್ತಿಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‍ರ ರಾಜೀನಾಮೆ ಪಡೆಯಿತು. ಇದು ಕೇವಲ ಒಬ್ಬ ಸಚಿವರ ನಿರ್ಗಮನವಲ್ಲ. ವ್ಯವಸ್ಥೆಯ ಪತನ ಎಂದೇ ವಿಶ್ಲೇಷಿಸಲಾಗುತ್ತದೆ.

ದೇಶದಲ್ಲಿ 38 ಕೋಟಿ ಜೆನ್ ಝೀ ಮತದಾರರಿದ್ದರೆ, 36 ಕೋಟಿ ಮಿಲೇನಿಯಲ್ಸ್ ಮತದಾರರಿದ್ದಾರೆ.(ಮಿಲೇನಿಯಲ್ಸ್ ಅಂದರೆ 1981 ಮತ್ತು 1996 ರ ನಡುವೆ ಜನಿಸಿದ ತಲೆಮಾರಿನವರು) ದೇಶದ ಮುಕ್ಕಾಲು ಅಂಶ ಮತದಾರರು ಈ ಎರಡು ತಲೆಮಾರಿನವರೇ ಆಗಿದ್ದಾರೆ. ಇವರ ತೀರ್ಪೆ ಅಂತಿಮ. ಇವರ ಮನಸ್ಸನ್ನು ಯಾರು ಗೆಲ್ಲುತ್ತಾರೋ ಅವರಿಗೆ ಗದ್ದುಗೆ ಖಚಿತ. ಇದೀಗ ಕಾಂಗ್ರೆಸ್, ಬಿಜೆಪಿ ಆದಿಯಾಗಿ ರಾಜಕೀಯ ಪಕ್ಷಗಳು ಯುವ ಸಮುದಾಯದ ಮನಸ್ಸು ಗೆಲ್ಲಲು ಮುಂದಾಗಿದೆ. ಕಾಂಗ್ರೆಸ್ 800 ಕಡೆ ವಿದ್ಯಾರ್ಥಿ ಸಮಾವೇಶ ಹಮ್ಮಿಕೊಳ್ಳುವುದಾಗಿ ಘೋಷಿಸಿದೆ. ಬಿಜೆಪಿಯ ಪ್ರಧಾನಿ ಆದಿಯಾಗಿ ದೊಡ್ಡ ದೊಡ್ಡ ನೇತಾರರು ಇನ್ಸ್ ಟ್ರಾಗ್ರಾಂ, ಸೋಷಿಯಲ್ ಮೀಡಿಯಾ ಮೂಲಕ ಮಧ್ಯರಾತ್ರಿಯೂ ವಿಡಿಯೋ ಮಾಡಿ ಹಂಚುತ್ತಿದ್ದಾರೆ. ಒಂದಷ್ಟು ದಿಟವಾಯಿತು. ಮಂದಿರ ಮಸೀದಿ ಇಶ್ಯೂ ಮುಗಿದು ಹೋಯಿತು. ಅದರ ಹಿಂದೆ ಹೋದರೆ ಮತ ಕೂಡ ಬರಲಾರದು. ಹಿಂದೂ -ಮುಸ್ಲಿಂ ಎಂದು ಡಿವೈಡ್ ರೂಲ್ಸ್ ಗೂ ಜೆನ್ ಝೀ ಗಳು ಬಗ್ಗುವವರಲ್ಲ. ಇವತ್ತಿನ ಜೆನ್ ಝೀ ಗಳಲ್ಲಿ ಹಿಂದೂ -ಮುಸ್ಲಿಂ ಅನ್ನುವ ಭೇದಭಾವವೇ ಇಲ್ಲ. ದ್ವೇಷವನ್ನೇ ಉಸಿರಾಗಿಸಿಕೊಂಡ ಕೆಲವು ಸೋಂಬೇರಿ ಆಂಟಿ-ಅಂಕಲ್ ಗಳ ರಾಜಕೀಯ ಭವಿಷ್ಯವೇ ಖತಂ ಆಗುವುದಂತೂ ಸತ್ಯ.

ದೇಶದಲ್ಲಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವ ಒಂದು ಅದ್ಭುತ ಶಕ್ತಿ ಜೆನ್ ಝೀ ಗಳಿಗಿದೆ. ವಿಶ್ವದಲ್ಲೂ ಇದು ಅನೇಕ ಕಡೆ ಸಾಬೀತಾಗಿದೆ. ನೇಪಾಳ, ಶ್ರೀಲಂಕಾ, ಬಾಂಗ್ಲಾದಲ್ಲಿ ಜೆನ್ ಝೀ ಗಳು ದಂಗೆ ಎದ್ದ ತರುವಾಯ ಅಲ್ಲಿನ ರಾಜಕೀಯ ವ್ಯವಸ್ಥೆಗಳೇ ಬದಲಾಗಿದೆ. ನೇಪಾಳದಲ್ಲಿ ಜೆನ್ ಝೀ ಗಳೇ ಅಧಿಕಾರ ಪಡೆದಿದ್ದಾರೆ. ನಮ್ಮ ದೇಶದಲ್ಲೂ ರಾಜಕೀಯ ವ್ಯವಸ್ಥೆಯ ಬದಲಾವಣೆಗೆ ಜೆನ್ ಝೀ ಗಳು ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿ ದೇಶದ ಶಿಕ್ಷಣ ಮಂತ್ರಿಯನ್ನೇ ಎತ್ತಿ ಬಿಸಾಕಿದ್ದಾರೆ.

ಜೆನ್ ಝೀ ಗಳಿಂದ ರಾಜಕಾರಣ ಸ್ವಚ್ಛವಾಗುವುದಂತೂ ಖಂಡಿತ. ರಾಜಕೀಯ ಬದಲಾಗಬೇಕು. ರಾಜಕೀಯ ಬದಲಾಗದೇ ಇನ್ನೇನೂ ಬದಲಾಗದು. ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಸುಳ್ಳು ಹೇಳಿ ಹಿಂದೂಗಳಿಗೆ ಮಂಕು ಬೂದಿ ಎರಚುವುದು, ನಿಜವಾದ ಇಶ್ಯೂಗಳನ್ನು ಮರೆಮಾಚಿ ಭಾವನಾತ್ಮಕ ಇಶ್ಯೂಗಳನ್ನು ಮುಂದಿಟ್ಟು ಮುಗ್ಧರನ್ನು ಮೋಸಗೊಳಿಸುವ ಇಂದಿನ ರಾಜಕೀಯಕ್ಕೆ ಅಂತ್ಯ ಹಾಡಬೇಕು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು. ಇದೆಲ್ಲವೂ ಜೆನ್ ಝೀ ಗಳಿಂದ ಮಾತ್ರ ಸಾಧ್ಯ.