ಖಡಕ್ ಗೃಹ ಮಂತ್ರಿ ಇದ್ದರೂ ಪೋಸ್ಟಿಂಗ್ ಗೆ ನಡೆಯುತ್ತೆ ಡೀಲಿಂಗ್.. ಆಡಿಯೋ ಬಿಚ್ಚಿಟ್ಟ ಸತ್ಯ!
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ನಡೆಯುತ್ತಿದೆ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರ ಮೇಳೈಸುತ್ತಿದೆ ಅನ್ನುವ ಸುದ್ದಿ ಇದ್ದರೂ ಅದಕ್ಕೆ ಪುಷ್ಟಿ ನೀಡುವಂತ ಆಡಿಯೋ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಠಾಣೆಯ ಪ್ರಮುಖ ಹುದ್ದೆ ಹಾಗೂ ಪೋಸ್ಟಿಂಗ್ ಪಡೆಯಲು ದುಡ್ಡೇ ಪ್ರಮುಖ ಮಾನದಂಡವಾಗುತ್ತಿದೆ ಅನ್ನುವ ಸುದ್ದಿ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಹಳಿಯಾಳದ ಹಿಂದಿನ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಕಿರಣ್ ಪಾಟೀಲ್, ಹಳಿಯಾಳ ಕ್ರೈಂ ವಿಭಾಗದ ಪಿಎಸ್ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸಿದ್ದ ವಿನೋದ್ ರೆಡ್ಡಿ ಅವರ ಧ್ವನಿ ಎನ್ನಲಾದ ಸಂಭಾಷಣೆ ಆಡಿಯೋ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆ ಹಾಗೂ ಪೋಸ್ಟಿಂಗ್ ಗಾಗಿ ಖಾಕಿಗಳೇ ಡೀಲ್ ಕುದುರಿಸುವ ಆಘಾತಕಾರಿ ಸಂಭಾಷಣೆಯನ್ನು ಜೆಡಿಎಸ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ತನ್ನ ಎಕ್ಸ್ ಖಾತೆಯಲ್ಲಿ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಿ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಮುಖ ಹೊರಗೆ ಬಂದಿದೆ ಎಂದಿದೆ. ಕಮಿಷನ್ ಕಾಂಗ್ರೆಸ್ ಸರಕಾರದ ರೇಟ್ ಕಾರ್ಡ್ ದಿನಕ್ಕೊಂದು ರೂಪದಲ್ಲಿ ಬಯಲಾಗುತ್ತಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ನಿಮ್ಮದೇ ಇಲಾಖೆಯಲ್ಲಿ ಅಧಿಕಾರಿಗಳು ವರ್ಗಾವಣೆ ದಂಧೆ ಹಾಗೂ ಕಮಿಷನ್ ಕುರಿತು ಮಾತನಾಡುತ್ತಿದ್ದರೂ ನಿಮ್ಮ ಜಾಣ ಮೌನವೇಕೆ? ಮುಖ್ಯಮಂತ್ರಿಗಳೇ ಇದು ನೀವು ಹೇಳುವ ಪಾರದರ್ಶಕ ಆಡಳಿತವೇ? ಈ ವಸೂಲಿ ದಂಧೆಯಲ್ಲಿ ಮಂತ್ರಿಗಳ ಪಾಲೆಷ್ಟು? ಎಂದು ಪ್ರಶ್ನಿಸಿದೆ. ಅಲ್ಲದೆ ಆಡಿಯೋದಲ್ಲಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.

ಇಂದು ಸರಕಾರದ ವಿವಿಧ ಇಲಾಖೆಗಳ ಪೋಸ್ಟಿಂಗ್ ಗಾಗಿ ದುಡ್ಡು ಕೊಟ್ಟೇ ನೇಮಕ ಮಾಡಲಾಗುತ್ತಿದೆ. ದುಡ್ಡು ಕೊಟ್ಟು ಬಂದವರು ತಮ್ಮ ಕಮಾಯಿ ಮಾಡದೇ ಇರುತ್ತಾರಾ? ಮತ್ತೆಲ್ಲಿ ಭ್ರಷ್ಟಾಚಾರ ನಿಗ್ರಹವಾಗುವುದು. ಆದರೆ ಪೊಲೀಸ್ ಇಲಾಖೆ ಅನ್ನುವುದು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದು, ಇಲ್ಲಿಯೂ ವಸೂಲಿ ದಂಧೆ ನಡೆದರೆ, ಅಸಮರ್ಥರು ನೇಮಕವಾಗಿ ಇಲ್ಲಿನ ಕಾನೂನು ಸುವ್ಯವಸ್ಥೆ ಹಾಳಾದರೆ ಯಾರು ಹೊಣೆ?
ಇದೀಗ ಪೊಲೀಸ್ ಇಲಾಖೆಯಲ್ಲಿ ಈ ಆಡಿಯೋ ಸುದ್ದಿ ಸಂಚಲನ ಸೃಷ್ಟಿಸಿದ್ದು, ಆಡಿಯೋ ಲೀಕ್ ಹಿಂದೆ ಯಾರ ಮಸಲತ್ತು ಇದೆ ಅನ್ನುವ ಚರ್ಚೆ ನಡೆಯುತ್ತಿದೆ. ಆಡಿಯೋ ಲೀಕ್ ಹಿಂದೆ ಅಧಿಕಾರಿಗಳದ್ದೇ ಕೈವಾಡ ಇರಬಹುದು ಅನ್ನುವ ಶಂಕೆ ಮೂಡಿದೆ. ಒಟ್ಟಾರೆ ಈ ಪ್ರಕರಣ ರಾಜ್ಯ ಪೊಲೀಸ್ ಇಲಾಖೆಯೊಳಗಿನ ಡೀಲ್ ಪುರಾಣವನ್ನು ಬಿಚ್ಚಿಟ್ಟಿರುವುದಂತೂ ಸತ್ಯ.
ಇಡೀ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದ ಹಳಿಯಾಳ ಠಾಣೆಯ ಲಾ ಆ್ಯಂಡ್ ಆರ್ಡರ್ ಪಿಎಸ್ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್ಐ ಕೃಷ್ಣ ಅರಿಕೆರೆ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್ಐ ಆಗಿದ್ದ ಮುಂಡಗೋಡ ಪಿಎಸ್ಐ ವಿನೋದ್ ರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಆಡಿಯೋದಲ್ಲಿ ಪೊಲೀಸ್ ಇಲಾಖೆಯೊಳಗಿನ ಪೋಸ್ಟಿಂಗ್ಗಾಗಿ ಹಣ ನೀಡುವ ಬಗ್ಗೆ ಮಾತನಾಡಲಾಗಿದೆ. ಅಷ್ಟೇ ಅಲ್ಲದೆ ಮೇಲಾಧಿಕಾರಿಗಳಿಗೆ ತಿಂಗಳಾ ಹಪ್ತಾ ವಸೂಲಿ ಮಾಡಿಕೊಡಬೇಕು ಎಂಬ ವಿಚಾರವೂ ಚರ್ಚೆಯಾಗಿದೆ. ಇನ್ನು ಈ ಪ್ರಕರಣದ ಹಿನ್ನೆಲೆಯೂ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಿಂದೆ ಹಳಿಯಾಳ ಪೊಲೀಸ್ ಠಾಣೆಯ PSI ಆಗಿದ್ದ ಬಸವರಾಜ್ ಮದನೂರು ಅವರನ್ನು ರೌಡಿಶೀಟರ್ ಮಚ್ ಮಂಜಾ ರಂಪಾಟದ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿ ಅಮಾನತು ಮಾಡಲಾಗಿತ್ತು. ಸುಮಾರು ಎರಡು ತಿಂಗಳ ಹಿಂದೆ ನಡೆದ ಈ ಅಮಾನತಿನಿಂದ ಹಳಿಯಾಳ ಠಾಣೆಯ PSI ಹುದ್ದೆ ತೆರವಾಗಿತ್ತು. ಈ ಸ್ಥಾನಕ್ಕೆ ಈ ಹಿಂದೆ ಹಳಿಯಾಳ ಠಾಣೆಯ ಕ್ರೈಂ ವಿಭಾಗದಲ್ಲಿ PSI ಆಗಿ ಕೆಲಸ ಮಾಡಿದ್ದ ವಿನೋದ್ ರೆಡ್ಡಿ ಮತ್ತೆ ಬರಲು ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ. ಆದರೆ ಅಂತಿಮವಾಗಿ ದಾಂಡೇಲಿ ಠಾಣೆಯ PSI ಆಗಿದ್ದ ಕಿರಣ್ ಪಾಟೀಲ್ ಅವರನ್ನು ಹಳಿಯಾಳ ಠಾಣೆಗೆ ನಿಯೋಜನೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಕರ್ತವ್ಯಲೋಪ ಹಾಗೂ ಶಿಸ್ತು ಉಲ್ಲಂಘನೆ ಆರೋಪದಡಿ ಮೂವರು ಪಿಎಸ್ಐಗಳನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
