ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವಿರುದ್ದದ ಕೇಸ್ ವಜಾಗೊಳಿಸಿದ ಸುಪ್ರೀಂಕೋರ್ಟ್

ಕರಾವಳಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಯಮ ಮೀರಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದೆ ಹಾಗೂ ಕಾನೂನುಬಾಹಿರವಾಗಿ ಮನಿ ಲೆಂಡಿಂಗ್ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆರ್ದೂರ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನಾಗರಿಕ ಸೇವಾ ಟ್ರಸ್ಟ್‌ನ ರಂಜನ್ ರಾವ್ ಯೆರ್ದೂರ್ ಅವರು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯು ಕಾನೂನುಬಾಹಿರವಾಗಿ ಬಡ್ಡಿ ದಂಧೆ ನಡೆಸುತ್ತಿದೆ, ಕರ್ನಾಟಕ ಮನಿ ಲೆಂಡರ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಮತ್ತು ಸಾರ್ವಜನಿಕರಿಗೆ ವಂಚನೆ ಎಸಗುತ್ತಿದೆ ಎಂದು ಆರೋಪಿಸಿ ಈ ಹಿಂದೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆದರೆ ಅರ್ಜಿದಾರರು ಹೊರಿಸಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಸ್ಪಷ್ಟಪಡಿಸಿದ ದೇಶದ ಅತ್ಯುನ್ನತ ನ್ಯಾಯಾಲಯವು, ಈ ವಿಚಾರಣೆಯನ್ನು ಪುರಸ್ಕರಿಸಲು ನಿರಾಕರಿಸಿದೆ.

ಅಧೀನ ನ್ಯಾಯಾಲಯ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಮಟ್ಟದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್, 2026ರ ಜನವರಿ 9 ರಂದು ನೀಡಿರುವ ತನ್ನ ತೀರ್ಪಿನಲ್ಲಿ ರಂಜನ್ ರಾವ್ ಅವರು ನೀಡಿದ್ದ ಅರ್ಜಿಯನ್ನು ರದ್ದುಗೊಳಿಸಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪರವಾಗಿ ಆದೇಶ ಹೊರಡಿಸಿತ್ತು.

ಇದೀಗ ಈ ಅರ್ಜಿಯ ಕುರಿತಾಗಿ ಸುಪ್ರೀಂಕೋರ್ಟ್ ಮಂಗಳವಾರ ದೂರುದಾರರ ಮನವಿಯನ್ನು ವಿಚಾರಣೆಗೊಳಪಡಿಸಿ, ದೂರು ಆಧಾರ ರಹಿತವಾಗಿರುವುದನ್ನು ಮನಗಂಡು ದಾವೆಯನ್ನು ಪ್ರಾಥಮಿಕ ಹಂತದಲ್ಲೇ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಗ್ರಾಮಾಭಿವೃದ್ದಿ ಯೋಜನೆ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ನ್ಯಾಯವಾದಿ ಪದ್ಮ ಪ್ರಸಾದ್ ಹೆಗ್ಡೆ (P.P.HEGDE) ವಾದ ಮಂಡಿಸಿದ್ದಾರೆ.