ಲೈಂಗಿಕ ದುರುದ್ದೇಶವಿರದ ದೈಹಿಕ ಶಿಕ್ಷೆಯನ್ನು ಪೋಕ್ಸೋ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪಾಠವನ್ನು ಪೂರ್ಣ ಗೊಳಿಸಲು ವಿಫಲರಾದ ವಿದ್ಯಾರ್ಥಿನಿಯರಿಗೆ ಹೊಡೆಯುವುದು, ಅವರ ಕೈಗಳನ್ನು ಹಿಡಿಯುವುದು, ಬೆನ್ನು ಅಥವಾ ಸೊಂಟವನ್ನು ಮುಟ್ಟುವುದು ಸೇರಿ ಲೈಂಗಿಕ ಉದ್ದೇಶವಿಲ್ಲದೆ ಶಿಕ್ಷಕರು ನೀಡುವ ದೈಹಿಕ ಶಿಕ್ಷೆಯು ಪೋಕ್ಸೊ ಅಪರಾಧವಲ್ಲ, ಇದು ಪೋಕ್ಸೊ ಕಾಯ್ದೆಯ ಸೆಕ್ಷನ್ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಶಿಕ್ಷಕರ ಇಂತಹ ನಡವಳಿಕೆಯು ಅನುಚಿತವಾದ ಶಿಕ್ಷೆಯ ಸ್ವರೂಪವಾಗಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಹೆಚ್ಚು ಸಂವೇದನಾಶೀಲರಾಗಿ ಇರಬೇಕು’ ಎಂದು ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್.ಚಂದೂರ್‌ಕರ್ ಅವರ ಪೀಠವು ಅಭಿಪ್ರಾಯಪಟ್ಟಿದೆ.
ಪಶ್ಚಿಮ ಬಂಗಾಳದ ಶಿಕ್ಷಕರೊಬ್ಬರ ವಿರುದ್ಧ ಫೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, ಅವರ ವಿರುದ್ಧದ ಮೊಕದ್ದಮೆಯನ್ನು ರದ್ದುಗೊಳಿಸಿತು. ಲೈಂಗಿಕ ಉದ್ದೇಶ ಸಾಬೀತಾಗದ ಹೊರತು, ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಧಿಸುವ ಶಿಕ್ಷೆ ಅಥವಾ ಅವರ ಸಂವೇದನಾಶೀಲವಲ್ಲದ ವರ್ತನೆಯಿಂದ ಉಂಟಾಗುವ ದೈಹಿಕ ಸ್ಪರ್ಶವು ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನ್ಯಾಯಪೀಠ ಹೇಳಿತು. ಬಾಲಕಿಯರ ಅಥವಾ ಸಹ–ಶಿಕ್ಷಣ ಶಾಲೆಗಳಲ್ಲಿ ಶಿಕ್ಷಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವು ‘ಮರಣದಂಡನೆ’ಯಂತೆ, ಇಂತಹ ಆರೋಪವು ಶಿಕ್ಷಕರ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಶಾಶ್ವತವಾಗಿ ಹಾಳುಮಾಡುತ್ತದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.
