ಹೊಸ ಕ್ರಿಮಿನಲ್ ಕಾನೂನು: FIR ದಾಖಲಾದ ದಿನದಿಂದ ಮೂರು ವರ್ಷಗಳೊಳಗೆ ಜನರಿಗೆ ನ್ಯಾಯದೊರೆಯುವುದು ನಿಶ್ಚಿತ: ಅಮಿತ್ ಶಾ

ರಾಷ್ಟ್ರೀಯ

‘ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು ಸಂಪೂರ್ಣವಾಗಿ ಜಾರಿಗೆ ಬಂದ ಬಳಿಕ FIR ದಾಖಲಾದ ದಿನದಿಂದ ಮೂರು ವರ್ಷಗಳೊಳಗೆ ಜನರಿಗೆ ನ್ಯಾಯ ದೊರೆಯುವುದು ನಿಶ್ಚಿತ’, ತೀರಾ ವಿಳಂಬದ ನ್ಯಾಯದಾನ ಪ್ರಕ್ರಿಯೆಗಳಿಂದ ಗುರುತಿಸಿಕೊಂಡಿದ್ದ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಾರ ಬದಲಾವಣೆಗಳು ಆಗಿವೆ. ಹೊಸ ಕ್ರಿಮಿನಲ್‌ ಕಾನೂನುಗಳು ಸಾಕಷ್ಟು ಸುಧಾರಣೆಗಳನ್ನು ತಂದಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಹೇಳಿದ್ದಾರೆ. ಯಾವುದೇ ಪ್ರಕರಣವು ಸುಪ್ರೀಂ ಕೋರ್ಟ್‌ವರೆಗೆ ಹೋದರೂ, ಎಫ್‌ಐಆರ್ ದಾಖಲಾದ ಮೂರು ವರ್ಷದ ಒಳಗೆ ನ್ಯಾಯ ಸಿಗಲಿದೆ ಎಂದಿದ್ದಾರೆ.

ಭೋಪಾಲ್‌ನ ಬಿಎಚ್‌ಇಎಲ್ ಪ್ರದೇಶದಲ್ಲಿರುವ ದಸರಾ ಮೈದಾನದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾ, ಭಾರತೀಯ ನ್ಯಾಯ ಸಂಹಿತೆ (ಬಿಎಸ್‌ಎಸ್‌) ಸಂಪೂರ್ಣವಾಗಿ ಜಾರಿಯಾದ ನಂತರ ಸಾಕಷ್ಟು ಸುಧಾರಣೆಗಳು ಆಗಿವೆ. ಅದರ ಫಲವಾಗಿ ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಆಧುನಿಕ ವ್ಯವಸ್ಥೆ ಎನಿಸಿದೆ ಎಂದು ಹೇಳಿದ್ದಾರೆ.

‘ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣಾ ದಿನಾಂಕಗಳು ಮುಂದೂಡಿಕೆಯಾಗುತ್ತವೆಯೇ ಹೊರತು ನ್ಯಾಯ ದಾನ ಆಗುವುದಿಲ್ಲ ಎಂಬ ಟೀಕೆಗಳು ಇದ್ದವು. ಆದರೆ ಈಗ ಅದೆಲ್ಲವೂ ಬದಲಾಗಿದೆ’ ಎಂದು ಪುನರುಚ್ಚರಿಸಿದ್ದಾರೆ. ದೇಶದಾದ್ಯಂತ ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆಯೂ ಮಾತನಾಡಿದ ಅವರು, ಮಧ್ಯಪ್ರದೇಶವನ್ನು 2029ರ ಡಿಸೆಂಬರ್ 31ರ ವೇಳೆಗೆ ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರವು ವಿಸ್ತೃತ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ.

ಹೊಸ ಕಾನೂನುಗಳಾದ ಬಿಎನ್‌ಎಸ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (BSA) 2024ರ ಜುಲೈ 1ರಿಂದ ಜಾರಿಗೆ ಬಂದಿವೆ.