ಕಾಂಗ್ರೆಸ್ ಮುಸ್ಲಿಮರಿಗೆ ನೀಡಿರುವ ಭರವಸೆ, ಗ್ಯಾರಂಟಿ ಠುಸ್ಸ್.!, ಸಾಬರಿಗೆ ಮುಲಾಮು.!
ಕಾಂಗ್ರೆಸ್ ಪಕ್ಷ ಚುನಾವಣಾ ಸಮಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ ಪ್ರಮುಖ ಭರವಸೆಯೊಂದಿತ್ತು. ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಮೊದಲು ಮಾಡುವ ಕೆಲಸ 2B ಮೀಸಲಾತಿಯನ್ನು ಪುನರ್ ಸ್ಥಾಪಿಸುವುದು. ಮುಸ್ಲಿಂ ಸಮುದಾಯದ ಮತಗಳ ಬಗ್ಗೆ ಕಾಳಜಿ ಇರುವ ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯದ ಅಭ್ಯುದಯಕ್ಕಾಗಿ ಸ್ವತಹ ನೀಡಿದ ಭರವಸೆಯನ್ನು ಅನುಷ್ಠಾನಕ್ಕೆ ತರಲು ಕಾಳಜಿ ವಹಿಸುತ್ತಿಲ್ಲ ಅನ್ನುವುದು ದುರ್ದೈವದ ಸಂಗತಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಹತ್ತಿರ ಹತ್ತಿರ ನಾಲ್ಕು ವರ್ಷಗಳಾಗುತ್ತಿದೆ. ಇನ್ನೊಂದು ವರ್ಷ ಕಳೆದರೆ ಸರಕಾರಕ್ಕೆ ಐದು ವರ್ಷ ಭರ್ತಿಯಾಗುತ್ತದೆ. ಚುನಾವಣಾ ಸಮಯದಲ್ಲಿ ನೀಡಿದ ಭರವಸೆಯನ್ನು ಈವರೆಗೂ ಈಡೇರಿಸಲಿಲ್ಲ. ಕನಿಷ್ಠ ಪಕ್ಷ ಮುಸ್ಲಿಂ ಕಾಂಗ್ರೆಸ್ ನಾಯಕರು ಸರಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಮಾಡುತ್ತಿಲ್ಲ. ಮುಸ್ಲಿಂ ಸಮುದಾಯದ ಮತಗಳು ಹೋಲ್ ಸೇಲ್ ಆಗಿ ಕಾಂಗ್ರೆಸ್ ಪಕ್ಷಕ್ಕೆ ಬೀಳುತ್ತದೆ ಅನ್ನುವ ಭ್ರಮೆಯಲ್ಲಿ ತೇಲಿ ಹೋಗಿದ್ದಾರೆ. ಅಂಗೈಯಲ್ಲಿ ತುಪ್ಪ ತೋರಿಸಿ ಸಮುದಾಯವನ್ನು ಮಂಗ ಮರುಳು ಮಾಡುವಲ್ಲಿ ಕಾಂಗ್ರೆಸ್ ಎತ್ತಿದ ಕೈ ಅನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ.
ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಈ ಹಿಂದಿನ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ರದ್ದು ಮಾಡಿತ್ತು. ಈ ಬಗ್ಗೆ ಮುಸ್ಲಿಂ ಸಮುದಾಯದ ಸಂಘಟನೆಗಳು ಸುಪ್ರೀಂ ಕೋರ್ಟ್ ಗೆ ತೆರಳಿ ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿದಾರರ ಪರವಾಗಿಯೇ ಕೋರ್ಟ್ ಒಲವು ಹೊಂದಿದೆ. ಆದರೆ ರಾಜ್ಯ ಸರಕಾರದ ಪಾತ್ರ ಮಹತ್ವದ್ದು ಇದೆ. ಚುನಾವಣಾ ಸಮಯದಲ್ಲಿ ಘೋಷಿಸಿದಂತೆ 4 ಪರ್ಸೆಂಟು ಮೀಸಲಾತಿಯನ್ನು ಪುನರ್ ಸ್ಥಾಪಿಸಲಾಗುವುದು ಎಂಬುದು. ರಾಜ್ಯ ಸರಕಾರ ಮನಸ್ಸು ಮಾಡಿದರೆ ಅದರ ದಾರಿ ಸುಲಭ ಇದೆ. ಈಗಾಗಲೇ ಸುಪ್ರೀಂಕೋರ್ಟ್ ನಲ್ಲಿರುವ ಕೇಸ್ ಅನ್ನು ಇತ್ಯರ್ಥಪಡಿಸುವ ಕೆಲಸವನ್ನು ಮೊದಲಿಗೆ ರಾಜ್ಯ ಸರ್ಕಾರ ಮಾಡಬೇಕಾಗಿದೆ. ಅದರ ಹಾದಿ ಕೂಡ ಅಷ್ಟೇ ಸಲೀಸಾಗಿ ಇದೆ.

ಮೊದಲಿಗೆ ರಾಜ್ಯ ಸರಕಾರಕ್ಕೆ ಪ್ರಮಾಣಿಕ ಇಚ್ಛಾಶಕ್ತಿ ಬೇಕು. ತಮ್ಮನ್ನು ನಿರಂತರವಾಗಿ ಗೆಲ್ಲಿಸಿ ಕೊಡುವ ಮೂಲಕ ಅಧಿಕಾರ ಪಡೆಯಲು ಸಹಕರಿಸುವ ಮುಸ್ಲಿಂ ಸಮುದಾಯಕ್ಕೆ ಋಣ ತೀರಿಸುವ ಕಾಳಜಿಯೂ ಇರಬೇಕು. ಅದು ಕಾಂಗ್ರೆಸ್ಸಿಗರಿಗೆ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಒಂದು ನಿರ್ಣಯವನ್ನು ಪಾಸ್ ಮಾಡಬೇಕು. ನಾವು 2023 ಮಾರ್ಚ್ ತಿಂಗಳಲ್ಲಿ ಕರ್ನಾಟಕ ಸರಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಂಡಿದ್ದೇವೆ. ಅದರ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಬೇಕು. ನಮ್ಮ ಸರಕಾರ ಇಂತಹದ್ದೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು. ಅದನ್ನು ಪ್ರಶ್ನಿಸಿ ಗುಲಾಂ ರಸೂಲ್ ಹಾಗೂ ಅಂಜುಮನ್ ಎ ಇಸ್ಲಾಂ ಸಂಘಟನೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ನಾವು 2023 ರ ಆದೇಶವನ್ನು ಹಿಂತೆಗೆದು ಕೊಂಡಿರುವ ಕಾರಣ ಅದು ರದ್ದಾಗಿರುವುದರಿಂದ ಈ ಕೇಸ್ ಕೂಡ ವಿತ್ ಡ್ರಾ ಆಗುತ್ತದೆ. ಆಗ ಆ ಕೇಸ್ ಕೂಡ ಬಿದ್ದು ಹೋಗುತ್ತದೆ. ಮಾಡಬೇಕಿರುವುದು ಇಷ್ಟೇ. ಇದನ್ನು ಮಾಡಲು ಕಾಂಗ್ರೆಸ್ ಸರಕಾರ ಹಿಂದೇಟು ಹಾಕುತ್ತಿದೆ.
ಗುಲಾಂ ರಸೂಲ್ ಹಾಗೂ ಅಂಜುಮನ್ ಇಸ್ಲಾಂ ಇವರ ಪರವಾಗಿ ಕಪಿಲ್ ಸಿಬಲ್, ದುಷ್ಯಂತ್ ದವೆ, ಗೋಪಾಲ್ ಶಂಕರ್ ನಾರಾಯಣ್ ರಂತಹ ಪ್ರಖ್ಯಾತ ವಕೀಲರು ವಾದ ಮಂಡಿಸಿದ್ದರು. ಆದು ಸುಪ್ರೀಂಕೋರ್ಟ್ ಗೆ ಮನವರಿಕೆ ಕೂಡಾ ಆಗಿತ್ತು. ಸುಪ್ರೀಂ ಕೋರ್ಟ್ ಹೇಳಿತ್ತು. ಆರ್ಟಿಕಲ್ 332 ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ್ದು, ಇದರ ವಿರುದ್ಧ ಬೊಮ್ಮಾಯಿ ಸರಕಾರ ಆದೇಶ ಹೊರಡಿಸಿರುವುದು ಅಸ್ಥಿರವಾದುದು. ಆದೇಶ ವಾಪಸ್ ತೆಗೆದರೆ ಆ ಕೇಸ್ ತನ್ನಿಂದ ತಾನೇ ಬಿದ್ದು ಹೋಗುತ್ತದೆ. ಅದನ್ನು ಮಾಡಲು ಕಾಂಗ್ರೆಸ್ ಸರಕಾರ ತಯಾರಿಲ್ಲ. ಇಚ್ಚಾಶಕ್ತಿಯೂ ಇಲ್ಲ.

ಹಿಂದುಳಿದ ವರ್ಗದ ಚಾಂಪಿಯನ್, ಅಹಿಂದ ವರ್ಗದ ನಾಯಕ ಸಿದ್ದರಾಮಯ್ಯ ಅವಧಿಯಲ್ಲೂ ಈ ಕೆಲಸ ಮಾಡಬಹುದಿತ್ತು. ಅವರು ಕೂಡ ಮಾಡಿಲ್ಲ. ಕಾಂಗ್ರೆಸ್ ಸರಕಾರ ಬದಲಾಗಲಿಲ್ಲ. ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ. ಡಿಕೆಶಿ ಅವರಲ್ಲೂ ಮುಸ್ಲಿಂ ಸಮುದಾಯ ಒತ್ತಾಯ ಮಾಡಬೇಕಾಗಿದೆ.
ಇಲ್ಲಿ ಪ್ರಶ್ನೆ ಇರುವುದು ಬೊಮ್ಮಾಯಿ ಸರಕಾರ ಒಂದು ಆದೇಶ ಹೊರಡಿಸಿ ಆ ಗ್ರೂಪನ್ನು ಬದಲಾವಣೆ ಮಾಡಿರುವುದು. 2ಬಿ ಯನ್ನು ರದ್ದು ಮಾಡಿತು. 2ಸಿ, 2ಡಿ ಎಂದು ಮಾಡಿತ್ತು. ಆ ಆದೇಶ ಹಿಂತೆಗೆದುಕೊಂಡರೆ ಆ ಕೇಸ್ ಮುಗಿದು ಹೋಗುತ್ತದೆ.
ಸುಪ್ರೀಂ ಕೋರ್ಟ್ ಮುಂದೆ ಬೇರೆ ಎರಡು ಅರ್ಜಿಗಳು ಇದೆ. ಅದು ಹಳೆಯದ್ದು, ಒಂದು, ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಹುದಾ.? ಎರಡನೆಯದ್ದು, 10 ಪರ್ಸೆಂಟ್ ಇಕನಾಮಿಕಲ್ ವೀಕರ್ ಸೆಕ್ಷನ್ ಅಂತ ಮೋದಿ ಸರಕಾರ ತಂದಿದ್ದು( ಕರ್ನಾಟಕದಲ್ಲಿ ಬ್ರಾಹ್ಮಣರು, ವೈಷ್ಣವರು, ಮೊದಲಿಯಾರ್ ಇವರಿಗೆ ಸಂಬಂಧಿಸಿದ್ದು) ಕರ್ನಾಟಕದಲ್ಲಿ ಈ ಆದೇಶ ಜಾರಿಗೊಳಿಸಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಇದು ಜಾರಿಗೆ ಬಂದಿದೆ. ಇದು ಬೇರೇನೇ ಪ್ರಕರಣ. ರಾಜ್ಯದ ಪ್ರಕರಣಕ್ಕೂ ಇದಕ್ಕೂ ತಾಳೆ ಹಾಕುವುದು ಸಮಂಜಸವಲ್ಲ.

ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ನಾಯಕರಿಗೆ ಇಂತಹ ಹಿತಾಸಕ್ತಿಯೇ ಇಲ್ಲ. ತಮ್ಮ ಅಧಿಕಾರಕ್ಕೆ ಏನಾದರೂ ಧಕ್ಕೆ ಆಗುತ್ತದಾ ಎಂಬುದನ್ನು ಯೋಚಿಸುತ್ತಾರೆಯೇ ವಿನಃ ಸಮುದಾಯಕ್ಕಾಗಿ ಅವರ ಹೃದಯ ಮಿಡಿಯುತ್ತಿಲ್ಲ. ಲಿಂಗಾಯತರು, ಒಕ್ಕಲಿಗರು, ಪಂಚಮಸಾಲಿ ಗಳು ತಮ್ಮ ಸಮುದಾಯಕ್ಕೆ ಧಕ್ಕೆ ಬಂದಾಗ, ಮೀಸಲಾತಿಗೆ ಪಕ್ಷಾತೀತವಾಗಿ ಒಟ್ಟಾಗುತ್ತಾರೆ. ಸರಕಾರದ ಮಂತ್ರಿಗಳು, ಶಾಸಕರು ಭಾಗಿಯಾಗುತ್ತಾರೆ. ಪಕ್ಷಕ್ಕಿಂತ ಸಮುದಾಯದ ಹಿತಾಸಕ್ತಿ ಮುಖ್ಯ ಎಂದು ನಂಬಿರುತ್ತಾರೆ. ಆ ಕಾರಣದಿಂದಾಗಿ ಅವರ ಬೇಡಿಕೆಗಳೆಲ್ಲ ಈಡೇರುತ್ತದೆ. ಆದರೆ ಮುಸ್ಲಿಂ ಸಮುದಾಯ ಈ ಕೆಲಸ ಮಾಡುತ್ತಿಲ್ಲ. ಸಮುದಾಯಕ್ಕಿಂತ ಪಕ್ಷದ ಹಿತಾಸಕ್ತಿ ಮುಖ್ಯ ಎಂದು ನಂಬಿದವರು. ಕಾಂಗ್ರೆಸ್ ಸರಕಾರದ ಕ್ಯಾಬಿನೆಟ್ ನಲ್ಲಿ ಮುಸ್ಲಿಂ ಸಚಿವರಿದ್ದಾರೆ, ಅನೇಕ ಮುಸ್ಲಿಂ ಶಾಸಕರು ಕಾಂಗ್ರೆಸ್ ನಲ್ಲಿದ್ದಾರೆ. ಸಮುದಾಯದ ಪರ ನಿಲ್ಲದೇ ಇರುವುದು ಇದಕ್ಕೆ ಕಾರಣ.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಚುನಾವಣೆ ಸಂದರ್ಭ ಜಮೀರ್ ಅಹಮದ್, ನಸೀರ್ ಅಹಮದ್, ಅಬ್ದುಲ್ ಜಬ್ಬಾರ್ ಪಕ್ಷಕ್ಕಿಂತ ಸಮುದಾಯದ ಹಿತ ಮುಖ್ಯ ಎಂದು ಗಟ್ಟಿಯಾಗಿ ನಿಂತರು. ಪರಿಣಾಮ ಏನಾಯಿತು? 84 ಸಾವಿರ ಮತ ಇರುವ ದಾವಣಗೆರೆ ಸಹಜವಾಗಿ ಮುಸ್ಲಿಂ ಪ್ರತಿನಿಧಿಗಳು ಪ್ರತಿನಿಧಿಸಬೇಕಾದ ಕ್ಷೇತ್ರ. ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂದು ಗಟ್ಟಿಯಾಗಿ ಮಾತನಾಡಿದರು. ಮುಸ್ಲಿಂ ಸಮುದಾಯದ ಹಿತಾಸಕ್ತಿ ಮುಖ್ಯ ಅಂದವರನ್ನೇ ಮೂಲೆಗುಂಪು ಮಾಡಲಾಗಿದೆ. ಮುಸ್ಲಿಂ ಶಾಸಕರನ್ನೇ ಇವರ ವಿರುದ್ಧ ಎತ್ತಿ ಕಟ್ಟಲಾಯಿತು. ಸಮುದಾಯದ ಬೇಡಿಕೆಯನ್ನು ಈಡೇರಿಸಲು ಕಾಂಗ್ರೆಸ್ ನಲ್ಲಿ ಗಂಡಸ್ತನವಿಲ್ಲದ ನಾಯಕರು ಇಲ್ಲ. ಮುಸ್ಲಿಂ ಸಮುದಾಯದ ನಾಲ್ಕೈದು ಮಸೀದಿಗಳಿಗೆ ಅನುದಾನ ಕೊಟ್ಟರೆ ಅದೇ ದೊಡ್ಡ ಸಾಧನೆ ಅನ್ನುವ ರೀತಿಯಲ್ಲಿ ಮುಸ್ಲಿಂ ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಆಸೆ ಹುಟ್ಟಿಸಿ ಓಟು ಪಡೆದ ಕಾಂಗ್ರೆಸ್ ಇದಕ್ಕೆ ಉತ್ತರಿಸುವ ಜರೂರತ್ತು ಇದೆ. ಸಧ್ಯದ ಪರಿಸ್ಥಿತಿಯಲ್ಲಿ ಸಮುದಾಯದ ದುಸ್ಥಿತಿ ಎಷ್ಟು ಬಿಗಡಾಯಿಸಿದೆ ಎನ್ನುವುದನ್ನು ಕಾಂಗ್ರೆಸಿನ ಮುಸ್ಲಿಂ ನಾ(ಲಾ)ಯಕರೆನಿಸಿಕೊಂಡವರು ಅರ್ಥಮಾಡಿಕೊಳ್ಳಬೇಕು. ಮಾತ್ರವಲ್ಲದೆ ಸಮುದಾಯದ ಬಗ್ಗೆ ತಮ್ಮ ಪ್ರಮಾಣಿಕ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ನಾಯಕರ ಹಣೆಬರಹ ಎಷ್ಟು ಗತಿಕೆಟ್ಟಿದೆ ಎನ್ನುವುದು ಜಗಜ್ಜಾಹಿರಾತಗಲಿದೆ.
