ಸಾಲ ವಸೂಲಾತಿ ಅಕ್ರಮ; ಪೊಳಲಿ ಸೇವಾ ಸಹಕಾರ ಸಂಘಕ್ಕೆ ಸಂಕಷ್ಟ; ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮಕ್ಕೂ DR ಸೂಚನೆ

ಕರಾವಳಿ

ಮಂಗಳೂರು: ಸಾಲಗಾರನಿಗೆ ಸಂಬಂಧಿಸದ ಸ್ಥಿರಾಸ್ತಿಯನ್ನು ಸಾಲ ವಸೂಲಾತಿಗಾಗಿ ಹರಾಜು ಮಾಡಲು ಪ್ರಕ್ರಿಯೆ ಆರಂಭಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಳಲಿ ಸೇವಾ ಸಹಕಾರ ಸಂಘದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹಕಾರ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನೋಂದಣಾಧಿಕಾರಿ ರಮೇಶ್ ಅವರು ನೋಂದಣಾಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ಸಾಲಗಾರನ ಹೆಸರಿನಲ್ಲಿ ಅಥವಾ ಆತನ ಮಾಲೀಕತ್ವದಲ್ಲಿಲ್ಲದ ಆಸ್ತಿಯನ್ನು ಅಮಲ್ದಾರಿ ಪ್ರಕರಣದಡಿ ಹರಾಜು ಮಾಡಲು ಆದೇಶಿಸಿರುವುದು ನಿಯಮಾನುಸಾರವಲ್ಲ ಎಂದು ವಿಚಾರಣಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಶಿಫಾರಸು ಮಾಡಿದೆ.

ಪೊಳಲಿ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಯು 2017ರ ಫೆಬ್ರವರಿ 13ರಂದು ಸುರೇಂದ್ರ ಎಂಬವರಿಗೆ ₹2.25 ಲಕ್ಷ ಸಾಲ ಮಂಜೂರು ಮಾಡಿತ್ತು. ಸಾಲದ ಸಂಪೂರ್ಣ ಮೊತ್ತ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಸಹಾಯಕ ನಿಬಂಧಕರ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಸಾಲಕ್ಕೆ ನೇರ ಸಂಬಂಧವಿಲ್ಲದ ಸುರೇಂದ್ರ ಅವರ ತಂದೆ ಗೋಪಾಲ ಅವರ ಆಸ್ತಿಯನ್ನು ಹರಾಜು ಮಾಡಲು 2026ರ ಜನವರಿ 9ರಂದು ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ತನ್ನ ನಡೆಯನ್ನು ಸಮರ್ಥಿಸುತ್ತಾ ಬಂದಿರುವ ಪೊಳಲಿ ಸೇವಾ ಸಹಕಾರ ಸಂಘ ಸುರೇಂದ್ರ ಅವರು ತಮ್ಮ ತಂದೆ ಗೋಪಾಲ ನೀಡಿದ್ದ ಜಿಪಿಎ (GPA) ಆಧರಿಸಿ ಸಾಲ ಪಡೆದಿರುವುದರಿಂದ ಗೋಪಾಲ ಅವರ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡಿದೆ. ಆದರೆ, ಜಿಪಿಎಯಲ್ಲಿ ಗೋಪಾಲ ಅವರ ಸಹಿ ಇಲ್ಲ ಹಾಗೂ ಅದು ಸಾಲ ಮಂಜೂರಾದ ನಂತರದ ಆರ್ಥಿಕ ವರ್ಷದಲ್ಲಿ ಸಿದ್ಧಪಡಿಸಿರುವಂತೆ ಕಂಡುಬರುತ್ತದೆ ಎಂಬ ಅಂಶಗಳು ಪರಿಶೀಲನೆ ವೇಳೆ ಗಮನಕ್ಕೆ ಬಂದಿವೆ.

ಈ ಗಂಭೀರ ಆರೋಪಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತನಿಖೆಗೆ ನಿರ್ದೇಶನ ನೀಡಿದ್ದು, ಅದರಂತೆ ವಿಚಾರಣೆ ನಡೆಸಿರುವ ಸಹಕಾರ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನೋಂದಣಾಧಿಕಾರಿ ರಮೇಶ್ ಅವರು 2026ರ ಸೆಪ್ಟೆಂಬರ್ 28ರಂದು ಸರ್ಕಾರಕ್ಕೆ ವಸ್ತುನಿಷ್ಠ ವರದಿಯನ್ನು ಸಲ್ಲಿಸಿದ್ದಾರೆ. ಜಿಪಿಎಗೂ ಸಾಲಕ್ಕೂ ನೇರ ಸಂಬಂಧ ಕಂಡುಬಂದಿಲ್ಲ. ಸಾಲದ ಅರ್ಜಿಯಲ್ಲಿಯೂ ಜಿಪಿಎ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹರಾಜು ಮಾಡಲು ಆದೇಶಿಸಿರುವುದು ನಿಯಮಾನುಸಾರವಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಕಲಂ 64ರಡಿ ಪೊಳಲಿ ಸೇವಾ ಸಹಕಾರ ಸಂಘದ ವಿರುದ್ಧ ವಿಚಾರಣೆ ನಡೆಸುವಂತೆ ಶಿಫಾರಸು ಮಾಡಲಾಗಿದೆ. ಜತೆಗೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಲಾಗಿದೆ.