ಡಿಸೆಂಬರ್ ಅಂತ್ಯದೊಳಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ; ಟಿಕೆಟ್‌ಗಾಗಿ ಅಕಾಂಕ್ಷಿಗಳಿಂದ ತೀವ್ರ ಲಾಬಿ ಆರಂಭ

ರಾಜ್ಯ

ರಾಜ್ಯದಲ್ಲಿ ಕೊನೆಗೂ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಮುಂಬರುವ ಡಿಸೆಂಬರ್ 15ರ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಡಿಸೆಂಬರ್ 15ರ ವೇಳೆಗೆ ನಡೆಯಲಿವೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಒಂದೆರಡು ದಿನಗಳಲ್ಲಿ ಅಧಿಕೃತ ಮೀಸಲಾತಿ ಪಟ್ಟಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಈಗಿನಿಂದಲೇ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧರಾಗುವಂತೆ ಸೂಚನೆ ನೀಡಲಾಗಿದೆ.

ಮತ್ತೊಂದೆಡೆ, ಚುನಾವಣೆ ನಡೆಸಲು ಅಗತ್ಯವಿರುವ ಮೀಸಲಾತಿ ಪ್ರಕ್ರಿಯೆಗಳು ಈಗಾಗಲೇ ಬಹುತೇಕ ಅಂತಿಮಗೊಂಡಿವೆ. ಕಳೆದ ತಿಂಗಳು ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆದಿದ್ದು, ಶಾಸಕರು ನೀಡಿದ್ದ ಕೆಲ ಸಣ್ಣಪುಟ್ಟ ಬದಲಾವಣೆಗಳ ಸಲಹೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆ ದಿನಾಂಕ ಮತ್ತು ಪ್ರಕ್ರಿಯೆಗಳ ಕುರಿತು ಅಂತಿಮ ಚರ್ಚೆ ನಡೆಯುವ ನಿರೀಕ್ಷೆಯಿದೆ. ಸರ್ಕಾರದಿಂದ ಹಸಿರು ನಿಶಾನೆ ಸಿಕ್ಕ ತಕ್ಷಣ ರಾಜ್ಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲು ಸಜ್ಜಾಗಿದೆ.

ಈ ಬಾರಿಯ ಜಿಪಂ ಮತ್ತು ತಾಪಂ ಚುನಾವಣೆಗಳು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕವೇ ನಡೆಯಲಿವೆ. ಚುನಾವಣಾ ಆಯೋಗಕ್ಕೆ ಅಗತ್ಯವಿರುವ ಮತಪೆಟ್ಟಿಗೆಗಳನ್ನು ಖರೀದಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ಸ್ಥಳೀಯ ಸಂಸ್ಥೆಗಳ ಈ ಚುನಾವಣೆಗಳು ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಲಿವೆ. ಗ್ರಾಮೀಣ ಭಾಗದಲ್ಲಿ ತಮ್ಮ ಪಕ್ಷದ ಬಲಾಬಲ ಹಾಗೂ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲು ಇದು ಸೂಕ್ತ ವೇದಿಕೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ನಾಯಕರ ಪ್ರಭಾವ, ಕಾರ್ಯಕರ್ತರ ಪಡೆ ಮತ್ತು ಜಾತಿ-ಸಾಮಾಜಿಕ ಸಮೀಕರಣಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕವಾಗಲಿದ್ದು, ಈಗಾಗಲೇ ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್‌ಗಾಗಿ ತೀವ್ರ ಲಾಬಿ ಆರಂಭಿಸಿದ್ದಾರೆ.