ರಾಜ್ಯದ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಈ ಸಂಬಂಧ ಸ್ಪಷ್ಟನೆ ನೀಡಿದೆ.
ಈ ಪರೀಕ್ಷೆ ನಡೆಸುವ ಸಂಬಂಧ ಡಿಸೆಂಬರ್ 12 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಪರೀಕ್ಷೆಯು 100 ಅಂಕಗಳಲ್ಲಿ 35ಕ್ಕಿಂತಲೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಇನ್ನೂ ಪ್ರಗತಿ ಸಾಧಿಸಬೇಕಿರುವ ವಿದ್ಯಾರ್ಥಿ ಎಂದು ತೀರ್ಮಾನಿಸಿ 2023 ರ ಜೂನ್ ಮತ್ತು ಜುಲೈ ತಿಂಗಳ ಅಂತ್ಯದಲ್ಲಿ ಕ್ರಮವಾಗಿ ಪರಿಹಾರ ಬೋಧನೆ ಮಾಡಿ ಎರಡು ಪೂರಕ ಪರೀಕ್ಷೆಯನ್ನು ಶಾಲಾ ಹಂತದಲ್ಲಿಯೇ ನಡೆಸಿ, ಸಂಬಂಧಿಸಿದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗೊಳಿಸುವುದು. ಈ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯನ್ನು ಅದೇ ತರಗತಿಯಲ್ಲಿ ಕಲಿಕಾ ಪ್ರಗತಿ ಸಾಧಿಸದ ವಿದ್ಯಾರ್ಥಿ ಎಂದು ಪರಿಗಣಿಸಿ ಅನುತ್ತೀರ್ಣ ಗೊಳಿಸಬಾರದು ಎಂದು ತಿಳಿಸಲಾಗಿತ್ತು.
ಇದೀಗ ಈ ಸುತ್ತೋಲೆಗೆ ಡಿಸೆಂಬರ್ 14 ತಿದ್ದುಪಡಿ ಮಾಡಿರುವ ಶಿಕ್ಷಣ ಇಲಾಖೆಯು ಈ ಮೇಲಿನ ವಿವರಣೆಗಳಿಗೆ ಬದಲಾಗಿ 2023 ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಶಾಲಾ ಹಂತದಲ್ಲಿಯೇ ಪರಿಹಾರ ಬೋಧನೆ ಪ್ರಕ್ರಿಯೆ ಕೈಗೊಂಡು ಕಲಿಕಾ ಸಾಮರ್ಥ್ಯವನ್ನು ಉತ್ತಮಪಡಿಸಲಾಗುವುದು ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಹೇಳಿದೆ.
ಮೊದಲ ಸುತ್ತೋಲೆಯಲ್ಲಿರುವ “ಜೂನ್ ಮತ್ತು ಜುಲೈ ತಿಂಗಳ ಅಂತ್ಯದಲ್ಲಿ ಅವಶ್ಯಕತೆ ಇದ್ದಲ್ಲಿ ಕ್ರಮವಾಗಿ ಪರಿಹಾರ ಬೋಧನೆ ನೀಡಿ ಶಾಲಾ ಹಂತದಲ್ಲಿ ಪೂರಕ ಪರೀಕ್ಷೆಗಳನ್ನು ನಿರ್ವಹಿಸಿ ಕಲಿಕಾ ಬಲವರ್ಧನೆಗೊಳಿಸಬಹುದಾಗಿದೆ” ಎಂಬುದರ ಬದಲಾಗಿ “ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಶಾಲಾ ಹಂತದಲ್ಲಿಯೇ ಪರಿಹಾರ ಬೋಧನೆ ಪ್ರಕ್ರಿಯೆ ಕೈಗೊಂಡು ಕಲಿಕಾ ಸಾಮರ್ಥ್ಯವನ್ನು ಉತ್ತಮಪಡಿಸಲಾಗುವುದು” ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ತಿಳಿಸಿದೆ. ಒಟ್ಟಾರೆ ಪಬ್ಲಿಕ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೆ ಪರೀಕ್ಷೆ ನಡೆಸದಿರುವಂತೆ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ಯಾವುದೇ ಮಕ್ಕಳನ್ನು ಅನುತ್ತೀರ್ಣಗೊಳಿಸಿ, ಒಂದೇ ತರಗತಿಯಲ್ಲಿಟ್ಟುಕೊಳ್ಳುವಂತಿಲ್ಲ. ಅವರಿಗೆ ಅಗತ್ಯ ಶಿಕ್ಷಣ ನೀಡಿ, ಮುಂದಿನ ತರಗತಿಗಳಿಗೆ ಅರ್ಹತೆ ಪಡೆಯುವಂತೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಪೂರಕ ಪರೀಕ್ಷೆಯನ್ನು ನಡೆಸುವ ತೀರ್ಮಾನದಿಂದ ಇಲಾಖೆ ಹಿಂದೆ ಸರಿದಿದೆ.
