ಸರಕಾರಿ ಅಧಿಕಾರಿಗಳು ಜನಸ್ನೇಹಿ ಆಗಿದ್ದರೆ ಅವರು ಎಲ್ಲೂ ಇದ್ದರೂ ನೆನಪಿಸಿಕೊಳ್ಳುವ ಒಂದು ವರ್ಗ ಇದ್ದೇ ಇರುತ್ತದೆ. ಅವರು ಇಲ್ಲಿ ಇದ್ದರೆ ಚೆನ್ನಾಗಿತ್ತು ಅನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ಅಂತಹ ಸಾಲಿಗೆ ಸೇರುವ ಪ್ರಾಮಾಣಿಕ ಅಧಿಕಾರಿಗಳಲ್ಲಿ ರವಿ ಶೆಟ್ಟಿ ಕೂಡಾ ಒಬ್ಬರು.
ಮಂಗಳೂರು ತಾಲೂಕು ಆಡಳಿತ ಸೌಧದಲ್ಲಿ ಕಳೆದ ಹತ್ತು ವರ್ಷಗಳಿಂದ ಆರ್ ಆರ್ ಟಿ ಶಾಖೆಯಲ್ಲಿ ಎಫ್ ಡಿ ಎ ಆಗಿ ಕರ್ತವ್ಯ ನಿರ್ವಹಿಸುತ್ತಾ ಜನಸ್ನೇಹಿ ಅಧಿಕಾರಿ ಎಂದು ಖ್ಯಾತಿ ಪಡೆದಿದ್ದ ರವಿ ಶೆಟ್ಟಿ ಕಳೆದ ವರ್ಷ ಪದೋನ್ನತಿ ಗೊಂಡು ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ಉಪ ತಹಶೀಲ್ದಾರ್ ಆಗಿ ನಿಯೋಜನೆಗೊಂಡಿದ್ದರು. ಮಂಗಳೂರು ತಾಲೂಕು ಆಡಳಿತ ಸೌಧದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಕಚೇರಿ ಕೆಲಸ ಕಾರ್ಯಕ್ಕಾಗಿ ಹಿರಿಯ ನಾಗರಿಕರು ಬಂದರೆ ಅವರಿಗೆ ವಿಶೇಷ ಗೌರವವನ್ನು ಕೊಡುತ್ತಿದ್ದರು. ಹಿರಿಯ ನಾಗರಿಕರನ್ನು ಕಚೇರಿಯಲ್ಲಿ ಕೂರಿಸಿ ತಾವೇ ಖುದ್ದಾಗಿ ಅವರಿಗೆ ಅಗತ್ಯವಿರುವ ಕೆಲಸಗಳನ್ನು ಮಾಡಿ ಕೊಡುತ್ತಿದ್ದರು. ಇಂತಹ ಅಪರೂಪದ ಅಧಿಕಾರಿಯಾಗಿದ್ದರು ರವಿ ಶೆಟ್ಟಿ. ಪಾಪ ಪುಣ್ಯದ ಬಗ್ಗೆ ಇವರಿಗೆ ಅಪಾರ ನಂಬಿಕೆ ಇರುವುದರಿಂದಲೇ ಯಾವುದೇ ಜನಸಾಮಾನ್ಯರು ತನ್ನ ಕಚೇರಿಗೆ ಕೆಲಸಕ್ಕೆ ಬಂದರೆ ಅವರನ್ನು ಪ್ರೀತಿಯಿಂದ ಅತಿಥಿಗಳ ರೀತಿ ನೋಡುತ್ತಿದ್ದರು. ಸರಕಾರಿ ಕೆಲಸ ದೇವರ ಕೆಲಸ ಅನ್ನುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದ ಅಪರೂಪದ ಅಧಿಕಾರಿ.

ಇಂದು ನಮ್ಮ ನಡುವೆ ಅನೇಕ ಸರಕಾರಿ ಅಧಿಕಾರಿಗಳಿದ್ದರೂ ಅವರಿಗೆ ಸೇವಾ ಮನೋಭಾವನೆ ಇರುವುದಿಲ್ಲ. ಸರಕಾರಿ ಸಂಬಳ ಗಿಟ್ಟಿಸಿಕೊಳ್ಳಲು ಮಾತ್ರ ಕೆಲಸ ಮಾಡುವವರಿದ್ದಾರೆ. ಕಚೇರಿ ಕೆಲಸಕ್ಕೆ ಬರುವ ಜನಸಾಮಾನ್ಯರನ್ನು ಸತಾಯಿಸುವುದರಲ್ಲೇ ಪರಮ ಖುಷಿ ಪಡೆಯುವವರಿದ್ದಾರೆ. ಎಲ್ಲಾ ಕೆಲಸ ಮುಗಿದು ಫೈಲ್ ಗೆ ಸಹಿ ಮಾತ್ರ ಬಾಕಿ ಇದ್ದರೂ, ನಾಳೆ ಬನ್ನಿ ಎಂದು ಹೇಳಿ ಐದಾರು ಬಾರಿ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದರಲ್ಲಿ ನಿರತರಾಗಿರುತ್ತಾರೆ.
ಆದರೆ ರವಿ ಶೆಟ್ಟಿ ಇವರಿಗಿಂತ ಭಿನ್ನ ವ್ಯಕ್ತಿ. ಜನಸಾಮಾನ್ಮರಲ್ಲಿ ಆತ್ಮೀಯತೆಯಿಂದ ಮಾತನಾಡುತ್ತಾ, ಅವರ ಕೆಲಸ ಕಾರ್ಯಗಳನ್ನೆಲ್ಲ ಮಾಡಿ ಕೊಡುತ್ತಾರೆ. ಇದನ್ನು ಕಂಡ ಜನಸಾಮಾನ್ಯರು ಹೀಗಲೂ ಇಂತಹ ಅಧಿಕಾರಿಗಳಿರುವುದು ನಮ್ಮ ಪುಣ್ಯ ಅಂತ ಹೇಳುತ್ತಾರೆ.
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಗನಾಗಿರುವ ಇವರು ಕರ್ತವ್ಯ ನಿಷ್ಠೆಯಲ್ಲಂತೂ ರಾಜಿ ಇಲ್ಲ. ಲಂಚಕ್ಕೆ ಕೈಯೊಡ್ಡಿದವರು ಅಲ್ಲವೇ ಅಲ್ಲ. ಜನರ ಸೇವೆಯೇ ಜನಾರ್ದನ ಸೇವೆ ಎಂದು ನಂಬಿದವರು. ಕ್ಲಪ್ತ ಸಮಯಕ್ಕೆ ಕಚೇರಿಗೆ ಹಾಜರಾಗುತ್ತಾರೆ. ಅದನ್ನು ಈವರೆಗೂ ತನ್ನ ವೃತ್ತಿ ಜೀವನದಲ್ಲಿ ಪಾಲಿಸಿಕೊಂಡು ಬಂದವರು. ಮಾನವೀಯ ಕಾಳಜಿ ಹೊಂದಿದವರು. ಈಗ ಮಂಗಳೂರು ಬಿಟ್ಟು ಬೆಳ್ತಂಗಡಿಯಲ್ಲಿ ಸೇವೆ ಯಲ್ಲಿದ್ದರೂ ಇವರ ಪ್ರಾಮಾಣಿಕತೆಯನ್ನು ಇಲ್ಲಿನ ಜನ ಕೊಂಡಾಡುತ್ತಾರೆ. ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಕಳೆದ ಒಂದು ವರ್ಷಗಳಿಂದ ಆರ್ ಆರ್ ಟಿ ಶಾಖೆಯಲ್ಲಿ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅಲ್ಲೂ ಅವರ ಮಾನವೀಯ ಕಾಳಜಿ, ಪ್ರಾಮಾಣಿಕತೆ ಮರೆಯಾಗಿಲ್ಲ. ಸಣ್ಣ ಅವಧಿಯಲ್ಲಿ ಬೆಳ್ತಂಗಡಿ ಜನ ಅವರ ಕಾರ್ಯದಕ್ಷತೆಯನ್ನು ಕೊಂಡಾಡುತ್ತಿದ್ದಾರೆ.
ಇವತ್ತು ಮಂಗಳೂರು ತಾಲೂಕು ಆಡಳಿತ ಸೌಧ ಭ್ರಷ್ಟರ ಕೊಂಪೆಯಾಗಿ ಮಾರ್ಪಟ್ಟಿದೆ. ಜನಸಾಮಾನ್ಯರೊಂದಿಗೆ ದುರಂಹಕಾರದ ಮಾತನಾಡುವ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ನಿಯತ್ತು ಅಂತೂ ಇಲ್ಲವೇ ಇಲ್ಲ. ರವಿ ಶೆಟ್ಟಿ ಅಂತಹ ಪ್ರಾಮಾಣಿಕ ಅಧಿಕಾರಿ ಮತ್ತೆ ಮಂಗಳೂರಿಗೆ ಬರಬೇಕು ಅನ್ನುವುದು ನಾಗರಿಕರ ಒತ್ತಾಸೆ. ಇಲ್ಲಿನ ಉಪ ತಹಶೀಲ್ದಾರ್ ಹುದ್ದೆಯಲ್ಲಿರುವ ವ್ಯಕ್ತಿಯೋಬ್ಬರು ಕಳೆದ ಹದಿನೈದು ವರ್ಷಗಳಿಂದ ಇಲ್ಲಿಯೇ ಝಂಡಾ ಹೂಡಿ ಕುಳಿತಿದ್ದು, ಅವರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಜನಸಾಮಾನ್ಯರ ಜೊತೆ ದರ್ಪದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಅನ್ನುವ ಆರೋಪಗಳು ಇವೆ.
ಜನಸ್ನೇಹಿ ರವಿ ಶೆಟ್ಟಿ ಮತ್ತೆ ಮಂಗಳೂರಿಗೆ ಉಪ ತಹಶೀಲ್ದಾರ್ ಆಗಿ ಬರಲಿ. ಇವರ ಸೇವೆಯನ್ನು ಜನರು ಪಡೆಯಲಿ. ಇಂತಹ ದಕ್ಷ, ಪ್ರಾಮಾಣಿಕ ಅಧಿಕಾರಿ ಮಂಗಳೂರಿಗೆ ಬಂದರೆ ಇಲ್ಲಿನ ತಾಲೂಕು ಆಡಳಿತ ಸೌಧದ ವಾತಾವರಣವು ಬದಲಾಗಬಹುದು. ಸಾರ್ವಜನಿಕರು ಇವರು ಮತ್ತೆ ಮಂಗಳೂರಿಗೆ ಬರುವರು ಅನ್ನುವ ಕಾತುರದಿಂದ ಕಾಯುತ್ತಿದ್ದಾರೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಂತಹ ಪ್ರಾಮಾಣಿಕರಿಗೆ ಬೆಂಬಲವಾಗಿ ನಿಲ್ಲಲಿ.
