ಮಂಗಳೂರು ಉತ್ತರ, ಮೂಡಬಿದ್ರೆ ಅಭ್ಯರ್ಥಿಗಳ ಘೋಷಣೆ ಸದ್ಯಕ್ಕಿಲ್ಲ,
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಯಾರ್ಯಾರು ಅಭ್ಯರ್ಥಿಗಳಾಗಲಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವ ಸಾಮರ್ಥ್ಯವಿದೆ. ಕ್ಷೇತ್ರದಲ್ಲಿ ಎರಡಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದರೆ ಯಾರಿಗೆ ಟಿಕೆಟ್ ಕೊಟ್ಟರೆ ಗೆದ್ದುಬರಬಹುದು, ಟಿಕೆಟ್ ಸಿಗದೆ ಬಂಡಾಯ ಎದ್ದರೆ, ಅದನ್ನು ಯಾವ ರೀತಿ ಸರಿಪಡಿಸಬಹುದು ಅನ್ನುವ ಬಗ್ಗೆ ಮಹತ್ವದ ಕಾಂಗ್ರೆಸ್ ಚುನಾವಣಾ ಸಮಿತಿಯ ಪ್ರಮುಖರ ಸಭೆ ಅಧಿಕೃತವಾಗಿ ಇಂದಿನಿಂದ ಆರಂಭವಾಗಲಿದೆ.
ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಸೋಲುವ ಸಾಧ್ಯತೆ ಇರುವ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿ ಯಾರಿಗೆ ಕೊಟ್ಟರೆ ಗೆದ್ದು ಬರಬಹುದು ಅನ್ನುವ ಚರ್ಚೆಗಳು ಕೂಡಾ ನಡೆಯಲಿದೆ. ಕೆಪಿಸಿಸಿ ವತಿಯಿಂದ ಗುಪ್ತವಾಗಿ ನಡೆಸಿದ ಅಭ್ಯರ್ಥಿಗಳ ಸರ್ವೇ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ. ಇನ್ನು ಕೆಲವು ದಿನಗಳ ಕಾಲ ರಾಜ್ಯದ ಚುನಾವಣಾ ಉಸ್ತುವಾರಿ ಸಮಿತಿಗಳ ಸಭೆ ನಡೆಯಲಿದ್ದು, ಆ ಬಳಿಕವಷ್ಟೇ ಅಭ್ಯರ್ಥಿಗಳ ಘೋಷಣೆಯಾಗಲಿದೆ. ಈವರೆಗೂ ಅಲ್ಲಲ್ಲಿ ಕೇಳಿ ಬರುತ್ತಿದ್ದ ಅಭ್ಯರ್ಥಿಗಳು ಸಂಭಾವ್ಯ ಅಭ್ಯರ್ಥಿಗಳೇ ಹೊರತು ಅಧಿಕೃತವಲ್ಲ. ಕಾಂಗ್ರೆಸ್ ನಲ್ಲಿ ಒಂದು ಮಾತಿದೆ. ಕೈಯಲ್ಲಿ ಬಿ.ಫಾರಂ ಸಿಗುವವರೆಗೂ ಅಭ್ಯರ್ಥಿಗಳಿಗೆ ನಿದ್ದೆ ಬರುವುದು ಕಷ್ಟ. ಯಾಕೆಂದರೆ ಅಭ್ಯರ್ಥಿ ಘೋಷಣೆ ಯಾರಿಗೋ.? ಬಿ.ಫಾರಂ ಇನ್ಯಾರಿಗೋ ಸಿಕ್ಕಿದ ಉಧಾಹರಣೆಗಳು ಇವೆ.

ಇತ್ತ ರಾಜ್ಯದ ಹಲವು ಭಾಗಗಳಲ್ಲಿ ಟಿಕೆಟ್ ಆಕಾಂಕ್ಷಿಗಳು ನಾನಾ ತರದ ಕಸರತ್ತು ನಡೆಸುತ್ತಿದ್ದಾರೆಯೇ ಹೊರತು ಟಿಕೆಟ್ ನನಗೆ ಫೈನಲ್ ಆಗಿದೆ ಎಂದು ಘಂಟಾಘೋಷವಾಗಿ ಸಾರಲು ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದಿಂದ ಈ ವರೆಗೂ ಅಭ್ಯರ್ಥಿ ಯಾರಾಗಬೇಕು ಅನ್ನುವ ಸಭೆಯೇ ನಡೆದಿಲ್ಲ. ಕೇವಲ ಟಿಕೆಟ್ ಗೆ ಅರ್ಜಿ ಹಾಕಲು ಮಾತ್ರ ಹೇಳಿತ್ತು. ಆದರೆ ಇಂದಿನಿಂದ ಟಿಕೆಟ್ ಹಂಚಿಕೆಯ ಬಗ್ಗೆ ಮಹತ್ವದ ಸಭೆ ನಡೆಯಲಿದ್ದು, ಮುಂದಿನ ಎರಡು ವಾರಗಳ ಅಂತರದಲ್ಲಿ ಬಹುತೇಕ ಅಭ್ಯರ್ಥಿಗಳು ಫೈನಲ್ ಆಗಲಿದ್ದಾರೆ ಅನ್ನುವ ಮಾಹಿತಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಿಂದ ಕೇಳಿ ಬರುತ್ತಿದೆ.
ಮತ್ತೊಂದು ಮೂಲದ ಪ್ರಕಾರ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆದರೂ, ಒಂದಕ್ಕಿಂತ ಹೆಚ್ಚು ಆಕಾಂಕ್ಷಿ ಇಲ್ಲದ, ಹಾಲಿ ಶಾಸಕರ ಕ್ಷೇತ್ರದ ಟಿಕೆಟ್ ಘೋಷಣೆ ಫೆಬ್ರವರಿ ಕೊನೆ ವಾರದಲ್ಲಿ ನಡೆಯಲಿದೆ ಅನ್ನುವ ಮಾಹಿತಿ ಇದೆ. ಮೂರಕ್ಕಿಂತ ಹೆಚ್ಚು ಆಕಾಂಕ್ಷಿ ಇರುವ, ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇರುವ ಕ್ಷೇತ್ರದ ಟಿಕೆಟ್ ಘೋಷಣೆ ಮುಂದೂಡುವ ಸಾಧ್ಯತೆ ಹೆಚ್ಚಿದೆ ಅನ್ನುವುದು ಇದೀಗ ತಿಳಿದು ಬಂದಿದೆ.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಶತಾಯಗತಾಯ ಅಧಿಕಾರಕ್ಕೆ ಏರಬೇಕು ಅನ್ನುವ ದೃಢಸಂಕಲ್ಪ ಮಾಡಿರುವುದರಿಂದ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಪ್ಪು ಹೆಜ್ಜೆ ಇಡುವುದು ಕಷ್ಟ ಅನ್ನಲಾಗುತ್ತಿದೆ. ಯಾರಿಗೆ ಗೆಲ್ಲಲು ಸಾಧ್ಯವಿದೆಯೋ ಅಂತಹವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ ಅನ್ನಲಾಗುತ್ತಿದೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಮೊದಲ ಪಟ್ಟಿಯಲ್ಲಿ ಘೋಷಣೆಯಾಗಲಿದೆ. ಆನಂತರ ಪುತ್ತೂರು, ಸುಳ್ಯ, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಲಿದೆ ಅನ್ನುವ ಮಾಹಿತಿ ಇದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆ ಸವಾಲಾಗಿರುವ ಮಂಗಳೂರು ಉತ್ತರ, ಮೂಡಬಿದ್ರೆ ಕ್ಷೇತ್ರಗಳ ಅಭ್ಯರ್ಥಿಗಳು ಯಾರೆಂದು ಕುತೂಹಲ ಕೊನೆಯವರೆಗೂ ಇರುವ ಸಾಧ್ಯತೆ ಇದ್ದು, ಅಂತಿಮ ಪಟ್ಟಿ ಬಿಡುಗಡೆಯಾಗುವವರೆಗೂ ಕಾಯಬೇಕಾಗಿ ಬರಬಹುದು ಅನ್ನಲಾಗುತ್ತಿದೆ.
