ಬಿಜೆಪಿ ಪಕ್ಷದ ಸದಸ್ಯರು ಭೃಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುತ್ತಿದ್ದಾರೆ: ವಸಂತ ಬಂಗೇರ
ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಭೃಷ್ಟಾಚಾರ ನಡೆದಿದ್ದು , ಭೃಷ್ಟಾಚಾರಿಗಳ ವಿರುದ್ಧ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಎಚ್ಚರಿಕೆ ನೀಡಿದರು.ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭೃಷ್ಟಾಚಾರ ನಡೆದ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಬಳಿಕ ಪಂಚಾಯತ್ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬಿಜೆಪಿ ಆಡಳಿತದಲ್ಲಿ ಗ್ರಾಮ ಪಂಚಾಯತ್ ನಿಂದ ಹಿಡಿದು ರಾಜ್ಯ ಸರ್ಕಾರದ ವರೆಗೂ ವ್ಯಾಪಕವಾಗಿ ಭೃಷ್ಟಾಚಾರ ನಡೆಯುತ್ತಿದ್ದು , ಎಲ್ಲಾ ಕಡೆಗಳಲ್ಲೂ ನುಂಗಣ್ಣಗಳೆ ತುಂಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದೊಂದು ಕಾಮಗಾರಿಗೆ ಎರಡೆರಡು ಬಿಲ್ಲು ಮಾಡಲಾಗಿದೆ , ಸಾರ್ವಜನಿಕರು ನಡೆಸಿದ ಕಾಮಗಾರಿಗೆ ಪಂಚಾಯತ್ ಬಿಲ್ ಮಾಡಿರುವುದು , ಪ.ಜಾತಿ/ಪಂಗಡಗಳ ಅನುದಾನ ದುರುಪಯೋಗ , ಸೋಲಾರ್ ನೀಡದೆ ವಂಚನೆ , ವಿಕಲಚೇತನರ ಹೆಸರಿನಲ್ಲೂ ಭೃಷ್ಟಾಚಾರ ಸೇರಿದಂತೆ ಹತ್ತಾರು ಕಾಮಗಾರಿಗಳಲ್ಲಿ ನಕಲಿ ಬಿಲ್ ಮಾಡಿ ವ್ಯಾಪಕವಾಗಿ ಭೃಷ್ಟಾಚಾರ ನಡೆಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಪರಿಶಿಷ್ಟ ಜಾತಿ/ಪಂಗಡದ ಅನುದಾನ ದುರುಪಯೋಗ ಮಾಡಿದ ಬಗ್ಗೆ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು ನನ್ನ ಶಾಸಕತ್ವದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಭೃಷ್ಟಾಚಾರ ನಡೆದಿಲ್ಲ ಎಂದ ಅವರು ಶಾಸಕ ಹರೀಶ್ ಪೂಂಜಾ ಮತ್ತು ಅವರ ಬಿಜೆಪಿ ಪಕ್ಷದ ಸದಸ್ಯರು ಭೃಷ್ಟಾಚಾರದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ ಬಿಜೆಪಿ ಮಂತ್ರಿಗಳಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯರು ಬಡವರ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷ ಸುಲಿಗೆಕೋರರ ಪಕ್ಷವೆಂದು ಆರೋಪಿಸಿದ ಅವರು ಒಂದು ಪಂಚಾಯತ್ ನಲ್ಲಿ 20 ಲಕ್ಷಕ್ಕೂ ಹೆಚ್ಚು ರೂಪಾಯಿ ಭೃಷ್ಟಾಚಾರ ನಡೆದರೆ ತಾಲೂಕಿನ ಇನ್ನಿತರ ಬಿಜೆಪಿ ಆಡಳಿತದ ಪಂಚಾಯತ್ ಗಳಲ್ಲಿ ಎಷ್ಟು ಭೃಷ್ಟಾಚಾರ ನಡೆದಿರಬಹುದು ಎಂದು ಪ್ರಶ್ನಿಸಿದರು.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿವಿಧ ಭೃಷ್ಟಾಚಾರಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸವಿತಾ ಅವರನ್ನು ಮಾಜಿ ಶಾಸಕ ವಸಂತ ಬಂಗೇರರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರು ತಮ್ಮ ವಾರ್ಡ್ ನ ಸಮಸ್ಯೆಗಳನ್ನು ಮುಂದಿಟ್ಟು ಪಂಚಾಯತ್ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.
