ಅಮೆರಿಕದಲ್ಲಿ ಮತ್ತೊಂದು ದೊಡ್ಡ ಬ್ಯಾಂಕಿಂಗ್ ಬಿಕ್ಕಟ್ಟು ಸಂಭವಿಸಿದ್ದು, ಪ್ರಮುಖ ಬ್ಯಾಂಕ್ ಎನಿಸಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಲು ಆದೇಶಿಸಲಾಗಿದೆ.ಕ್ಯಾಲಿಫೋರ್ನಿಯಾದ ಬ್ಯಾಂಕಿಂಗ್ ನಿಯಂತ್ರಕರು ಬ್ಯಾಂಕ್ ಮುಚ್ಚಿದ್ದಾರೆ. ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ಅನ್ನು ಅದರ ಸ್ವತ್ತುಗಳ ರಿಸೀವರ್ ಆಗಿ ನೇಮಕ ಮಾಡಲಾಗಿದೆ. ಗ್ರಾಹಕರ ಹಣವನ್ನು ಸುರಕ್ಷಿತವಾಗಿಡುವ ಜವಾಬ್ದಾರಿ ನೀಡಲಾಗಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಸುಮಾರು 200 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಅಮೆರಿಕದಲ್ಲಿ 16ನೇ ಅತಿದೊಡ್ಡ ಸಾಲದಾತ ಬ್ಯಾಂಕ್ ಆಗಿದೆ. ಅದರ ಆರ್ಥಿಕ ಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತು.ಮಾ.8 ರಂದು, ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಬ್ಯಾಂಕ್ ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಹೆಚ್ಚಿಸಲು $ 2.5 ಬಿಲಿಯನ್ ಸಂಗ್ರಹಿಸುವುದಾಗಿ ಹೇಳಿತ್ತು. ಮಾ.10ರ ಬೆಳಗ್ಗೆ ಎಸ್‌ವಿಬಿ ಷೇರುಗಳು ಶೇ.70 ರಷ್ಟು ಕುಸಿದವು. ಬಂಡವಾಳವನ್ನು ಸಂಗ್ರಹಿಸಲು ಎಸ್‌ವಿಬಿಯ ಪ್ರಯತ್ನಗಳು ವಿಫಲವಾಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಎಸ್‍ವಿಬಿ ಮಾತೃ ಸಂಸ್ಥೆಯಾದ ಎಸ್‍ವಿಬಿ ಫೈನಾನ್ಸಿಯಲ್ ಗ್ರೂಪ್, ತನ್ನ ಭಾಗವಾಗಿರುವ 21 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಬಾಂಡ್ಸ್ ಮತ್ತು ಡಿಬೆಂಚರ್ಸ್ ಅನ್ನು ಮಾರಾಟ ಮಾಡುವುದಾಗಿ ಘೋಷಿಸಿದ್ದರಿಂದ ಹೂಡಿಕೆದಾರರು ಮತ್ತು ಠೇವಣಿದಾರರಲ್ಲಿ ಆತಂಕ ಹುಟ್ಟಿಸಿತ್ತು. ಆತಂಕದಿಂದ ಸಿಲಿಕಾನ್ ವ್ಯಾಲಿ ಬ್ಯಾಂಕ್‍ನ ಗ್ರಾಹಕರು ಭಾರೀ ಪ್ರಮಾಣದ ಠೇವಣಿ ಹಿಂಪಡೆದಿದ್ದು, ಸ್ಟಾರ್ಟ್‍ಅಪ್ ಇಂಡಸ್ಟ್ರಿ ಮೇಲೆ ದೊಡ್ಡ ಹೊಡೆತ ಬಿದ್ದಿದೆ.
