125 ಅಭ್ಯರ್ಥಿಗಳ ಹೆಸರು ಅಂತಿಮ, ಕೆಲವು ಕ್ಷೇತ್ರ ಹೊರತುಪಡಿಸಿ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತ.

ರಾಜ್ಯ

ಹೊಸ ಮುಖಗಳಿಗೆ ಮಣೆ,ಇದು ಟಿಕೆಟ್‌ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹಂತದಲ್ಲಿ 123 ರಿಂದ 125 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಆದರೆ ಯಾರಿಗೆ ಎಂಬುದು ಮಾತ್ರ ನಿಗೂಢವಾಗಿದೆ. ಅಭ್ಯರ್ಥಿಗಳ ಪಟ್ಟಿ ಅಧಿಕೃತವಾಗಿ ಬಿಡುಗಡೆ ಆಗುವುದು ವಿಳಂಬವಾಗಲಿದೆ. ಇದು ಟಿಕೆಟ್‌ ಆಕಾಂಕ್ಷಿಗಳ ಎದೆ ಬಡಿತ ಹೆಚ್ಚಿಸಿದೆ.

ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿಯು 3 ಗಂಟೆಗೂ ಹೆಚ್ಚು ಕಾಲ ಸುದೀರ್ಘ‌ ಸಭೆ ನಡೆಸಿ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡಿದ್ದ ಅಭ್ಯರ್ಥಿಗಳ ಪಟ್ಟಿ ಕುರಿತು ವ್ಯಾಪಕ ಚರ್ಚೆ ನಡೆಸಿತು. ಕಾಂಗ್ರೆಸ್‌ನ 69 ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಹಾಲಿಗಳಿಗೂ ಟಿಕೆಟ್‌ ಖಾತರಿಯಾಗಿದೆ. ಹೊಸಕೋಟೆ ಪಕ್ಷೇತರ ಶಾಸಕ ಶರತ್‌ ಬಚ್ಚೇಗೌಡ, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್‌ಗೆ ಮಹದೇವಪುರದಿಂದ ಟಿಕೆಟ್‌ ಖಚಿತಪಡಿಸಲಾಗಿದೆ.ಇದರ ಜತೆಗೆ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಸಿಂಗಲ್‌ ನೇಮ್‌ ಶಿಫಾರಸು ಆಗಿದ್ದ 60 ರಿಂದ 65 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆಯೂ ವ್ಯಾಪಕ ಚರ್ಚೆ ನಡೆಸಿದ ಬಳಿಕ ಪಟ್ಟಿಗೆ ಸಮ್ಮತಿ ನೀಡಲಾಗಿದೆ.

ಉಳಿದ 100 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಕೈಗೆತ್ತಿಗೊಳ್ಳಲು ತೀರ್ಮಾನಿಸಲಾಗಿದೆ. ರಾಹುಲ್‌ಗಾಂಧಿ ಅವರು ಇದೇ 20 ರಂದು ಬೆಳಗಾವಿಗೆ ಭೇಟಿ ನೀಡುತ್ತಿರುವುದರಿಂದ ಆ ಕಾರ್ಯಕ್ರಮದ ಬಳಿಕ ಇಲ್ಲವೇ ಯುಗಾದಿ ಹಬ್ಬದ ನಂತರ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಖರ್ಗೆ, ರಾಹುಲ್‌ ಗಾಂಧಿ ಅವರ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುಜೇìವಾಲ, ಕೆ.ಸಿ.ವೇಣುಗೋಪಾಲ್‌, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಅವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲೂ ಕೆಲವೊಂದು ಕಡೆ ಜೆಡಿಎಸ್‌, ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವುದರ ಬಗ್ಗೆಯೂ ಚರ್ಚೆ ನಡೆಸಿದೆ. ಅಂಥ ಕ್ಷೇತ್ರಗಳಲ್ಲಿ ಈ ಹಂತದಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಹೊರಟರೆ ಹಿನ್ನಡೆ ಆಗಬಹುದೆಂಬ ಅತಂಕವೂ ವ್ಯಕ್ತವಾಗಿದೆ. ಜತೆಗೆ ಈಗಾಗಲೇ ಹಲವು ಕಾರಣಗಳಿಂದ ಟಿಕೆಟ್‌ ಇಲ್ಲವೆಂದು ಸೂಚ್ಯವಾಗಿ ಹೇಳಿರುವ ಐದಾರು ಶಾಸಕರ ಕ್ಷೇತ್ರಗಳಿಗೆ ಹೊಸ ಮುಖಗಳನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.