ದೇಶದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಬದಲಿಸಿ, ಆರು ತಿಂಗಳಲ್ಲಿ ಹೊಸ ತಂತ್ರಜ್ಞಾನವನ್ನೊಳಗೊಂಡ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಈ ಹೊಸ ವ್ಯವಸ್ಥೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಹೆದ್ದಾರಿಗಳಲ್ಲಿ ಪ್ರಯಾಣಿಸಿದ ನಿಖರ ದೂರಕ್ಕೆ ಶುಲ್ಕವನ್ನು ವಿಧಿಸುವ ಗುರಿಯನ್ನು ಹೊಂದಿದೆ ಎಂದೂ ಅವರು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್ಎಐ) ಟೋಲ್‌ನಿಂದ ಸಂಗ್ರಹವಾಗುವ ಆದಾಯವು ₹.40,೦೦೦ ಕೋಟಿಯಷ್ಟು ಇದ್ದು, ಇನ್ನು 2–3 ವರ್ಷಗಳಲ್ಲಿ ಈ ಪ್ರಮಾಣವು ₹1.40 ಲಕ್ಷ ಕೋಟಿಗಳಿಗೆ ಏರಿಕೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ನಿರ್ಮಾಣ ವೆಚ್ಚವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯವು, ವಾಹನಗಳನ್ನು ನಿಲ್ಲಿಸದೆ ಸ್ವಯಂಚಾಲಿತ ಟೋಲ್ ಸಂಗ್ರಹವನ್ನು ಸಕ್ರಿಯಗೊಳಿಸಲು, ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸ್ವಯಂಚಾಲಿತವಾಗಿ (ಆಟೊಮ್ಯಾಟಿಕ್) ಗುರುತಿಸುವ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರಲಿದೆ.2018–19ರಲ್ಲಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಕಾಯುವ ಸರಾಸರಿ ಅವಧಿಯು 8 ನಿಮಿಷಗಳಾಗಿತ್ತು. 2020–21 ಮತ್ತು 2021–22ರಲ್ಲಿ ಫಾಸ್ಟ್ ಟ್ಯಾಗ್ ಪರಿಚಯಿಸಿದ ಬಳಿಕ ವಾಹನಗಳು ಕಾಯುವ ಸರಾಸರಿ ಅವಧಿಯು 47 ಸೆಕೆಂಡ್‌ಗಳಿಗೆ ಇಳಿದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.