ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಜನತಾ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಲಾದ ತಡೆಗೋಡೆಯೊಂದು ಮೊದಲ ಮಳೆಗೆ ಕುಸಿದು ಬಿದ್ದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಾಮಗಾರಿಗಳಲ್ಲಿ ಭೃಷ್ಟಾಚಾರದ ಬಗ್ಗೆ ವ್ಯಾಪಕ ಟೀಕೆಯ ನಡುವೆಯೇ ವರ್ಷದ ಮೊದಲ ಮಳೆಗೆ ತಡೆಗೋಡೆ ಸಂಪೂರ್ಣ ನಾಶಗೊಂಡಿದೆ. ತಡೆಗೋಡೆ ಸ್ಥಳೀಯೊಬ್ಬರ ಮನೆಯ ಅಡಿಪಾಯಕ್ಕೆ ಹಾನಿ ಉಂಟು ಮಾಡಿದೆ. ಶುಕ್ರವಾರ ರಾತ್ರಿಯೇ ತಡೆಗೋಡೆಯ ಅವಶೇಷಗಳನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅವೈಜ್ಞಾನಿಕವಾಗಿ , ಕಳಪೆ ಮಟ್ಟದ ಕಾಮಗಾರಿಗಳನ್ನು ನಡೆಸಿದ ಕಾರಣ ತಡೆಗೋಡೆ ಬುಡಸಮೇತ ಬಿದ್ದಿದೆ. ಇದರಿಂದಾಗಿ ರಸ್ತೆಯೂ ಅಪಾಯದಲ್ಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನೂತನ ಗ್ರಾಮ ಪಂಚಾಯತ್ ಕಟ್ಟಡದ ಹಿಂಭಾಗದಲ್ಲಿಯೂ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ಅದೂ ಕುಸಿಯಬಹುದು ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.