ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಕಮಾಲ್ ಮಾಡಿದೆ. 135 ರಷ್ಟು ಸ್ಥಾನ ಬಾಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಹಿಂದುತ್ವದ ಪ್ರಬಲ ಕೋಟೆಯಾಗಿರುವ ಚಿಕ್ಕಮಗಳೂರು,ಕೊಡಗಿನಲ್ಲೂ ಕಾಂಗ್ರೆಸ್ ವಿಜಯ ದುಂದುಭಿ ಬಾರಿಸಿದೆ.ಆದರೆ ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ತಲುಪಿದೆ. ಉಡುಪಿಯಲ್ಲಂತೂ ಬಿಜೆಪಿ 5 ರಲ್ಲಿ 5 ನ್ನು ಕ್ವೀನ್ ಸ್ವಿಪ್ ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯು.ಟಿ.ಖಾದರ್ ಭರ್ಜರಿ ಜಯಭೇರಿ ಬಾರಿಸಿದರೆ, ಪುತ್ತೂರಿನಲ್ಲಿ ಅಶೋಕ್ ರೈ ಪ್ರಯಾಸದ ಗೆಲುವು ಕಂಡಿದ್ದಾರೆ. ಅಲ್ಲಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಅಲ್ಲಿ ಪುತ್ತಿಲ ಸ್ಪರ್ದಿಸದೇ ಇದ್ದರೆ ಅಶೋಕ್ ರೈ ಗೆಲುವು ಗಗನ ಕುಸುಮವಾಗಿತ್ತು. ಆದರೆ ಪುತ್ತೂರಿನ ಗೆಲುವನ್ನು ಕಾಂಗ್ರೆಸ್ ಸಾಧನೆ ಎಂದು ಅಳೆಯಲು ಸಾಧ್ಯವಿಲ್ಲ.
ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲಲು ಹಿಂದುತ್ವ ಕಾರಣ ಅಂದರೆ ತಪ್ಪಲ್ಲ. ಅದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಹಿಂದೂ ನಾಯಕರು ಸಾವಿರಾರು ಸಂಖ್ಯೆಯಲ್ಲಿ ಇದ್ದರೂ ಅವರ ಫಾಲೋವರ್ಸ್ ಯಾರೂ ಹಿಂದುಗಳಿಲ್ಲ ಅನ್ನುವುದು ಸತ್ಯ. ಅವರ ಹಿಂದೆ ಮುಂದೆ ಬ್ಯಾರಿಗಳೇ ಇರುವುದೇ ಹೊರತು,ತಮ್ಮ,ತಮ್ಮ ಸಮುದಾಯದ ಹತ್ತು ಜನ ಕಾರ್ಯಕರ್ತರನ್ನು ಸೃಷ್ಟಿಸಲು ಅವರಿಗೆ ಸಾಧ್ಯವಾಗಿಲ್ಲ.ಎಲ್ಲಾ ಲೀಡರ್ ಗಳ ಹಿಂದುಗಡೆ ಹತ್ತು ಬ್ಯಾರಿಗಳ ಮಕ್ಕಳೇ ಕಾಣುವುದು.ಬ್ಯಾರಿಗಳಿಗೆ ಇವರು ಲೀಡರ್.! ಇದು ಕೂಡ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಅಂದರೂ ತಪ್ಪಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸಲ್ಮಾನರು ಹಾಗೂ ಬಿಲ್ಲವರ ಸಂಖ್ಯೆಯೇ ಹೆಚ್ಚು. ಮುಸಲ್ಮಾನರು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡರೆ, ಬಿಲ್ಲವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಸಂಖ್ಯೆಯ ಬಿಲ್ಲವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಅವರನ್ನು ನಂಬಿದ ಕಾರ್ಯಕರ್ತರಿಲ್ಲ. ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷದಲ್ಲಿರುವ ಅಭ್ಯರ್ಥಿಗಳು ಬಂಟ, ಬಿಲ್ಲವ ಅನ್ನುವುದನ್ನು ನೋಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ. ಬಿಲ್ಲವರು ಕೂಡ ಬಹುಸಂಖ್ಯಾತ ಮತಗಳನ್ನು ಬಿಜೆಪಿ ಗೆ ನೀಡುತ್ತಾರೆ. ಆದರೆ ಬಿಲ್ಲವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ನಮಗೆ ಕನಿಷ್ಠ 3 ಬಿಲ್ಲವ ಅಭ್ಯರ್ಥಿ ನೀಡಬೇಕೆಂದು ಚುನಾವಣೆ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಆಗ್ರಹಿಸಿದ್ದುಂಟು. ಆದರೆ ಕಾಂಗ್ರೆಸ್ ಬೆಳ್ತಂಗಡಿಯಲ್ಲಿ ಯುವ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.ಅಲ್ಲಿ ಸುಮಾರು 18,216 ಮತಗಳ ಅಂತರದಿಂದ ರಕ್ಷಿತ್ ಶಿವರಾಂನನ್ನು ಸೋಲಿಸಿದರು.ಆದರೆ ಅತೀ ಹೆಚ್ಚು ಬಿಲ್ಲವರಿರುವ ಬೆಳ್ತಂಗಡಿ ಕ್ಷೇತ್ರದ ಬಿಲ್ಲವ ಮತ ಎಲ್ಲಿ ಹಾರಿದವು.?
ಆದರೆ ಅಲ್ಲಿ ಮುಸ್ಲಿಂ ಸಮುದಾಯ ಎಸ್ಡಿಫಿಐ, ಜೆಡಿಎಸ್ ಗೆ ಮತ ನೀಡದೆ ಕಾಂಗ್ರೆಸ್ ಪಕ್ಷದ ಬಿಲ್ಲವ ಅಭ್ಯರ್ಥಿಯ ಪರ ಮತ ಚಲಾಯಿಸಿತ್ತು. ಆದರೆ ಬಿಲ್ಲವ ಸಮುದಾಯ ಅಲ್ಲಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿಯನ್ನು ಅಪ್ಪಿ ಹಿಡಿಯಿತು.ಕನಿಷ್ಠ ಶೇಕಡಾ 30 ರಷ್ಟು ಬಿಲ್ಲವರು ತಮ್ಮ ಸಮುದಾಯದ ಯುವಕನಿಗೆ ಮತ ಚಲಾಯಿಸಿದ್ದರೆ ಅಲ್ಲಿ ಫಲಿತಾಂಶವೇ ಕಾಂಗ್ರೆಸ್ ಪರ ಆಗುತ್ತಿತ್ತು. ತಮ್ಮದೇ ಸಮುದಾಯದ ಯುವಕ,ಬಡವರ ಬಂಧುಗೆ ಬಿಲ್ಲವರೇ ಮತ ಹಾಕದಿದ್ದರೆ ಇನ್ನೂ ಕಾಂಗ್ರೆಸ್ ಪಕ್ಷದ ಬಂಟ, ಮುಸ್ಲಿಂ, ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆ ಮತ ಹಾಕುವರೇ?
ಬೆಳ್ತಂಗಡಿಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ರ ಅತ್ಯಂತ ಹತ್ತಿರದ ಸಂಬಂಧಿಕ. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರ ಸಂಬಂಧಿಕರೂ ಹೌದು. ಮೇಲಾಗಿ ಹರೀಶ್ ಕುಮಾರ್ ರವರ ಸ್ವ ಕ್ಷೇತ್ರವೂ ಹೌದು. ಸ್ವ ಕ್ಷೇತ್ರದಲ್ಲಿ ಹರೀಶ್ ಕುಮಾರ್ ತಮ್ಮ ಸಮುದಾಯದ ಯುವಕನನ್ನು ಗೆಲ್ಲಿಸಲಾಗದೇ ಇದ್ದರೆ ಅವರು ಜಿಲ್ಲಾಧ್ಯಕ್ಷ ಹುದ್ದೆಯಲ್ಲಿ ಇದ್ದು ಏನು ಪ್ರಯೋಜನ? ಕಾಂಗ್ರೆಸ್ ಗೆಲುವಿಗೆ ಒಂದಿಷ್ಟು ಶ್ರಮ ಪಡದ ಹರೀಶ್ ಕುಮಾರ್ ರಿಗೆ ಎಂಎಲ್ಸಿ ಸ್ಥಾನ. ಬ್ಯಾರಿಗಳು ಕೇವಲ ಓಟು ಹಾಕುವ ಮೆಷಿನ್ನಾ? ಜಿಲ್ಲಾಧ್ಯಕ್ಷ, ಎಂಎಲ್ಸಿ ಹುದ್ದೆಗಳು ಬಂಟ, ಬಿಲ್ಲವ ಸಮುದಾಯಕ್ಕಾ?
ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗದಿದ್ದರೆ, ಸೋಲಿನ ಹೊಣೆ ಹೊತ್ತು ಹರೀಶ್ ಕುಮಾರ್ ಜಿಲ್ಲಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸದಿದ್ದರೆ ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ವೈಟ್ ಕಾಲರ್ ಪುಡಾರಿಗಳು, ನಾಯಕರ ಹಿಂಬಾಲಕರನ್ನು ದೂರವಿಟ್ಟು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕರಾಗಿ ದುಡಿಯುವವರಿಗೆ ಬೆಲೆ ನೀಡದೇ ಇದ್ದರೆ ಕಾಂಗ್ರೆಸ್ ಕರಾವಳಿಯಲ್ಲಿ ಎದ್ದೇಳುವುದು ಕಷ್ಟ. ಸಮರ್ಥ, ಪ್ರಾಮಾಣಿಕರನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಜಿಲ್ಲಾ, ಬ್ಲಾಕ್ ಮಟ್ಟದಲ್ಲಿ ತಂಡ ರಚಿಸಿ ಕಾರ್ಯಪ್ರವೃತ್ತರಾದರೆ ಮಾತ್ರ ಗೆಲುವು ಸಾಧ್ಯವಾಗಬಹುದು. ಇಲ್ಲದಿದ್ದಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ ಬರಬಹುದು.